Friday, November 22, 2024
Google search engine
Homeಜನಮನಕಂದಕ ನಿವಾರಿಸುವ  ವಿದ್ಯಾಗಮ: ಸಚಿವರ ಜತೆ ಕೈ ಜೋಡಿಸೋಣ

ಕಂದಕ ನಿವಾರಿಸುವ  ವಿದ್ಯಾಗಮ: ಸಚಿವರ ಜತೆ ಕೈ ಜೋಡಿಸೋಣ

ಆರ್.ತಿಪ್ಪೇಸ್ವಾಮಿ


ಕೋವಿಡ್-19 ಕಾರಣದಿಂದ ಶಾಲೆಗಳು ಮುಚ್ಚಿರುವ ಈ ಕಷ್ಟಕಾಲದಲ್ಲಿ ಮಕ್ಕಳು ಅದರಲ್ಲೂ ಗ್ರಾಮೀಣ, ಬಡ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುವುದನ್ನು ತಪ್ಪಿಸಲು, ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ, ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇಟ್ಟುಕೊಳ್ಳುವ ಹಾಗೂ ಅವರಲ್ಲಿ ನಿರಂತರ ಕಲಿಕೆಯನ್ನು ಸ್ವಯಂ ಕಲಿಕಾ ವಿಧಾನಗಳ ಮೂಲಕ ಮುಂದುವರೆಸುವುದೇ ಈ ʻವಿದ್ಯಾಗಮʼ.

ಈ ಕಾಯ್ರಕ್ರಮದ ಅಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ವಾಸ ಮಾಡುವ ಸ್ಥಳಕ್ಕೇ ತೆರಳಿ, ಅಲ್ಲಿ ಲಭ್ಯವಿರುವ ಸ್ಥಳಾವಕಾಶದಲ್ಲಿ ಒಂದೆರಡು ಅವಧಿಯ ಕಾಲ ಇಲಾಖಾ ರೂಪಿಸಿರುವ ʻಪಠ್ಯವಸ್ಥುʼವನ್ನು ಮಕ್ಕಳಿಗೆ ಬೋಧನೆ ಮಾಡಿ, ಹೋಂ ವರ್ಕ್ ನೀಡಿ, ಮೌಲ್ಯಮಾಪನ ಮಾಡುವುದೇ ಪ್ರಮುಖ ಆಶಯವಾಗಿದೆ.

ಕೇಂದ್ರ ಸರ್ಕಾರವೂ ಸಹ ಮೆಚ್ಚುಗೆ ವ್ಯಕ್ತಪಡಿಸಿ, ಇತರ ರಾಜ್ಯಗಳಿಗೆ ಮಾದರಿ ಎಂದಿರುವ ಈ ಮಹತ್ವಾಕಾಂಕ್ಷಿ ಕಾಯ್ರಕ್ರಮ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಾರಿಗೆ ಬಂದ ಬಳಿಕ 4-5ತಿಂಗಳಿನಿಂದ ಮನೆಯಲ್ಲೇ ಇದ್ದ ಮಕ್ಕಳಿಗೆ ಹೊಸ ಚೈತನ್ಯ ಬಂದತಾಯಿತು.

ಗ್ರಾಮೀಣ ಭಾಗದ ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರೂ ತಮ್ಮ ಮಕ್ಕಳ ಶೈಕ್ಷಣಿಕ ʻಭವಿಷ್ಯʼಕ್ಕೆ ಕವಿದಿದ್ದ ಕಾರ್ಮೋಡ ದೂರವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಲಾಕ್ಡೌನ್ ನಿಂದ ಉದ್ಯೋಗ ಕಳೇದುಕೊಂಡು ಬೇರೆ ಬೇರೆ ನಗರಗಳಿಂದ ಸ್ವಂತ ಊರುಗಳಿಗೆ ವಾಪಸ್ಸಾದ ಹಾಗೂ ಖಾಸಗಿ ಶಾಲೆಗೆ ದಾಖಲು ಮಾಡಿದ್ದ ಎಷ್ಟೋ ಸ್ಥಳೀಯ ಪೋಷಕರು ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳಕ್ಕೆ ಕಾರಣವಾಗಿದೆ.

