ರಘುನಂದನ್ ಎ.ಎಸ್.
ಒಮ್ಮೆ ದೋಣಿಗೆ ಬಣ್ಣ ಬಳಿಯಲು ಒಬ್ಬ ವ್ಯಕ್ತಿಯನ್ನು ಕೇಳಿದಾಗ ಅವನು ತನ್ನೊಂದಿಗೆ ಬಣ್ಣ ಮತ್ತು ಕುಂಚಗಳನ್ನು ತಂದು ಮಾಲೀಕರು ಕೇಳಿದಂತೆ ದೋಣಿಯನ್ನು ಗಾಢ ಕೆಂಪು ಬಣ್ಣ ಬಳಿಯಲು ಪ್ರಾರಂಭಿಸಿದನು.ಬಣ್ಣ ಮಾಡುವಾಗ, ದೋಣಿ ಮಧ್ಯೆ ಸಣ್ಣ ರಂಧ್ರ ಇರುವುದನ್ನು ಗಮನಿಸಿದ ಅವನು ಅದನ್ನು ಮಾಲಿಕನಿಗೆ ಹೇಳದೆಯೇ ಸರಿಪಡಿಸಿದನು.
ಬಣ್ಣದ ಕೆಲಸ ಮುಗಿದ ನಂತರ, ಅವನು ತನ್ನ ಹಣವನ್ನು ಸ್ವೀಕರಿಸಿ ಹೊರಟುಹೋದನು.ಮರುದಿನ, ದೋಣಿಯ ಮಾಲೀಕರು ಪೈಂಟರ್ ಬಳಿಗೆ ಬಂದು ಅವನಿಗೆ ದೊಡ್ಡ ಮೊತ್ತದ ಚೆಕ್ಕ್ ಒಂದನ್ನು ನೀಡಿದರು, ಇದು ಅವನ ಕೆಲಸದ ಸಂಬಳಕ್ಕಿಂತ ಅತಿ ಹೆಚ್ಚಿನದಾಗಿತ್ತು.ಆಗ ಪೈಂಟರ್ ಆಶ್ಚರ್ಯಚಕಿತನಾಗಿ, ದೋಣಿ ಪೈಂಟಿಂಗ್ಗೆ ನೀವು ಈಗಾಗಲೇ ನನಗೆ ಹಣ ನೀಡಿದ್ದೀರಿ ಈ ಹಣ ಏತಕ್ಕೆ ಎಂದಾಗ, ಮಾಲಿಕನು ಇದು ಬಣ್ಣದ ಕೆಲಸಕ್ಕಾಗಿ ಅಲ್ಲ. ಇದು ದೋಣಿಯ ರಂಧ್ರವನ್ನು ಸರಿಪಡಿಸಿದ್ದಕ್ಕಾಗಿ ಎಂದನು.ಆಗ ಪೈಂಟರ್ ಅಷ್ಟು ಸಣ್ಣ ಕೆಲಸಕ್ಕೆ ದುಬಾರಿ ಮೊತ್ತವನ್ನು ಕೊಡುವುದು ಖಂಡಿತವಾಗಿಯೂ ಅಷ್ಟು ಯೋಗ್ಯವಲ್ಲ ಎಂದನು.ಆಗ, ಮಾಲಿಕನು ವಿವರಿಸುತ್ತ, ನಾನು ನಿಮ್ಮನ್ನು ದೋಣಿಗೆ ಪೈಂಟ್ ಮಾಡಲು ಮಾತ್ರ ಹೇಳಿ, ದೋಣಿಯ ರಂಧ್ರದ ಬಗ್ಗೆ ಹೇಳುವುದನ್ನ ಮರೆತಿದ್ದೆ.ದೋಣಿಗೆ ಬಳಿದ ಬಣ್ಣ ಒಣಗಿದಾಗ, ನನ್ನ ಮಕ್ಕಳು ದೋಣಿ ತೆಗೆದುಕೊಂಡು ಮೀನು ಹಿಡಿಯಲು ಹೊರಟು ಹೋದರು.ದೋಣಿಯ ರಂಧ್ರದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ನಾನೂ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ.ನಾನು ಹಿಂತಿರುಗಿ ಬಂದು ನೋಡಿದಾಗ ಅವರು ದೋಣಿಯನ್ನ ತೆಗೆದುಕೊಂಡು ಹೋಗಿರುವುದನ್ನ ಕೇಳಿ ಗಾಬರಿಗೊಂಡು ಭಯಬೀತನಾಗಿದ್ದೆ.ಆದರೆ ಅವರು ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗುವುದನ್ನು ನೋಡಿದಾಗ ನನ್ನ ದುಗುಡ ದೂರಾಗಿ, ಆನಂದ ಮತ್ತು ಆಶ್ಚರ್ಯದಿಂದ ದೋಣಿಯನ್ನು ನೋಡಿದಾಗ ನೀವು ರಂಧ್ರವನ್ನು ಸರಿಪಡಿಸಿದ್ರಿ.ನೀವು ನನ್ನ ಮಕ್ಕಳ ಜೀವವನ್ನು ಉಳಿಸಿದ್ದೀರಿ! ನಿಮ್ಮ ಆ ಒಂದು ‘ಸಣ್ಣ’ ಮತ್ತು ಒಳ್ಳೆಯ ಕೆಲಸ ನನ್ನ ಮಕ್ಕಳನ್ನೇ ಉಳಿಸಿತು. ಈ ಕೆಲಸಕ್ಕೆ ಬೆಲೆಕಟ್ಟುವಷ್ಟು ಹಣ ನನ್ನಲ್ಲಿಲ್ಲ. ” ಎಂದನು.ಇದರಿಂದ ನಿನ್ನ ಕಾರ್ಯ ದಕ್ಷತೆ ಮತ್ತು ಪರಿಣಾಮಕಾರತ್ವ ಎಷ್ಟು ಎಂದು ತಿಳಿಯುತ್ತದೆ ಎಂದು ಮಾಲಿಕನು ಪೈಂಟರ್ ನ ಹೋಗಳಿದನು.ತಾತ್ಪರ್ಯ -ಯಾವುದೇ ದೋಷವಿಲ್ಲದ ಕೆಲಸ ಮಾಡುವುದು ದಕ್ಷತೆ; ನಿರೀಕ್ಷೆಗಿಂತ ಹೆಚ್ಚಿನದು ಹಾಗು ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದು ಪರಿಣಾಮಕಾರಿತ್ವ.ದಕ್ಷತೆಯು ಪ್ರಕ್ರಿಯೆಯನ್ನು ತೋರಿಸಿದರೆ, ಪರಿಣಾಮಕಾರಿತ್ವವು ಉದ್ದೇಶವನ್ನು ತೋರಿಸುತ್ತದೆ.