ಬೀದಿ ವ್ಯಾಪಾರಿಗಳಿಗೆ 10 ಸಾವಿರ ಸಾಲವನ್ನು ಶಾಸಕ ಮಸಾಲ ಜಯರಾಮ್ ವಿತರಿಸಿದರು
ತುರುವೇಕೆರೆ: ಕೊರೊನಾ ಹಾಗು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ತುಮಕೂರು ಡಿಸಿಸಿ ಬ್ಯಾಂಕ್ ಹತ್ತು ಸಾವಿರ ರೂಪಾಯಿಗಳ ಸಾಲವನ್ನು ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಡಿಸಿಸಿ ಬ್ಯಾಂಕ್ ವತಿಯಿಂದ ತಾಲ್ಲೂಕಿನ ಅತಿ ಸಣ್ಣ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ 78 ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಿದ ರಾಜ್ಯದ ಏಕೈಕ ಬ್ಯಾಂಕ್ ಡಿಸಿಸಿ ಬ್ಯಾಂಕಾಗಿದ್ದು, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಕಳೆದ ಮೂರು ತಿಂಗಳುಗಳಿಂದ ತಾಲ್ಲೂಕಿನ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಜೀವನ ನಿರ್ವಹಣೆ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ಮತ್ತೊಂದೆಡೆ ಶ್ರಮಿಕ ವ್ಯಾಪಾರಿಗಳು ಸ್ಥಳೀಯ ಲೇವಾದೇವಿದಾರರ ಕಪಿಮುಷ್ಠಿಗೆ ಸಿಲುಕಿ ನರಳುತ್ತಿದ್ದರು ಎಂದರು.
ಇಂತಹ ವ್ಯಾಪಾರಿಗಳು ಆರ್ಥಿಕ ಸಂಕಷ್ಟದಿಂದ ಹೊರ ಬರಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿಗಳನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಾ ಯಾವ ಬ್ಯಾಂಕ್ ಗಳು ಮಾಡದ ಕೆಲಸ ಮಾಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ರೈತರು ಮತ್ತು ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ವಿಧಾನ ಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಿ.ಎಸ್.ದೇವರಾಜ್ ಮಾತನಾಡಿದರು.
ಪಟ್ಟಣದ 50 ಮಂದಿ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.
ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಕೊಳಾಲನಾಗರಾಜು, ದಾನಿಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಚ್.ಸಿ.ಗೌಡ, ವ್ಯವಸ್ಥಾಪಕ ನಾಗರಾಜು, ಸಲಹೆಗಾರ ಜಂಗಮಪ್ಪ, ನೋಡಲ್ ಅಧಿಕಾರಿ ನರಸಿಂಹಮೂರ್ತಿ, ತಾಲ್ಲೂಕು ಬೀದಿ ಬದಿ ವ್ಯಾಪಾರಿಗಳ ಮುಖಂಡ ಮಾರುತಿ ಇದ್ದರು.