ವರದಿ; ನಾಗರಾಜ್
ಸಿ.ಎಸ್.ಪುರ: ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿಯ ಜನರು ಒತ್ತಾಯಿಸಿದ್ದಾರೆ.
ಕಳೆದ ಸಲ ನೀರು ನಿಟ್ಟಾಗ ಹಂಚಿಕೆಯಾಗಿರುವಷ್ಟು ನೀರನ್ನು ಕೆರೆಗೆ ಹರಿಸಲಿಲ್ಲ. ಏಕಾಏಕಿ ನೀರು ನಿಲ್ಲಿಸಲಾಯಿತು. ಈಗ ಕುಡಿಯುವ ನೀರಿಗಾಗಿ ನಾಲೆಯಲ್ಲಿ ನೀರು ಬಿಟ್ಟಿದ್ದು, ಈಗಾಗಲೇ ತುಮಕೂರಿಗೆ ಹರಿಯುತ್ತಿದೆ. ಸಿ.ಎಸ್.ಪುರ ಕೆರೆಗೆ ನೀರು ಹರಿಸಲು ಶಾಸಕರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ತುರುವೇಕೆರೆಗೆ ನೀರು ಹರಿಸಿದಾಗಲೆಲ್ಲ ಸಿ.ಎಸ್.ಪುರ ಹೋಬಳಿಗೆ ಅನ್ಯಾಯ ಮಾಡಲಾಗುತ್ತದೆ. ಹೀಗಾಗಿ ಈ ಸಲ ತುರುವೇಕೆರೆ ತಾಲ್ಲೂಕಿಗೆ ನೀರು ಹರಿಸುವಾಗ ಮೊದಲ ಆದ್ಯತೆಯನ್ನು ಕಲ್ಲೂರು, ಸಿ.ಎಸ್.ಪುರ ಕೆರೆಗೆ ಬೀಡಬೇಕು ಎಂದು ಹೇಳಿದ್ದಾರೆ.
ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ಮೊಟ್ಟಮೊದಲಿಗೆ ಎಸ್ ಎಫ್ ಐ, ಡಿ ವೈ ಎಸ್ ಎಫ್ ಐ ಸಂಘಟನೆಗಳು ಹೋರಾಟ ನಡೆಸಿದವು. ಈ ಸಂಘಟನೆಗಳ ಮುಖಂಡರಾಗಿದ್ದ ಈಗ ನ್ಯಾಯವಾದಿಯಾಗಿರುವ ಸಿ.ಕೆ.ಮಹೇಂದ್ರ, ಹೋಟೆಲ್ ಶಿವು, ರಾಮು, ಸರ್ಕಲ್ ನಾಗರಾಜ್, ಮುನಿಸ್ಚಾಮಿ, ಚಂದ್ರಮೋಹನ್, ಜಯರಾಮ್, ಸಿ.ಎನ್.ಪಾಳ್ಯದ ಪ್ರಕಾಶ್, ಪಡುಗುಡಿ ಕೃಷ್ಣಮೂರ್ತಿ, ಅಂಗಡಿ ರಾಜೇಶ್ ಇನ್ನೂ ಅನೇಕರು ಹೋರಾಟ ರೂಪಿಸಿದ್ದರು. ಆಗ ಅನೇಕರು ಇದಕ್ಕೆ ಬೆಂಬಲ ಸೂಚಿಸಿದ್ದರು. ಈ ಹೋರಾಟದಿಂದಾಗಿ ಆಗ ಶಾಸಕರಾಗಿದ್ದ ವೀರಣ್ಣ ಗೌಡರಿಗೆ ರಾಜಕೀಯವಾಗಿ ಹಿನ್ನಡೆಯಾಗಿತ್ತು ಎಂಬುದನ್ನು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ನೆನಪು ಮಾಡಿಕೊಂಡರು.
ದಶಕಗಳ ಕಾಲದ ಸತತ ಹೋರಾಟದ ಒತ್ತಡದಿಂದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಅವಧಿಯಲ್ಲಿ 48 ಎಂಸಿಎಫ್ ಟಿ ನೀರನ್ನು ಸರ್ಕಾರ ಅಧಿಕೃತವಾಗಿ ಹಂಚಿಕೆ ಮಾಡಿತ್ತು. ಆದರೆ ಕೆರೆಗೆ ನೀರು ಹರಿಸುತ್ತಿರಲಿಲ್ಲ. ಶಾಸಕ ಮಸಾಲ ಜಯರಾಮ್ ಅವರ ರಾಜಕೀಯ ಚಾಣಾಕ್ಷತದ ಕಾರಣ ನೀರನ್ನು ಬಿಡಿಸಿದರು. ಆದರೂ ಹಂಚಿಕೆಯಾಗಿರುವಷ್ಟು ನೀರನ್ನು ಬಿಟ್ಟಿಲ್ಲ. ಈ ಸಲ ಶಾಸಕರು ಕೆರೆ ತುಂಬಿಸಲು ಈಗಿನಿಂದಲೇ ಮುಂದಾಗಬೇಕು ಎಂದು ವಕೀಲ, ಪತ್ರಕರ್ತ ಸಿ.ಕೆ.ಮಹೇಂದ್ರ ತಿಳಿಸಿದರು.