ಸಂಸದೆ ಶೋಭಾ ಕರಂದ್ಲಾಜೆ
Publicstory.in
Bengaluru: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲು ಬಳಸುತ್ತಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಯಾರನ್ನು ಕೇಳಿದರೂ ಕೊರೊನಾ ಸೋಂಕಿಗಿಂತಲೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಇಡಲಾಗುವ ಕ್ವಾರಂಟೈನ್ ಕೇಂದ್ರಗಳ ಬಗ್ಗೆಯೇ ಅನುಮಾನ, ಭಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ವಾಸ್ತವವಾಗಿ ಕ್ವಾರಂಟೈನ್ ಗಳಲ್ಲಿ ಸರ್ಕಾರ ಒಳ್ಳೆಯ ವ್ಯವಸ್ಥೆಯನ್ನೇ ಮಾಡಿದೆ. ಆದರೆ ಪಾರದರ್ಶಕವಾಗಿಲ್ಲದ ಕಾರಣ ಜನರು ಕತ್ತಲಲ್ಲಿನ ಅನುಭವದಲ್ಲಿ ಭಯ ಬೀಳುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್ ಕೇಂದ್ರಗಳ ಬಗ್ಗೆ ವರದಿ ಮಾಡಲು ಮುಕ್ತ ಅವಕಾಶ ಕಲ್ಪಿಸಬೇಕಾಗಿದೆ.
ಸಂಸದೆ ಶೋಭಾ ಕರಂದ್ಲಾಜೆ ಸಲಹೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ
ಅವಕಾಶ ಇರುವ ಕಡೆ,ತೋಟದ ಮನೆಗಳು, ಫಾರ್ಮ್ ಹೌಸಗಳಲ್ಲಿ ಆಯಾ ಮನೆಯವರನ್ನು ಅಲ್ಲಿಯೇ ಕ್ವಾರಂಟೈನ್ ಮಾಡಬೇಕೆಂಬ ಸಂಸದೆ ಶೋಭಾ ಕರಂದ್ಲಾಜೆ ಅವರ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊರೊನಾ ವಿಷಯದಲ್ಲಿ ಎಲ್ಲ ಸಂಸದರು, ಶಾಸಕರು ಅವರುಗಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಉಳಿದರು. ಆದರೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಇಡೀ ರಾಜ್ಯದ ಅನೇಕ ಕಡೆ ಓಡಾಡಿದ್ದಾರೆ. ಹೀಗಾಗಿ ರಾಜ್ಯದ ಸಚಿವರು, ಶಾಸಕರಿಗಿಂತಲೂ ಕೊರೊನಾದ ವಾಸ್ತವ ಚಿತ್ರಣದ ಅನುಭವ, ಮಾಹಿತಿ ಅವರಿಗಿದೆ. ಅನೇಕ ಕಡೆಗಳಲ್ಲಿ ಅವರು ನೆರವಿನ ಹಸ್ತ ಚಾಚಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿ ಅಲ್ಲಿನ ಅವರ ಅನುಭವಗಳ ಆಧಾರದಲ್ಲೂ ಅವರ ಸಲಹೆಗಳು ಜನರಿಗೆ ಬೇಕಾಗಿವೆ.
ಕೊರೊನಾ ವಿರುದ್ಧ ದೀರ್ಘಕಾಲದ ಹೋರಾಟ ಮಾಡಬೇಕಾದ ಕಾರಣ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ.
