ತುಮಕೂರು
ಜೂನ್‌ನಲ್ಲಿ ಲಾಕ್‌ಡೌನ್ ತೆರವಾದ ಬಳಿಕ ಅಥವಾ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ರೂ.4 ರಿಂದ 5 ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಕೊರೋನಾ ವೈರಸ್‌ನಿಂದಾಗಿ ಕುಸಿತ ಕಂಡಿದ್ದ ಜಾಗತಿಕ ಕಚ್ಚಾತೈಲ ಮಾರುಕಟ್ಟೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
ಕಳೆದ ತಿಂಗಳು ಇದ್ದ ದರಕ್ಕೆ ಹೋಲಿಸಿದರೆ ತೈಲ ದರ ಶೇ.50 ರಷ್ಟು ಏರಿಕೆಯಾಗಿದ್ದು, ಬ್ಯಾರಲ್‌ವೊಂದಕ್ಕೆ 30 ಡಾಲರ್ (2,250 ರು.) ಆಗಿದೆ. ಅಲ್ಲದೇ ದಿನದಿಂದ ದಿನಕ್ಕೆ ಕಚ್ಚಾತೈಲ ದರ ಏರಿಕೆ ಕಾಣುತ್ತಿದೆ. ಒಂದು ವೇಳೆ ಏರುಗತಿ ಇದೇ ರೀತಿ ಮುಂದುವರಿದರೆ ತೈಲ ಮಾರಾಟ ಕಂಪನಿಗಳಿಗೆ ವೆಚ್ಚ ಹಾಗೂ ಮಾರಾಟದ ಮಧ್ಯೆ ರೂ. 4 ರಿಂದ 5 ರಷ್ಟು ವ್ಯತ್ಯಾಸ ಉಂಟಾಗುತ್ತಿದೆ.
ಕೊರೋನಾ ತಗ್ಗದಿದ್ದರೆ ಬಡವರಿಗೆ ಕೇಂದ್ರದಿಂದ ನೇರ ನಗದು?
ಹೀಗಾಗಿ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ದೈನಂದಿನ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಕೆಲವು ದಿನಗಳ ವರೆಗೆ ಪ್ರತಿನಿತ್ಯ ಲೀಟರ್‌ಗೆ 40ರಿಂದ 50 ಪೈಸೆಯಷ್ಟುಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಒಂದು ವೇಳೆ 5ನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಸರ್ಕಾರದ ಅನುಮತಿ ನೀಡಿದರೆ ತೈಲ ಕಂಪನಿಗಳು ದೈನಂದಿನ ದರ ಪರಿಷ್ಕರಣೆಯನ್ನು ಅನ್ವಯಿಸಬಹುದು. ಆದರೆ, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ತೈಲ ದರ ಏರಿಕೆಗೆ ಒಂದು ಮಿತಿಯನ್ನು ವಿಧಿಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.