Publicstory. in
ತುರುವೇಕೆರೆ: ದಲಿತರು ಮತದಾನ ಅಸ್ತ್ರದ ಮೂಲಕ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವ್ಯಕ್ತಿಗಳು ಹಾಗು ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ; ದಲಿತರ ಅಸ್ಮಿತೆಗೆ ಉಳಿಗಾಲವಿಲ್ಲವೆಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಕಿವಿ ಮಾತು ಹೇಳಿದರು.
ತಾಲ್ಲೂಕಿನ ಅರಳೀಕೆರೆ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಗ್ರಾಮ ಶಾಖೆಯ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಪುರೋಹಿತಶಾಹಿ ವ್ಯವಸ್ಥೆ ಜಾತಿ, ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಮೂಲಕ ದೇಶದ ಜನರ ಮನಸ್ಸುಗಳನ್ನು ಕದಡುವ ಕುತಂತ್ರ ನಡೆಸುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದುತ್ವದ ಹೆಸರಿನಲ್ಲಿ ಸಮುದಾಯ ಸಮುದಾಯಗಳ ನಡುವೆ ಕೋಮುವಾದ ಭಿತ್ತಿ ಮತ್ತೆ ಮನುವಾದವನ್ನು ಮರುಸ್ಥಾಪಿಸುವ ಕುಟಿಲೋಪಾಯಕ್ಕೆ ಮುಂದಾಗಿದ್ದಾರೆ.
ದೇಶದ ಜನರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಲ್ಪಿಸಿಕೊಟ್ಟ ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ವಿಶ್ವಮಾನ್ಯಗಳಿಸಿರುವುದ ಶ್ಲಾಘನೀಯ.
ಇಂದಿನ ವಿಷಮಸ್ಥಿತಿಯ ರಾಜಕಾರಣ ದಲಿತರು ಸೇರಿದಂತೆ ತಳ ಸಮುದಾಯಗಳು ಹೋರಾಟದ ಮೂಲಕವೇ ಸಾಂವಿಧಾನಿಕ ಹಕ್ಕು ಬಾದ್ಯತೆಗಳನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಕಂದಾಚಾರ, ಮೌಢ್ಯ, ದೇವರು ದಿಂಡಿರಂತಹ ಮೂಢನಂಬಿಕೆಗಳಿಂದ ದಲಿತರು ಹೊರ ಬಂದು ಪ್ರಗತಿಪರ ಮನೋಭಾವನೆ ಬೆಳೆಸಿಕೊಳ್ಳಿ. ಡಿಎಸ್ಎಸ್ ಅಂಬೇಡ್ಕರ್ ಚಿಂತನೆ ಹಾಗು ಎಲ್ಲ ಶೋಷಿತರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಕವಿ ಗುರುಪ್ರಸಾದ್ ಕಂಟಲಗೆರೆ ಮಾತನಾಡಿ, ಅಂಬೇಡ್ಕರ್ ಹಾಗು ದಲಿತ ಚಿಂತನೆಗಳು ಕೇವಲ ಘೋಷಣೆ, ವಿಜೃಂಭಣೆಗೆ ಸೀಮಿತವಾಗದೆ ಅವರ ವಿಚಾರಧಾರೆಗಳನ್ನು ತಮ್ಮ ಅಂತಃಕರಣದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
40 ವರ್ಷಗಳ ಹಿಂದೆ ಕೇವಲ ಪ್ರಜ್ಞಾವಂತರಿಗಷ್ಟೇ ತಿಳಿದಿದ್ದ ಅಂಬೇಡ್ಕರ್ ಈಗ ಅಂಬೇಡ್ಕರ್ ಬದುಕು, ಬವಣೆ, ಹೋರಾಟಗಳು’ಮಹಾನಾಯಕ’ ಧಾರವಾಹಿಯ ಮೂಲಕ ಪ್ರತಿಯೊಬ್ಬ ಮನೆ, ಮಕ್ಕಳಿಗೂ ತಲುಪುತ್ತಿರುವುದು ಆಶಾದಾಯಕ ಎಂದು ಹೇಳಿದರು.
ಶೋಷಿತ ಸಮುದಾಯಗಳ ಯುವಕರು ಸಮಾಜದಲ್ಲಿ ಅಸಹಿಷ್ಣುತೆ ಭಿತ್ತು ಜನರಿಂದ ಸದಾ ಎಚ್ಚರದಿಂದ ಇರಬೇಕು. ಅತಿ ಹೆಚ್ಚು ಸಂಖ್ಯೆಯಲ್ಲಿರುವ ದಲಿತರಿಗೆ ರಾಜಕೀಯ ಅವಕಾಶಗಳೇ ವಿರಳ ಎಂದು ವಿಷಾಧ ವ್ಯಕ್ತಪಡಿಸಿದರು.
ಜೆ.ಸಿ.ರಂಧಾಮಯ್ಯ ಜನಕಲೋಟಿ ಅವರು ಉಪನ್ಯಾಸ ನೀಡಿದರು.
ಇದೇ ವೇಳೆ ದಂಡಿನಶಿವರ ಕುಮಾರ್ ಸಂಗಡಿಗರು ಕ್ರಾಂತಿಗೀತೆ ಹಾಗು ಹೋರಾಟದ ಹಾಡುಗಳ ಮೂಲಕ ಜನರನ್ನು ಹುರಿದುಂಬಿಸಿದರು.
ಸಮಾರಂಭದಲ್ಲಿ ದಸಂಸ ತಾಲ್ಲೂಕು ಸಂಚಾಲಕರುಗಳಾದ ಡಾ.ಚಂದ್ರಯ್ಯ, ದಂಡಿನಶಿವರ ಕುಮಾರ್, ಸುಧಾಕರ್, ಶಿವರಾಜ್, ಸುರೇಶ್ಬಾಬು, ಮಲ್ಲೂರ್ ತಿಮ್ಮೇಶ್, ಬೊಮ್ಮಲಿಂಗಣ್ಣ ಮುಖಂಡ ಅರಳೀಕೆರೆ ರವಿಕುಮಾರ್ ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.