ಅಲ್ಲದೇ ಮಕ್ಕಳಿಗೆ ಮೂಲಭೂತ ಶೈಕ್ಷಣಿಕ ಪರಿಕಲ್ಪನೆಗಳನ್ನೂ ಹಾಗೂ ಕನಿಷ್ಠ ಕಲಿಕಾ ಸಾಮರ್ಥ್ಯಗಳ ಕಲಿಕೆಯನ್ನು ಉಂಟುಮಾಡಿದೆ.

ಈ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಕಾರ್ಯಯೋಜನೆ ರೂಪಿಸಿ, ಭೌತಿಕವಾಗಿ ಶಾಲೆ ಪ್ರಾರಂಭಿಸುವರೆಗೆ ಶಿಕ್ಷಕರು ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಮಕ್ಕಳ ಸ್ವಯಂ ಕಲಿಕೆಗೆ ಪ್ರೇರೇಪಿಸಿ, ಪಠ್ಯಪುಸ್ತಕ, ಅವಶ್ಯ ಅಭ್ಯಾಸ ಪುಸ್ತಕಗಳು/ ಅಬ್ಯಾಸ ಹಾಳೆಗಳನ್ನು ಮಕ್ಕಳಿಗೆ ಪೋಷಕರ ಮೂಲಕ ತಲುಪಿಸುವುದು.

ಬಾಲ ಕಾರ್ಮಿಕ, ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಪಿಡುಗುಗಳಿಗೆ ಮಕ್ಕಳು ಒಳಗಾಗುವುದನ್ನು ತಡೆಗಟ್ಟುವುದು, ಶಾಲೆಗಳು ಮುಚ್ಚಿರುವ ಸಮಯದಲ್ಲಿ ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ವೃದ್ಧಿಸುವುದು, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿಪಡಿಸಿಕೊಳ್ಳುವುದು, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಹಾಗೂ ವಲಸೆ ಮಕ್ಕಳ ಅವಶ್ಯಕತೆಗಳಿಗೆ ವಿಶೇಷ ಆದ್ಯತೆ ನೀಡುವುದು. ಶಿಕ್ಷಕರು, ಮೇಲುಸ್ತುವಾರಿ ಆಡಳಿತ ಮಂಡಳಿಯವರು ಸ್ವಯಂ ಸೇವಕರು, ಪೋಷಕರು, ಹಾಗೂ ಸಮುದಾಯದ ಎಲ್ಲಾ ಭಾಗೀದಾರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಈ ಕಾಯ್ರಕ್ರಮದ ಪ್ರಮುಖ ಉದ್ದೇಶಗಳಾಗಿವೆ.

