ಕಡಬ: ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಸಾಮ್ಯದ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಹೆಚ್ಚುವರಿ ದರ ವಸೂಲು ಮಾಡುತ್ತಿರುವ ಬಗ್ಗೆ ಕೆಲ ದಿನಗಳಿಂದ ಮದ್ಯ ಖರೀದಿ ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಸಾರ್ವಜನಿಕರ ದೂರು ಆಧರಿಸಿ ಮಾಧ್ಯಮ ಪ್ರತಿನಿಧಿಯೊಬ್ಬರು ಮೊದಲು ಮದ್ಯ ಖರೀದಿ ಮಾಡಿದ್ದರು.ಈ ವೇಳೆ ಎಂಎಸ್ಐಲ್ ಸಿಬ್ಬಂದಿ ಅಧಿಕ ದರ ವಸೂಲಿ ಮಾಡಿದ್ದರು. ಈ ಬಗ್ಗೆ ಅಬಕಾರಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ನಂತರದಲ್ಲಿ ಸ್ವಲ್ಪ ಸಮಯದ ಬಳಿಕ ಮತ್ತೊಮ್ಮೆ ಮದ್ಯ ಖರೀದಿಸಿ ಬಿಲ್ ಕೇಳಿ ಪಡೆದಿದ್ದರು.ಈ ಸಮಯದಲ್ಲಿ ನಿಗದಿತ ದರ ನಮೂದಿಸಿದ ಬಿಲ್ ನೀಡಲಾಯಿತು.
ಆದರೆ ಮೊದಲ ಖರೀದಿಯ ಬಿಲ್ ಕೇಳಿದಾಗ ವಸೂಲಿ ಮಾಡಿದ ಹಣಕ್ಕಿಂತ ಕಡಿಮೆ ನಮೂದಿಸಿ ಕೊಡಲಾಯಿತು.ಮಾತ್ರವಲ್ಲದೆ ಇಲ್ಲಿ ಮದ್ಯ ಖರೀದಿ ಮಾಡುವಾಗ ಬಿಲ್ ನೀಡಬೇಕೆಂಬ ನಿಯಮ ಇದ್ದರೂ ಬಿಲ್ ನೀಡಲಾಗುತ್ತಿಲ್ಲ.
ಪತ್ರಕರ್ತರು ಈ ವ್ಯತ್ಯಾಸವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿದ್ದರು. ಕೂಡಲೇ ಅಬಕಾರಿ ನಿರೀಕ್ಷಕಿ ಸುಜಾತ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿವರಣೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.
ಅಲ್ಲದೆ , ತನಿಖೆ ಮುಂದುವರಿಸಿದ್ದಾರೆ.
ಎಂಎಸ್ಐಲ್ ನಲ್ಲಿ ದಾಳಿಯಾಗುತ್ತಿದ್ದಂತೆ ಕಡಬದಲ್ಲಿನ ಇತರ ಮದ್ಯದಂಗಡಿಯವರೂ ಅಲರ್ಟ್ ಆಗಿರುವುದು ಕಂಡುಬಂದಿದೆ.