ತುಮಕೂರು; ಜಿಲ್ಲೆಯಲ್ಲಿ ಶನಿವಾರ ಮೊದಲ ಶ್ರಾವಣದ ಸಂಭ್ರಮ ಕಾಣಿಸಿತು. ನಾಗರ ಪಂಚಮಿಯ ಪೂಜೆಯೂ ಜೋರಾಗಿತ್ತು.
ಕೊರೊನಾ ಕಾರಣ ಹಬ್ಬದ ಗುಂಪು ಸಂಭ್ರಮಕ್ಕೆ ಕಡಿವಾಣ ಹಾಕಿತ್ತಾದರೂ ಅವರರವರ ಮನೆಯಲ್ಲಿ ಪಂಚಮಿಯ ಸಡಗರ ಎಲ್ಲೆ ಮೀರಿತ್ತು.
ಮನೆಯಲ್ಲಿ, ನಾಗರ ಗುಡಿಗಳಲ್ಲಿ ವಿಶೇಷ ಆಲಂಕಾರ ಮಾಡಲಾಗಿತ್ತು.ಪಾವಗಡದ ಉತ್ತರ ಪಿನಾಕಿನಿ ನದಿ ತಟದಲ್ಲಿರುವ ನಾಗಲ ಮಡಿಕೆಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾದ ಬದರೀನಾಥ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಅರ್ಚನೆ, ಅಭಿಷೇಕದ ಸಮೇತ ಪಂಚಮಿಯ ವಿಶೇಷ ಪೂಜೆಗಳು ನಡೆದವು.
ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯದ ರವೀಂದ್ರ ಅವರ ನಾಗ ಕ್ಷೇತ್ರದಲ್ಲಿ ಪೂಜೆ ನಡೆಯಿತು.
ಮೊದಲ ಶ್ರಾವಣದ ಕಾರಣ ದೇವರಾಯನದುರ್ಗದಲ್ಲಿ ವಿಶೇಷ ಪೂಜೆಗಳು ನಡೆದವು.ಶ್ರಾವಣದಲ್ಲಿ ದಾಸಪ್ಪರನ್ನು ಕರೆದು ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಪರಿಪಾಠ ಜಿಲ್ಲೆಯಲ್ಲಿದೆ.
ಆದರೆ ಕೊರೊನಾ ಕಾರಣ ಸಾಕಷ್ಟು ಕಡೆಗಳಲ್ಲಿ ದಾಸಪ್ಪ ರನ್ನು ಕರೆಸದೇ ಮನೆಯವರೇ ಪೂಜೆ ಸಲ್ಲಿಸಿದ್ದು ಕಾಣಿಸಿತು.