ತುಮಕೂರು: ಕೊರೊನಾ ನಿಯಂತ್ರಿಸಲು ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ನಗರದ ಕನ್ನಡಭವನದಲ್ಲಿ ಡಿಸಿಸಿ ಬ್ಯಾಂಕ್, ತುಮಕೂರು ಹಾಲು ಒಕ್ಕೂಟ, ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪರಿಹಾರ ಧನ ವಿತರಿಸಲಾಯಿತು.
2 ತಿಂಗಳ ಕಾಲ ಮನೆ ಮನೆಗೆ ಭೇಟಿ ಮಾಡಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ನಡೆಸಿದ್ದಾರೆ. ಸಮುದಾಯದ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಶ್ರಮಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಅವಿರತ ಶ್ರಮ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶಂಸಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, 40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರದಂತೆ 12.7 ಕೋಟಿಯನ್ನು ಸಹಕಾರ ಇಲಾಖೆ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಜಿಲ್ಲೆಯ 101 ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಪತ್ರ, ಪ್ರೋತ್ಸಾಹಧನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಸಂಸದ ಜಿ.ಎಸ್.ಬಸವರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಮಹಾಲಿಂಗಪ್ಪ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಉಪವಿಭಾಗಾಧಿಕಾರಿ ಅಜಯ್, ಡಿಎಚ್‍ಒ ಡಾ.ನಾಗೇಂದ್ರಪ್ಪ, ಮುಖಂಡ ಡಾ.ಹುಲಿನಾಯ್ಕರ್ ಹಾಜರಿದ್ದರು.