ಕಳೆದ ಆಗಷ್ಟ್ 4ರಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಶಿಕ್ಷಣದ ಕಲಿಕಾ ಪೂರಕವಾಗಿ ಕಾಲ್ಪನಿಕ ಕಲಿಕಾ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಮತ್ತು ಕಲಿಕಾ ಅಂತರವನ್ನು ಸದ್ಯದ ಪರಿಸ್ಥಿತಿಯಲ್ಲಿ ಸರಿದೂಗಿಸಲು, ವಿಪತ್ತಿನಿಂದ ಉಂಟಾದ ಕಲಿಕಾ ಕಂದರವನ್ನು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯಗೊಳಿಸಲು ಹಾಗೂ ಬಲವರ್ಧಿಸಲು ಸದರಿ ಕಾರ್ಯಕ್ರಮವು ಸಮುದಾಯದ ಅನೌಪಚಾರಿಕ ವಲಯದಲ್ಲಿನ ಅನುಷ್ಠಾನಾತ್ಮಕ ಶೈಕ್ಷಣಿಕ ಚಟುವಟಿಕೆಯಾಗಿದೆ. ಪ್ರಸ್ತುತ ಶಾಲಾ ಶಿಕ್ಷಕ ಸಮುದಾಯವು ಗ್ರಾಮ ಸಮುದಾಯಕ್ಕೆ ತೆರಳಿ ತಾತ್ಕಾಲಿಕವಾಗಿ ರೂಪುಗೊಂಡ ಕಲಿಕಾ ಕೇಂದ್ರಗಳಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾಗಮ ಕಾಯ್ರಕ್ರಮವನ್ನು ವಿನ್ಯಾಸಗೊಳಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ ಹಾಗೂ ಇಂತಹ ಸನ್ನಿವೇಶವು ಮಕ್ಕಳ ಕಲಿಕಾ ಬೆಳವಣಿಗೆಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಕಲಿಕಾ ಪ್ರಕ್ರಿಯೆಯನ್ನು ನಿರಂತರವಾಗಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಯೂ ಹೌದು. ಇದಕ್ಕೆ ಪುಷ್ಠಿನೀಡುವಂತೆ ಇಲಾಖೆಯು ಸಾಕಷ್ಟು ಮಾರ್ಗಸೂಚಿಗಳನ್ನು ಶಿಕ್ಷಕರು ಮತ್ತು ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳಿಗೆ ನೀಡಿ, ಕೋವಿಡ್-19 ನಿಯಮಾನುಸಾರ ಅನುಷ್ಠಾನ ಮಾಡಲು ಸುತ್ತೋಲೆ ಹೊರಡಿಸಿ, ಸೂಕ್ತ ಮೌಲ್ಯಮಾಪನ ಕ್ರಮಗಳೊಂದಿಗೆ ಮಕ್ಕಳ ಕಲಿಕಾ ಪ್ರಗತಿಗೆ ಮುಂದಾಗಲು ತಿಳಿಸಿದೆ.

ಕಾರ್ಯಕ್ರಮ ಅನುಷ್ಠಾನಗೊಂಡು, ಎರಡು ತಿಂಗಳು ಕಳೆದಿದ್ದು, ಹಲವು ಧನಾತ್ಮಕ ಅಂಶಗಳನ್ನು ಕಾಣಬಹುದಾಗಿದೆ. ಶಿಕ್ಷಕರು ಮಕ್ಕಳು ಇರುವ ಸಮುದಾಯಕ್ಕೇ ತೆರಳುವುದರಿಂದ ಮಕ್ಕಳ ಕೌಟುಂಬಿಕ, ಆರ್ಥಿಕ ಪರಿಸ್ಥಿತಿಯ ಜತೆಗೆ ಭೌಗೊಳಿಕ ಪ್ರದೇಶ ಪರಿಚಯವಾಗಿದೆ.

ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘಗಳ ಮೂಲಕ ತನ್ನದೇ ಆದ ಕೊಡುಗೆ ನೀಡುವ ಬಗ್ಗೆ ಅನೇಕ ಕಡೆ ಚರ್ಚೆ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಾರಣವಾಗಿದೆ.

ಸಮುದಾಯಕ್ಕೆ ತೆರಳಿ ಪೋಷಕರ ಮುಂದೆ ಮಕ್ಕಳಿಗೆ ಬೋಧನೆ ಮಾಡುವುದರಿಂದ ಶಿಕ್ಷಕರ ಬಗ್ಗೆ ಗೌರವ ಹೆಚ್ಚಳಕ್ಕೂ ಕಾರಣವಾಗಿದೆ. ಮಕ್ಕಳಿಗೆ ಪಾಠ ಬೋಧನೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು, ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರಗಳ ಸಾಧಕರು, ಸಂಪನ್ಮೂಲ ವ್ಯಕ್ತಿಗಳನ್ನು ಸುಲಭವಾಗಿ ದೊರೆಯುವುದರಿಂದ ಕಲಿಕೆಯೂ ಪರಿಣಾಮಕಾರಿಯಾಗಿ ಉಂಟಾಗಿದೆ.

