ತುಮಕೂತು: ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 4000 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 20 ದಿನಗಳಲ್ಲಿ ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 4000 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ. ಅಕ್ಕಿಯನ್ನು ಸಾಗಿಸಿದ ಲಾರಿಗಳನ್ನೂ ಸಹ ಸೀಲ್ಡ್ ಮಾಡಲಾಗಿದೆ. ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ/ ರಸೀದಿ ಇಲ್ಲದೆ ಅಕ್ಕಿ ಹಾಗೂ ಮತ್ತಿತರ ಪಡಿತರ ಧಾನ್ಯಗಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದರು.
180 ನ್ಯಾಯಬೆಲೆ ಅಂಗಡಿಗಳ ಅಮಾನತು
ತಾವು ಆಹಾರ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಪಡಿತರ ವಿತರಣೆಯಲ್ಲಿರುವ ಹಲವಾರು ಲೋಪದೋಷಗಳನ್ನು ಸರಿಪಡಿಸಿದ್ದೇನೆ. ರಾಜ್ಯದಲ್ಲಿ ಈವರೆಗೆ ತೂಕದ ವ್ಯತ್ಯಾಸ, ಪಡಿತರ ದುರ್ಬಳಕೆ, ಗ್ರಾಹಕರಿಗೆ ಮೋಸ, ಅಕ್ರಮ ದಾಸ್ತಾನು, ಹಣ ದುರುಪಯೋಗ ಮಾಡುತ್ತಿದ್ದ 180 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತ್ತಿನಲ್ಲಿಡಲಾಗಿದೆ.
ಈ ಪೈಕಿ ಸಣ್ಣ-ಪುಟ್ಟ ಲೋಪದೋಷಗಳ ಆರೋಪವಿರುವ ಮೂರ್ನಾಲ್ಕು ನ್ಯಾಯಬೆಲೆಗಳನ್ನು ಅಮಾನತ್ತಿನಿಂದ ಕೈಬಿಟ್ಟು, ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾದರೆ ನಿರ್ದಾಕ್ಷಿಣ್ಯ ಕ್ರಮ:
ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದರೆ ಗ್ರಾಹಕರು ಯಾವುದೇ ಕಾರಣಕ್ಕೂ ಮಣಿಯದೆ ಪ್ರತಿಭಟಿಸಬೇಕು. ಇಲ್ಲವೇ ಇಲಾಖೆಯ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಪ್ರತಿದಿನ ಸಹಾಯವಾಣಿಗೆ ಸುಮಾರು 250 ದೂರು ಕರೆಗಳು ಬರುತ್ತಿದ್ದು, ಸ್ವೀಕರಿಸಿದ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
4ಲಕ್ಷ ವಲಸೆ ಕುಟುಂಬಗಳಿಗೆ ಪಡಿತರ ವಿತರಣೆ:
ಕೋವಿಡ್-19 ಸೋಂಕು ರೋಗದ ಹಿನ್ನೆಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಮೇ ಮತ್ತು ಜೂನ್ ಮಾಹೆಗಾಗಿ ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ತಲಾ 2 ಕೆ.ಜಿ. ಕಡಲೆ ಕಾಳು ಹಾಗೂ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಪಡಿತರ ಹಂಚಿಕೆ ಮಾಡಿದೆ ಎಂದು ತಿಳಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಈವರೆಗೆ ರಾಜ್ಯದಲ್ಲಿ 4 ಲಕ್ಷಕ್ಕಿಂತ ಹೆಚ್ಚು ವಲಸೆ ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ ಎಂದರು.