ತುಮಕೂರು: ತಾಯಿಯ ಆಸೆ ಈಡೇರಿಸಲು ಮಗ ದೇಶದಾದ್ಯಂತ ಪುಣ್ಯ ಕ್ಷೇತ್ರಗಳಿಗೆ ಬಜಾಜ್ ದ್ವಿ ಚಕ್ರ ವಾಹನದಲ್ಲಿ ಸಂಚರಿಸಿದ್ದಾರೆ.
ಮೈಸೂರು ನಗರದ ಎಂಜಿನಿಯರಿಂಗ್ ಪದವಿಧರ ಕೃಷ್ಣಕುಮಾರ್ (42) ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 70 ವರ್ಷದ ತಾಯಿ ಚೂಡಾರತ್ನ ಅವರ ಕನಸನ್ನು ನನಸು ಮಾಡುವ ಸಲುವಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ತಾಯಿಯೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ತಂದೆಯ ಹಳೆಯ ಬಜಾಜ್ ಸ್ಕೂಟರ್ ಅನ್ ಸ್ಟಾರ್ಟ್ ಮಾಡಿದ್ದಾರೆ.
2018 ಜನವರಿ 14 ರಂದು ಮೈಸೂರಿನಿಂದ ಸಂಚಾರ ಆರಂಭಿಸಿ ಉತ್ತರ ಭಾರತ, ನಾಗಲ್ಯಾಂಡ್, ಬೆಸ್ಟ್ ಬೆಂಗಾಲ್, ಕೈಲಾಸ ಪರ್ವತ, ನೇಪಾಳ್, ಮಾನಸ ಸರೋವರ, ಭೂತಾನ್, ಟಿಬೆಟ್ ಸೇರಿದಂತೆ ದೇಶದಲ್ಲಿನ ಪ್ರಸಿದ್ದ ದೇವಾಲಯ ಮತ್ತು ಸ್ಥಳಗಳಿಗೆ ಭೇಟಿ ನೀಡಿ 56000 ಕಿ.ಮೀ ಪ್ರಯಾಣಿಸಿದ್ದಾರೆ.
ಶನಿವಾರ ಸಂಜೆ ಕರ್ನಾಟಕದ ಗಡಿ ಭಾಗವಾದ ಮಧುಗಿರಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಪ್ರವೇಶಿಸಿದ ಕೂಡಲೇ ಭೂಮಿ ತಾಯಿಗೆ ನಮಿಸಿದರು.
ತಾಯಿ ಮತ್ತು ಮಗ ರಾಜ್ಯ ಪ್ರವೇಶಿಸುವ ಬಗ್ಗೆ ವಿಷಯ ತಿಳಿದ ತಹಶೀಲ್ದಾರ್ ಡಾ. ವಿಶ್ವನಾಥ್ ಹಾಗೂ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಪಾಲಾಕ್ಷಪ್ರಭು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮುದ್ದೇನಹಳ್ಳಿ ಚೆಕ್ ಪೋಸ್ಟ್ ಗೆ ಬಂದು ತಾಯಿ ಮತ್ತು ಮಗನನ್ನು ಸನ್ಮಾನಿಸಿ ಗೌರವಿಸಿದರು.
ತಾಯಿಗಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಜಾಜ್ ಸ್ಕೂಟರ್ ನಲ್ಲಿ ಸಾವಿರಾರು ಕಿಲೋ ಮೀಟರ್ ಪುಣ್ಯ ಕ್ಷೇತ್ರಗಳ ಪರ್ಯಟನೆ ನಡೆಸಿದ ಇವರು ಆಧುನಿಕ ಶ್ರವಣ ಕುಮಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.