ಕ್ವಾರಂಟೈನ್ ಕೇಂದ್ರಗಳು ಹೇಗಿರಬೇಕು, ಏನ್ನೆಲ್ಲ ಸೌಲಭ್ಯಗಳನ್ನು ಒಳಗೊಂಡಿರಬೇಕು ಎಂದು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.ಇಷ್ಟನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೂ ಕಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕ್ವಾರಂಟೈನ್ ಆದ ಒಬ್ಬ ವ್ಯಕ್ತಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಇದನ್ನು ಹೈಪೋಕ್ಲೋರೈಟ್ ಆಗಿ ಪ್ರತಿ ಗಂಟೆಗೊಮ್ಮೆ ತೊಳೆಯಬೇಕು. ಈಗ ಸರ್ಕಾರ ಶಾಲೆಗಳು, ಮೊರಾರ್ಜಿ ದೇಸಾಯಿ ಶಾಲೆಗಳು, ಸರ್ಕಾರಿ ಕಟ್ಟಡಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ಮಾರ್ಗದರ್ಶಿ ಸೂತ್ರಗಳ ಪಾಲನೆಯಾಗುತ್ತಿದೆಯೇ? ಎಂಬ ಪ್ರಶ್ನೆ, ಭಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ, ಊಟ ಸರಿಯಾಗಿಲ್ಲ ಎಂದು ಅಲ್ಲಲ್ಲಿ ಕೇಳಿ ಬರುತ್ತಿರುವ ಅಪಸ್ವರ ಮಾಧ್ಯಮಗಳಲ್ಲಿ ಬಂದ ನಂತರ ಜನರಲ್ಲಿ ಭಯ ಹೆಚ್ಚಾಗಲು ಕಾರಣವಾಗಿದೆ. ಎರಡು ಮೂರು ದಿನಗಳ ಹಿಂದಷ್ಟೇ ರಾಜ್ಯದಕ್ವಾರಂಟೈನ್ ಕೇಂದ್ರವಿಂದರಲ್ಲಿ ಇದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ಯಾದಗಿರಿ ಮತ್ತಿತರ ಕಡೆ ಒಂದೇ ದಿನ ಕಂಡು ಬಂದಿರುವ ಸೋಂಕಿತರು, ಇವರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ಎಷ್ಟು ಕೇಂದ್ರಗಳು ಬೇಕಾಗಬಹುದು ಎಂದು ನೆನದರೆ ಭಯವಾಗುತ್ತದೆ.
ಕ್ವಾರಂಟೈನ್ ಕಾರಣಕ್ಕೆಯೇ ಹೆದರಿ ಬಳಹಷ್ಟು ಜನ ರೋಗ ತಪಾಸಣೆಯಿಂದ ದೂರ ಉಳಿಯಲು ಕಾರಣವಾಗುತ್ತಿದೆ ಎಂಬುದನ್ನು ಖಾಸಗಿಯಾಗಿ ಹಲವು ವೈದ್ಯರು, ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.
ಕ್ವಾರಂಟೈನ್ ಕೇಂದ್ರಗಳಿಗೆ ಮಾಧ್ಯಮ ಪ್ರತಿನಿಧಿಗಳು, ಜನಪ್ರತಿನಿಧಿಗಳ ಭೇಟಿಗೆ ಅವಕಾಶ ಇಲ್ಲದ ಕಾರಣ ಈ ಕೇಂದ್ರಗಳ ಬಗ್ಗೆ ಇಲ್ಲಿಯವರೆಗು ಎಲ್ಲೂ ವರದಿಯಾಗುತ್ತಿಲ್ಲ. ಈ ಕೇಂದ್ರಗಳ ಒಳಗೆ ಹೇಗಿರುತ್ತದೆಯೇ ಎಂಬುದು ಜನರಿಗೆ ಗೊತ್ತಿಲ್ಲ. ಇದುವೇ ಅವರನ್ನು ಮತ್ತಷ್ಟು ಭಯ ಭೀತಗೊಳಿಸುತ್ತಿದೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸೋಂಕು ಹರಡುವ ಕೇಂದ್ರಗಳಾಗುತ್ತವೆ. ಈ ಕಾರಣ ಸರ್ಕಾರ ಈ ಕೇಂದ್ರಗಳಲ್ಲಿ ಮಾರ್ಗದರ್ಶಿ ಸೂತ್ರಗಳ ಜಾರಿಯ ಮೇಲೆ ಕಟ್ಟುನಿಟ್ಟಾದ ಕಣ್ಗಾವಲು ಇಡಬೇಕಾದ ಅಗತ್ಯ ಇದೆ ಎನ್ನುತ್ತಾರೆ ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್.
ಕ್ವಾರಂಟೈನ್ ಕೇಂದ್ರಗಳಲ್ಲಿ ಮಾಡಲಾಗಿರುವ ವ್ಯವಸ್ಥೆ, ನೋಡಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದಾಗ ಮಾತ್ರ ಈ ಸೋಂಕಿನ ಹೋರಾಟದಲ್ಲಿ ಜನರನ್ನು ಸಹಭಾಗಿಗಳಾಗಿ ಮಾಡಿಕೊಳ್ಳಬಹುದಾಗಿದೆ.
