ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಡಕ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂಜಿನಿಯರುಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಜನಸಂಖ್ಯೆ, ಕೊಳವೆ ಬಾವಿಗಳ ಸಂಖ್ಯೆ, ನೀರಿನ ಮೂಲ, ಸಮಸ್ಯೆಗಳ ಮಾಹಿತಿಯನ್ನು ಕೂಡಲೇ ಒದಗಿಸಬೇಕೆಂದರು.
ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಬಗ್ಗೆ ಸಲ್ಲಿಸಿರುವ ಮಾಹಿತಿ ಸುಳ್ಳಿನಕಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಡಿಪಿ ಸಭೆಗೆ ಒದಗಿಸುವ ಮಾಹಿತಿ ನಿಖರವಾಗಿರಬೇಕು. ಮಾಹಿತಿಯಲ್ಲಿ ಲೋಪವಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದ ಸಚಿವರು, ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಸುಮಾರು 40ಸಾವಿರ ಮನೆಗಳು ನಿರ್ಮಾಣವಾಗದೆ ಬಾಕಿ ಉಳಿದಿವೆ ಎಂದರು.
ಸರ್ಕಾರ ನೀಡುತ್ತಿರುವ ವಿವಿಧ ಪಿಂಚಣಿ ಸೌಲಭ್ಯಕ್ಕಾಗಿ ಸಲ್ಲಿಸಿರುವವರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರಲು ಕಾರಣವೇನೆಂದು ಮಾಹಿತಿ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ, ಮನಸ್ವಿನಿ, ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಒಟ್ಟು 35356 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂಚೆ ಕಛೇರಿ ಮೂಲಕ ಪಾವತಿಯಾಗುವ ಪಿಂಚಣಿದಾರರಿಗೆ ಮಾತ್ರ ಸಕಾಲದಲ್ಲಿ ಪಿಂಚಣಿ ಪಾವತಿಯಾಗಿಲ್ಲ. ಉಳಿದಂತೆ ನೇರವಾಗಿ ಖಾತೆಗೆ ಜಮೆಯಾಗುವವರಿಗೆ ಪಿಂಚಣಿ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.
ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ವಿತರಣೆ ಮಾಡಬೇಕಿದ್ದ ಆಹಾರದ ಕಿಟ್‍ಗಳನ್ನು ರಾಜಕಾರಣಿಗಳಿಗೆ, ಖಾಸಗಿಯವರಿಗೆ ನೀಡಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ.
ರಾಜಕಾರಣಿಗಳು ಈ ಕಿಟ್ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ವಿತರಿಸಿರುವುದು ಕಂಡು ಬಂದಿದೆ. ಇದರಿಂದ ಅಧಿಕಾರಿಗಳು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದೂರುಗಳು ಕೇಳಿ ಬಂದಿವೆ ಎಂದು ಕಾರ್ಮಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆ ನಡೆಸಿದಷ್ಟು ಭ್ರಷ್ಟತೆ ಯಾವ ಇಲಾಖೆಯೂ ತೋರಿಲ್ಲ. ಇಲಾಖೆ ಅಧಿಕಾರಿಗಳು ಲಿಕ್ಕರ್ ಅಂಗಡಿಗಳೊಂದಿಗೆ ಶಾಮೀಲಾಗಿ ಹಣವನ್ನು ಲೂಟಿ ಮಾಡಿದ್ದಾರೆ. ಮದ್ಯವನ್ನು ಹಣವಿಲ್ಲದವರಿಗೂ ಒಂದಲ್ಲ, ಎರಡಲ್ಲ, ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ. ಲಾಕ್‍ಡೌನ್ ಘೋಷಣೆಯಾಗುವ ಮುನ್ನ ಮಾರಾಟದ ಕಡೆ ದಿನ ಸ್ಟಾಕ್ ವಿವರವನ್ನು ನಿಖರವಾಗಿ ಅಧಿಕಾರಿಗಳು ನೀಡದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ನನ್ನ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜೀವರಾಜು ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಆರ್ಥಿಕವರ್ಷದಲ್ಲಿ ಇಲಾಖೆಗೆ ಗುರಿ ನೀಡಲಾಗಿದ್ದ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಜಿಲ್ಲಾ ಮತ್ತು ಇತರೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ. 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸದೆ ಪ್ರಯಾಣಿಕರು ರೈಲು ಹತ್ತಿ-ಇಳಿಯಲು ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು.