ಸುರೇಶ ಬೆಳಗಜೆ
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಳಿ ಪದ್ಧತಿ ಶಾಲೆಯ ಚಿಂತನೆಯನ್ನು ಮುಂದಿಟ್ಟಿದೆ.
ಬೆಳಿಗ್ಗೆ 8 ರಿಂದ ಆರಂಭಿಸಿ ಮಧ್ಯಾಹ್ನ 12.20 ವರೆಗೆ ಮೊದಲನೇ ಪಾಳಿ ಮತ್ತು 12.10ರಿಂದ ಸಂಜೆ 5ವರೆಗೆ ಎರಡನೇ ಪಾಳಿ ಎಂಬ ಸೂಚನೆ ಇಲಾಖೆಯದು.
ಕೋವಿಡ್ 19 ಬಂದಿರುವ ಕಾರಣ ಇದು ಅನಿವಾರ್ಯ ಆಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದರ ಅನುಷ್ಠಾನ ಕಷ್ಟಸಾಧ್ಯ ಎಂಬ ಆತಂಕ ಶಿಕ್ಷಕ ವರ್ಗದಲ್ಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಒಂದು ತಾಲ್ಲೂಕಿನಿಂದ ಇನ್ನೊಂದು ತಾಲ್ಲೂಕಿನ ಹಳ್ಳಿಗೆ ಹೋಗಲು ಎರಡು ಗಂಟೆ ಪ್ರಯಾಣ ಮಾಡುವ ಸಾಕಷ್ಟು ಶಿಕ್ಷಕರಿದ್ದಾರೆ.
ಹಳ್ಳಿ ಪ್ರದೇಶಗಳಲ್ಲಿ ಮುಂಜಾನೆ ಬೇಗನೆ ಬಸ್ಸುಗಳೂ ಇರುವುದಿಲ್ಲ. ಹೀಗಿರುವಾಗ ಎಂಟು ಗಂಟೆಗೆ ಶಾಲೆ ತಲುಪಲು ಕಷ್ಟವಾಗದೇ ಎಂಬ ಪ್ರಶ್ನೆ ಶಿಕ್ಷಕರೊಬ್ಬರದು.
ಇದನ್ನೂ ಓದಿ:ತಿಪಟೂರು ಕೆರೆ ಕಟ್ಟುವಾಗಿನ ಅನುಭವ
ಮುಂಜಾನೆಯ ನಿತ್ಯ ವಿಧಿಗಳನ್ನು ಮುಗಿಸಿ ಬೆಳಿಗ್ಗೆ ಎಂಟರೊಳಗೆ ಮಕ್ಕಳನ್ನು ಕಳುಹಿಸುವುದು ಪೇಟೆಯಲ್ಲಿ ಇರುವವರಿಗೆ ಕಷ್ಟವೇನಲ್ಲ. ಆದರೆ, ಹಳ್ಳಿಯಲ್ಲಿ ಇದು ಕಷ್ಟಸಾಧ್ಯ ಎಂಬ ಅನಿಸಿಕೆ ಪೋಷಕಿ ಸೀಮಾ ಅವರದು.
ಮುಂಜಾನೆಯ ಉಪಾಹಾರದ ಸಮಸ್ಯೆಯೂ ಕಾಡಬಹುದು ಎಂದು ಪೋಷಕ ಉಮೇಶ್ ನುಡಿಯುತ್ತಾರೆ. ಜಿಲ್ಲಾ ಪಂಚಾಯತ್ ಈ ವಿಚಾರದಲ್ಲಿ ನಿರ್ಣಯ ಮಾಡುವ ಅವಕಾಶವೇನೋ ಇದೆ. ಅದರೆ, ಅವರಿಗೂ ಶಾಲೆಗೆ ಮಕ್ಕಳು ಮತ್ತು ಶಿಕ್ಷಕರು ಎಷ್ಡೆಷ್ಟು ದೂರದಿಂದ ಬರುತ್ತಾರೆ ಎಂಬ ಅರಿವು ಇರುವುದಿಲ್ಲ. ಇದರಿಂದ ಸಮಸ್ಯೆ ಪರಿಹಾರ ಕಷ್ಟ ಎಂದೂ ಅವರ ಅಭಿಪ್ರಾಯ.