ಅಷ್ಟೇ ಅಲ್ಲದೆ, ಪರಿಸರ ಅಧ್ಯಯನ ವಿಷಯದಲ್ಲಿ ಸ್ಥಳೀಯ ಜೀವ ವೈವಿಧ್ಯತೆ, ಕುಟುಂಬ, ಸಂಬಂಧಗಳು, ಆಹಾರ ವೈವಿಧ್ಯತೆ, ಆಹಾರ ಸರಪಳಿ ಇತ್ಯಾದಿ ಸಾಕಷ್ಟು ಅಂಶಗಳು ಬಹುಬೇಗ ಮಕ್ಕಳಿಗೆ ಅರ್ಥವಾಗಲು ಅನುಕೂಲವಾಗಿದೆ.

ಇದರ ಸಾಧಕ-ಬಾಧಕಗಳು ಇಷ್ಟು ದಿನ ಮುನ್ನಲೆಗೆ ಬಾರದಿದ್ದರೂ ಈ ಎರಡು-ಮೂರು ದಿನಗಳಿಂದ ಮಾಧ್ಯಮಗಳಲ್ಲಿ ʻವಿದ್ಯಾಗಮʼ ಏಕಾಏಕಿ ಬಂದಿರುವುದು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿಯುವ ಪರಿಸ್ಥಿತಿ ಎದುರಾಗಿದೆ.

ಈ ಕಾರ್ಯಕ್ರಮ ಅನುಷ್ಠಾನದಿಂದಲೇ ಶಿಕ್ಷಕರ ಮತ್ತು ಮಕ್ಕಳಿಗೆ ಕೊರೋನ ಹಬ್ಬಲು ಕಾರಣವಾಗಿದೆ ಎಂಬುದು ಹಲವರ ವಾದವಾಗಿದೆ. ಅವರ ವಾದ ಸರಿ ಇರಬಹುದು. ಶಿಕ್ಷಕರು ಮತ್ತು ಮಕ್ಕಳಿಗೆ ಕೊರೋನ ಹರಡಲು ವಿದ್ಯಾಗಮ ಒಂದೇ ಕಾರಣವಾಗಿರದೇ ಬೇರೆ ಬೇರೆ ಕಾರಣಗಳೂ ಇರಬಹುದು.

ಯಾರಿಗೂ ಕಾಣದ ಸತ್ಯವೂ ಇದರ ಹಿಂದೆ ಅಡಗಿರಲೂ ಬಹುದು. ಆದರೆ, ಎಷ್ಟೋ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ನೀಡಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ, ಪರಿಣಾಮಕಾರಿ ಕಲಿಕೆಯನ್ನುಂಟು ಮಾಡಿ, ಇಲಾಖೆಯ ಆಶಯವನ್ನು ಈಡೇರಿಸಿದ ಯಶಸ್ಸು ಶಿಕ್ಷಕರಿಗೆ ಸಲ್ಲುತ್ತದೆ. ಸರ್ಕಾರಿ ಶಾಲೆಗಳ ಶಿಕ್ಷಕರ ಕ್ರಿಯಶೀಲತೆ ಹಾಗೂ ಸಮಾಜೋಮುಖಿ ಕಾರ್ಯಗಳು ಕೆಲ ಖಾಸಗಿ ಶಾಲೆಗಳಿಗೂ ಹೊಡೆತ ನೀಡಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಸಮಯೋಚಿತ, ಸದುದ್ದೇಶಪೂರಿತ ಈ ಕಾಯ್ರಕ್ರಮ ಯಾವುದೇ ಲೋಪಗಳಿಲ್ಲದೆ, ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯನ್ನೂ ನೀಡುವ ಜೊತೆಜೊತೆಗೇ ಕೊರೋನಾ ಸಂದರ್ಭದಲ್ಲಿ ಅನುಸರಿಸಬೇಕಾದ ಹಲವು ಸುರಕ್ಷತಾ ಕ್ರಮಗಳನ್ನು ರೂಢಿಸಿಕೊಳ್ಳಲು ಪೋಷಕರಿಗೂ ಅರ್ಥೈಸಿದೆ.

