ಪಾವಗಡ: ಕೋವಿಡ್ 19 ಸಮಸ್ಯೆ ತ್ವರಿತವಾಗಿ ಮುಕ್ತಾಯವಾಗುವ ಸೂಚನೆಗಳಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳೊಂದಿಗೆ ಕೊರೊನಾ ನಿಯಂತ್ರಿಸಲು ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಿವೈಎಸ್ ಪಿ ಪ್ರವೀಣ್ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಹೆಲ್ಫ್ ಸೊಸೈಟಿ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನತೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಾಗ ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈ ತೊಳೆಯುತ್ತಿಬೇಕು. ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಕೋವಿಡ್ 19 ನಿಯಂತ್ರಿಸಬಹುದು ಎಂದರು.
ಮಧುಗಿರಿ ಉಪವಿಭಾಗದಲ್ಲಿ ಕೊರೊನಾ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಮಧುಗಿರಿ, ಪಾವಗಡ ತಾಲ್ಲೂಕು ಗಡಿ ಹಂಚಿಕೊಂಡಿರುವ ಆಂಧ್ರದ ಅನಂತಪುರಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಸೊಂಕು ಹರಡಿದೆ. ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರದ ಜನರೊಂದಿಗೆ ತಾಲ್ಲೂಕಿನ ಜನತೆ ಒಡನಾಟ ಹೊಂದಿದ್ದಾರೆ. ಕೊರೊನಾ ನಿಯಂತ್ರಿಸಲು ಆಂಧ್ರದ ಜನತೆ ಒಳ ಬರದಂತೆ ತಡೆಯಲು ಎಲ್ಲರು ಸಹಕಾರ ನೀಡಬೇಕು ಎಂದರು.
ಇತರೆ ರಾಜ್ಯಗಳಿಂದ ಯಾರಾದರೂ ಬಂದಲ್ಲಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಗುಜರಾತ್ ನಿಂದ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಹೀಗಾಗಿ ತಾಲ್ಲೂಕಿನ ಜನತೆ ಭಯಪಡಬೇಕಿಲ್ಲ ಎಂದರು.
ಡಿವೈ ಎಸ್ ಪಿ ಪ್ರವೀಣ್, ಸರ್ಕಲ್ ಇನ್ ಸ್ಪೆಕ್ಟರ್ ನಾಗರಾಜು, ಸಬ್ ಇನ್ ಸ್ಪೆಕ್ಟರ್ ನಾಗರಾಜು, ರಾಮಯ್ಯ, ರಾಮಕೃಷ್ಣಪ್ಪ, ಸಿಬ್ಬಂದಿಗೆ ಶಾಲು ಹೊದಿಸಿ, ಹೂ ಚೆಲ್ಲಿ ಅಭಿನಂದಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಪುರಸಭೆ ಸದಸ್ಯ ಗೊರ್ತಿ ನಾಗರಾಜು, ಅನಿಲ್ ಕುಮಾರ್, ಗೌತಮ್, ರಂಜಿತ್ ಕುಮಾರ್, ಕಾರ್ತಿಕ್ ಸಾಗರ, ಶ್ರವಣ್ ಇದ್ದರು.