ಅವಧಿ ಕಡಿತ ಮಾಡುವುದು, ಅಗತ್ಯ ಇದ್ದಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಕೊಟ್ಟಿರುವುದು ಸ್ವಾಗತಾರ್ಹ. ಅಂಗನವಾಡಿ, ಸಮುದಾಯ ಭವನಗಳನ್ನು ಬಳಸಿಕೊಳ್ಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯೋಚನೆ ಕಾರ್ಯಯೋಗ್ಯವೇ ಎಂಬ ಪ್ರಶ್ನೆ ಶಿಕ್ಷಕರ ಸಂಘದ ಪದಾಧಿಕಾರಿ ಒಬ್ಬರದು.
ಸರ್ಕಾರಿ ಪ್ರಾಥಮಿಕ ಶಾಲೆಯೇ ಇರಲಿ; ಪ್ರೌಢಶಾಲೆಯೇ ಇರಲಿ- ಅವುಗಳಲ್ಲಿ ಪ್ರತಿಯೊಂದು ವಿಷಯವನ್ನು ಅದನ್ನು ಬಲ್ಲವರೇ ಬೋಧಿಸುತ್ತಿಲ್ಲ. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಹಲವು ವಿಷಯಗಳನ್ನು ಬೋಧಿಸುವುದು ಅನಿವಾರ್ಯ ಎನಿಸುತ್ತದೆ.
ಹೀಗಿರುವಾಗ ಪ್ರಾಥಮಿಕ ಶಾಲೆಗಳ ಅರ್ಹ ಶಿಕ್ಷಕರು ಪ್ರೌಢಶಾಲೆಯಲ್ಲಿ ಮತ್ತು ಅಗತ್ಯ ಇದ್ದರೆ ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಪಾಠ ಮಾಡಬಹುದೆಂಬ ಯೋಜನೆ ಕೇವಲ ‘ಕಾಗದದ ಹುಲಿ’ ಆದೀತು ಎಂದು ನಿವೃತ್ತ ಶಿಕ್ಷಕರೊಬ್ಬರ ಅಭಿಮತ.
ಹಳ್ಳಿಗಳಲ್ಲಿ ಅಂಗನವಾಡಿ, ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಅಕ್ಕಪಕ್ಕದಲ್ಲಿ ಇರುವುದಿಲ್ಲ. ಜತೆಗೆ ವಾಹನ ಸೌಲಭ್ಯವೂ ಕಷ್ಟಸಾಧ್ಯ. ಕನಿಷ್ಠ ಒಂದೆರಡು ಕಿಮೀ ದೂರದಲ್ಲಿರುವ ಇನ್ನೊಂದು ಶಾಲೆಯಲ್ಲಿ ತರಗತಿ ಮಾಡಲು ತೆರಳುವುದು ಹೇಗೆ ಎಂದೂ ಅವರು ಪ್ರಶ್ನೆ ಮುಂದಿಡುತ್ತಾರೆ.
ಶಿಕ್ಷಕರ ಲಭ್ಯತೆ ಮತ್ತು ಕ್ಷೇತ್ರ ಶಿಕ್ಷಣಾದಿಕಾರಿ ಅನುಮೋದನೆ ಮೇರೆಗೆ ಶಿಕ್ಷಕರನ್ನು ಪಾಳಿಗಳಲ್ಲಿ ನಿಯೋಜಿಸುವ ಚಿಂತನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ.
ಹಳ್ಳಿಗಳ ಸರ್ಜಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿದಂತೆ ಶಿಕ್ಷಕರ ಸಂಖ್ಯೆಯನ್ನೂ ಕಡಿಮೆ ಮಾಡುತ್ತಾರೆ. ಹೀಗಿರುವಾಗ ಶಿಕ್ಷಕ ವರ್ಗ ಬೆಳಿಗ್ಗೆಯಿಂದ ಸಂಜೆವರೆಗೆ ದುಡಿಯುವ ಸ್ಥಿತಿ ಬಂದೀತು. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಶಿಕ್ಷಣ ತಜ್ಞರೊಬ್ಬರು ಹೇಳುತ್ತಾರೆ.
ಪಾಳಿ ಪದ್ಧತಿ- ಪಕ್ಕದ ಶಾಲೆಗಳ ಕೊಠಡಿ ಬಳಕೆಯಂಥ ಯೋಜನೆ ಆದೇಶ ಮಾಡುವಾಗ ಆಕರ್ಷಕವಾಗಿ ಕಾಣುತ್ತದೆ. ಅದರ ಅನುಷ್ಠಾನಕ್ಕೆ ಮುಂದಾದಾಗ ಹತ್ತೆಂಟು ಹುಳುಕುಗಳು ಹೊರಬರುತ್ತವೆ ಎಂದು ಶಿಕ್ಷಕರು ಹೇಳುತ್ತಾರೆ.