ತುಮಕೂರು: ನಾನು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸೇರಿ ರಾಜ್ಯದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದೆವು. ರಾಜಣ್ಣ ಅವರಿಗೆ ಬಿಜೆಪಿಗೆ ಸೇರಲು ಆಹ್ವಾನ ನೀಡಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೋಳಿ ಹೇಳಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿ,
ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಗೆ ಸೇರುವಂತೆ ಕೆ.ಎನ್ ರಾಜಣ್ಣಗೆ ಕರೆ ನೀಡಿದ್ದೇವೆ. ಆದರೂ ರಾಜಣ್ಣ ಇನ್ನು ಯಾಕೋ ಅಲ್ಲೇ ಇದ್ದಾರೆ ಎಂದರು.
ಈ ಹಿಂದೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಇದ್ದ ಕಾಲದಲ್ಲಿದ್ದ ಕಾಂಗ್ರೆಸ್ ಈಗ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರಿಗೆ ಬೆಲೆ ಇಲ್ಲ. ಪಕ್ಷದಲ್ಲಿ ಯಾವುದೇ ಪ್ರಯೋಜನ ಇಲ್ಲ ಹಾಗಾಗಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬನ್ನಿ ಎಂದರು ಕೆ.ಎನ್. ರಾಜಣ್ಣ ಬಿಜೆಪಿಗೆ ಇನ್ನು ಬರುತ್ತಿಲ್ಲ ಎಂದು ಸಚಿವರು ಹೇಳಿದರು.
ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಕೆ.ಎನ್. ರಾಜಣ್ಣ ಅವರು ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ತೀರ್ಮಾನ ತೆಗೆದುಕೊಂಡರೆ ಒಳ್ಳೆಯದಾಗಲಿದೆ ಎಂದರು.
ಹುಟ್ಟಿನಿಂದಲೂ ನಾನು ಕಾಂಗ್ರೆಸ್ಸಿಗ. ಪಕ್ಷ ಕಡೆಗಣಿಸಿದಾಗಲೇ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೇನೆ. ಸರ್ಕಾರವನ್ನೆ ಕೆಡವಿದ್ದೇವೆ ಆದರೆ ರಾಜಣ್ಣ ಅವರು ಬಿಜೆಪಿಗೆ ಬರುತ್ತಿಲ್ಲ. ಆಗಲೂ ಜೊತೆಗಿದ್ದೆವು. ಈಗಲೂ ಜೊತೆಗಿದ್ದೇವೆ ಬಿಜೆಪಿಗೆ ಬನ್ನಿ ಎಂದರು.
ಕೆ ಎನ್ ರಾಜಣ್ಣ ಮಾತನಾಡಿ, ನನ್ನ ಬಗ್ಗೆ ನಿಮಗೆನೂ ಗೊತ್ತಿದೆ ಯಾವುದರಲ್ಲಿ ಕೈವಾಡ ಇದೆ, ಯಾವುದರಲ್ಲಿ ಇಲ್ಲಾ ಅಂತಾ ನಾನು ಯಾವುದರಲ್ಲೂ ಮುಚ್ಚು ಮರೆ ಮಾಡೊದಿಲ್ಲ ಎಂದು ಬಿಜೆಪಿಗೆ ಆಹ್ವಾನ ನೀಡಿದ ವಿಚಾರದ ಮಾತು ಬದಲಿಸಿ ಎತ್ತಿನ ಹೊಳೆ ವಿಚಾರ ಮಾತನಾಡಲು ಶುರು ಮಾಡಿದರು.
ಈ ವೇಳೆ ಸಂಸದ ಜಿ.ಎಸ್.ಬಸವರಾಜು, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನಹೊಳೆ ಮುಖ್ಯ ಎಂಜನಿಯರ್ ಮಾಧವ, ಸೂಪರಿಡೆಂಟ್ ಎಂಜನಿಯರ್ ಶಿವಕುಮಾರ್, ವಿಷೇಶಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.