ಖಾಸಗಿ ಶಾಲೆಗಳ ಆನ್ಲೈನ್ ತರಗತಿಗಳಿಗಿಂತಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ʻವಿದ್ಯಾಗಮʼ ಕಾರ್ಯಕ್ರಮ ಹಾಗೂ ಚಂದನ ವಾಹಿನಿಯ ಸಂವೇದ ಇ-ಕಲಿಕೆ ಪೋಷಕರಲ್ಲಿ ಹೊಸ ಭರವಸೆಯನ್ನೇ ಹುಟ್ಟುಹಾಕಿರುವುದರಲ್ಲಿ ಸಂಶಯವಿಲ್ಲ.

ಕೆಲ ಗ್ರಾಮಗಳಲ್ಲಿ ಶಿಕ್ಷಕರಿಗೆ ಬಹಿಷ್ಕಾರ ಹಾಕಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೆಲವು ಪೋಷಕರೇ ʻವಿದ್ಯಾಗಮʼ ವನ್ನು ವಿರೋಧಿಸಿರುವುದೂ ಇದೆ. ಇಷ್ಟೆಲ್ಲಾ ಪರ-ವಿರೋಧಗಳ ನಡುವೆಯೂ ಈ ಕಾರ್ಯಕ್ರಮವನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ಮಾನ್ಯ ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಶಿಕ್ಷಕರು, ಮಕ್ಕಳು, ಪೋಷಕರು ಮತ್ತು ಸಮುದಾಯ ಸಂತಸಪಡುವ ಬದಲಾಗಿ, ಆತಂಕ ಪಡುವಂತಾಗಿದೆ.

ಗ್ರಾಮೀಣ ಭಾಗದ ಮಕ್ಕಳ ಪೋಷಕರಿಗೆ ಅದರಲ್ಲೂ. ಬಡ, ಹಿಂದುಳಿದ, ವಲಸೆ ಮಕ್ಕಳು ಸೇರಿದಂತೆ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವರದಾನವಾಗಿದ್ದ ಈ ವಿದ್ಯಾಗಮ ಸ್ಥಗಿತ ತುಂಬಲಾರದ ನಷ್ಟ ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ಕೋವಿಡ್ನಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಲ್ಪ ಮಟ್ಟಿನ ತೊಂದರೆಯಾಗಿರುವುದೇನೋ ನಿಜ. ಆದರೆ ವಿದ್ಯಾಗಮ ಕಾರ್ಯಕ್ರಮದಿಂದಾಗಿರುವ ಅನುಕೂಲ-ಅನನುಕೂಲಗಳನ್ನು ಒರೆಹಚ್ಚಿ, ತಜ್ಞರ ಅಭಿಪ್ರಾಯ ಪಡೆದು, ಮುಂದಿನ ದಿನಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಮಕ್ಕಳ ಕಲಿಕೆಯಲ್ಲಿ ಉಂಟಾಗಬಹುದಾದ ಬಹುದೊಡ್ಡ ಕಂದರವನ್ನು ಸ್ವಲ್ಪಮಟ್ಟಿಗಾದರೂ ಮುಚ್ಚಲು ಪ್ರಯತ್ನಿಸಬಹುದು.

ಈ ನಿಟ್ಟಿನಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ಸಮುದಾಯ ಶಿಕ್ಷಣ ಸಚಿವರ ಪರವಾಗಿ ನಿಲ್ಲಲೇಬೇಕಾದ ಅನಿವಾರ್ಯತೆ ತುರ್ತಾಗಿ ಆಗಬೇಕಿದೆ.


ಲೇಖಕರು ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ,
ದ್ವಾರನಕುಂಟೆ, ಸಿರಾ ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?