ತುರುವೇಕೆರೆ: ತಾಲ್ಲೂಕಿನ ವಿದ್ಯಾರಣ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಕಡೆಗಣಿಸಿ ನೂತನ ಕಾರ್ಯದರ್ಶಿಯನ್ನು ಅಕ್ರಮವಾಗಿ ನೇಮಿಸಿದ್ದು ಈ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದೆ ಎಂದು ಸದಸ್ಯ ತೋವಿನಕೆರೆಅಡವೀಶಯ್ಯ ದೂರಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಡಳಿತ ಮಂಡಳಿಯ ದಾಖಲೆ ಪ್ರದರ್ಶಿಸಿ ಮಾತನಾಡಿದರು.
ಹಿಂದಿನ ಕಾರ್ಯದರ್ಶಿ ರಂಗಸ್ವಾಮಿ ಅವರು ಶಿಕ್ಷಣ ಸಂಸ್ಥೆಯ ಏಳಿಗೆಗಾಗಿ ಅಪಾರ ಶ್ರಮವಹಿಸಿದ್ದರು. ಸಂಸ್ಥೆಯ ಸಾಧಕ ಭಾದಕಗಳನ್ನು ಕುರಿತಂತೆ ರಂಗಸ್ವಾಮಿಯವರು ಆಡಳಿತ ಮಂಡಳಿಯ ಸದಸ್ಯರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುತ್ತಿದ್ದರು.
ಆದರೆ ಆ ಕಾರ್ಯದರ್ಶಿ ರಂಗಸ್ವಾಮಿಯವರ ಅಕಾಲಿಕ ನಿಧನದಿಂದ ಸಂಸ್ಥೆಯ ಆಡಳಿತವೇ ಹಳೀ ತಪ್ಪಿದೆ. ಸಂಸ್ಥೆಯಲ್ಲಿ ತೋಟಗಾರಿಕೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಯಣ್ಣ ನಿಯಮ ಮೀರಿ ವರ್ತಿಸುತ್ತಿದ್ದಾರೆ. ಇದಕ್ಕೆ ಮೊದಲ ಪ್ರಯತ್ನವೆಂಬಂತೆ ತಮ್ಮ ಮಗಳನ್ನೇ ಕಾರ್ಯದರ್ಶಿಯನ್ನಾಗಿ ಏಕಾಏಕಿ ನೇಮಕ ಮಾಡುವ ತಂತ್ರಗಾರಿಕೆ ನೆಡೆಸಿರುವುದನ್ನು ಪ್ರಬಲವಾಗಿ ವಿರೋದಿಸುವೆ ಎಂದರು.
ಹಿಂದಿನ ಕಾರ್ಯದರ್ಶಿ ರಂಗಸ್ವಾಮಿಯವರು ಆಡಳಿತ ಮಂಡಳಿಯ ಮುಂದೆ ಹಣಕಾಸು ಮತ್ತಿತರ ವಿಚಾರಗಳು ಆಡಳಿತ ಮಂಡಳಿಯ ಸಭೆಯ ಗಮನಕ್ಕೆ ತರುತಿದ್ದರು. ಆದರೆ ತೋಟಗಾರಿಕೆ ಶಿಕ್ಷಕ ಜಯಣ್ಣ ಆಡಳಿತ ಮಂಡಳಿಯ ಕೆಲ ಸದಸ್ಯರನ್ನು ಬುಟ್ಟಿಗೆ ಹಾಕಿಕೊಂಡು ಸಂಸ್ಥೆಯ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಾರ್ಯದರ್ಶಿ ನೇಮಕ ಅಕ್ರಮವಾಗಿದ್ದು, ಸಂಸ್ಥೆ ಹಾಗೂ ಸಿಬ್ಬಂದಿಗಳ ಹಿತರಕ್ಷಣೆಗೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಶೀಘ್ರದಲ್ಲೇ ಸಂಸ್ಥೆಯ ಇನ್ನುಳಿದ ಸದಸ್ಯರೊಂದಿಗೆ ಪಟ್ಟಣದಲ್ಲಿ ವಿದ್ಯಾರಣ್ಯ ಸಂಸ್ಥೆ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.