ರಾಜ್ಯದ ಕ್ವಾರಂಟೈನ್ ಕೇಂದ್ರಗಳಲ್ಲಿ ನೀಡಲಾಗುವ ಊಟ, ಮಾನಸಿಕ ಸಮಾಲೋಚನೆ, ವ್ಯಾಯಾಮ, ಮಾಹಿತಿ ಪುಸ್ತಕಗಳು, ಇಂಟರನೆಟ್ ಸೇವೆ, ವೈದ್ಯ ಸಿಬ್ಬಂದಿ, ಕಾಳಜಿ ಯುಕ್ತ ಉಪಚಾರ ಮತ್ತಿತರ ಮಾಹಿತಿಗಳನ್ನು ಪ್ರಚುರಪಡಿಸಿದರೆ ಮಾತ್ರ ಕ್ವಾರಂಟೈನ್ ಕೇಂದ್ರಗಳ ಬಗ್ಗೆ ಜನರಿಗೆ ಇರುವ ಭಯ ಸುಲಭವಾಗಿ ಹೋಗಲಾಡಿಸಬಹುದಾಗಿದೆ.
ಮನೆಗಳನ್ನೇ ಕ್ವಾರಂಟೈನ್ ಕೇಂದ್ರ ಮಾಡುವುದರಿಂದ ಕ್ವಾರಂಟೈನ್ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜನರ ಮಾನಸಿಕ ಶಕ್ತಿಯು ವೃದ್ಧಿಸಲಿದೆ. ಆದರೆ ಪ್ರತಿದಿನಕ್ಕೆ ಎರಡು ಸಲ ಈ ಮನೆಯವರ ಆಪ್ತ ಸಮಾಲೋಚನೆ, ಪರೀಕ್ಷೆಯ ಕೆಲಸ ಮಾತ್ರ ಕಟ್ಟುನಿಟ್ಟಾಗಿ ನಡೆಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿ ಜನರ ಸಂಖ್ಯೆ ಕಡಿಮೆ ಇದ್ದಷ್ಟು ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡಲು ಸುಲಭವಾಗಲಿದೆ. ಸರ್ಕಾರಕ್ಕೆ ಆರ್ಥಿಕ ಒತ್ತಡವೂ ಕಡಿಮೆಯಾಗಲಿದೆ.
ಗ್ರಾಹಕರು ಇಲ್ಲದೇ ಹಲವಾರು ಲಾಡ್ಜ್ ಗಳು ಮುಚ್ಚುವ ಹಂತಕ್ಕೆ ಬಂದಿವೆ. ಇಂತಹ ಲಾಡ್ಜ್ ಗಳಿಗೆ ಸರ್ಕಾರವೇ ಒಂದು ಸಾಧಾರಣ ದರ ವಿಧಿಸಿ ಕ್ಚಾರಂಟೈನ್ ಗೆ ಒಳಗಾಗುವವರಿಗೆ ಅವರದೇ ವೆಚ್ಚದಲ್ಲಿ ಇರಲು ಅವಕಾಶ ಒದಗಿಸಿದರೆ ಸರ್ಕಾರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಬಡವರಿಗೆ ಗುಣಮಟ್ಟದ ಕ್ವಾರಂಟೈನ್ ಸೌಲಭ್ಯವನ್ನು ಒದಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಬದಲಾವಣೆ ಮಾಡುವುದರಿಂದ ಜನರ ವಿಶ್ವಾಸವೂ ಹೆಚ್ಚಲಿದೆ.
ಇದೇ ಮಾದರಿಯನ್ನು ರಾಜ್ಯದ ಖಾಸಗಿ ಆಸ್ಪತ್ರೆಗಳಿಗೂ ಅನ್ವಯಿಸಬೇಕು. ಸರ್ಕಾರವೇ ದರ ನಿಗದಿ ಮಾಡಿ ಜನರಿಗೆ ಚಿಕಿತ್ಸೆ ಪಡೆದುಕೊಳ್ಳಲು ಆಯ್ಕೆಯ ಅವಕಾಶವನ್ನು ನೀಡಬಹುದಾಗಿದೆ.