ಚಿತ್ರ ಲೇಖನ: ಡಾ.ಐ.ಐ.ಹೂಗಾರ
ಕ್ಯಾಕ್ಟಸ್ ಅದೇ ನಮ್ಗೆಲ್ಲ ಚಿರಪರಿಚಿತ ಪಾಪಸ್ಸುಕಳ್ಳಿ. ಮೂಗು ಮುರಿಯಬೇಡಿ. ಪೂರ್ತಿ ಲೇಖನ ಓದಿ. ಹಸು ಸಾಕಣಿದಾರರಿಗೆ ಇದು ಶುಭ ಸುದ್ದಿ. ಈ ಹೊಸ ಮೇವು ಬೆಳೆಯಬಹುದು.
ರಸ್ತೆಗಳ ಅಕ್ಕ ಪಕ್ಕ ಕೊರಕಲು ಗುಡ್ಡ ಬೆಟ್ಟಗಳ ಮೇಲೆ ಹೊಲ ಬದುಗಳಲಿ ಅಡ್ಡಾದಿಡ್ಡಿಯಾಗಿ ಮಟ್ಟಸವಾಗಿ ಬೆಳೆದು ಮೈಯೆಲ್ಲ ಮುಳ್ಳು ಹೊದ್ದುಕೊಂಡು ಮೈಚಾಚಿದ ಪಾಪಸ್ಸುಕಳ್ಳಿಯನ್ನು ನಾವೆಲ್ಲ ಗಮನಿಸಿರುತ್ತೇವೆ.
ದಪ್ಪ ಹಗೂ ಚಪ್ಪಟೆ ಎಲೆಯಂತಿರುವ ಹಸಿರು ಕಾಂಡ (ಕ್ಲೆಡೋಡ್ ಅಥವಾ ಪ್ಯಾಡಲ್ಸ್) ಗಳ ಮೈಯೆಲ್ಲ ಮುಳ್ಳು ಮೆತ್ತಿಕೊಂಡಿರುತ್ತದೆ.. ಇದು ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಕ್ಯಾಕ್ಟಿ ಅಥವಾ ಕ್ಯಾಕ್ಟಸ್ ಅದುವೆ ಪಾಪಸ್ಸು ಕಳ್ಳಿ. ಇದು ಅರೆ ಒಣ ಮತ್ತು ಒಣ ಪ್ರದೇಶಕ್ಕೆ ಮೇವು ಬೆಳೆಯಾಗಿ ಬರದ ಬರ್ಬರತೆಯನ್ನು ಸಹಿಸಿಕೊಂಡು ಬೆಳೆಯಬಲ್ಲ ಗಿಡವಾಗಿದೆ.
ಮುಳ್ಳುರಹಿತ ಪಾಪಸ್ಸು ಕಳ್ಳಿ !!
ಸಾಮಾನ್ಯವಾಗಿ ಮುಳ್ಳುಮುಳ್ಲಾದ ಪಾಪಸ್ಸು ಕಳ್ಳಿಯನ್ನು ನೋಡಿರುತ್ತೇವೆ. ಆದರೆ ಮುಳ್ಳೇ ಇಲ್ಲದ ನುಣುಪಾದ ಕ್ಯಾಕ್ಟಸ್ ನೋಡಿರುವುದು ಅಪರೂಪವೇ ಸರಿ. ನಾನು ಹೇಳ ಹೊರಟಿರುವುದು ಅಂದರೆ ಮುಳ್ಳು ರಹಿತ ಹಚ್ಚ ಹಸಿರಿನ ಕ್ಯಾಕ್ಟಸ್ ಕುರಿತಂತೆ. ಕ್ಯಾಕ್ಟಸ್ ನ ಹೆಡೆಯಾಕಾರದ ಕಾಂಡವು ಶೇ೯೦ ರಷ್ಟು ನೀರಿನ ಅಂಶವನ್ನು ಹೊಂದಿದ್ದು, ಬದಲಾಗುತ್ತಿರುವ ವಾತಾವರಣದಲ್ಲಿ ಮಳೆಯ ಅಭಾವ ವಿದ್ದರೂ ಬರಕ್ಕೆ ಸೆಡ್ಡುಹೊಡೆದು ಪುಟಿದೇಳಬಲ್ಲ ಗಿಡವಾಗಿದೆ.
ಸದಾ ಹಸಿರಾಗಿ ಹಸಿಹಸಿಯಾಗಿ ಅವಶ್ಯಕ ಶಕ್ತಿಯ ಕಣಜವಾಗಿ ಎಂಥ ನೆಲೆದಲ್ಲಿಯೂ ಹಸಿರು ಉಕ್ಕಿಸಬಲ್ಲ ಛಾತಿ ಈ ಮುಳ್ಳಿಲ್ಲದ ಪಾಪಸ್ಸುಕಳ್ಳಿಗಿದೆ. ಇತ್ತೀಚಿನ ದಿನಗಳಲ್ಲಿ ಮೆಕೆ ಕುರಿ ಹಾಗೂ ಪಶುಗಳ ಮೆಚ್ಚಿನ ಮೇವು ಎಂದೇ ಹೇಳಬಹುದು.
ಭಾರತದ ಪರಿಸರದಲ್ಲಿ ಸುಮಾರು ೫೩ ಪ್ರತಿಶತ ರಷ್ಟು ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶವಿದೆ. ಜೊತೆಗೆ ಉಷ್ಣಾಂಶದ ತೀವ್ರತೆ, ಬಿರುಗಾಳಿ, ಚದುರಿದ ಮಳೆ, ಸತ್ವರಹಿತ ಮಣ್ಣು ಇತ್ಯಾದಿ ವಾತಾವರಣದ ವೈಪ್ಯರೀತ್ಯಗಳಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದೆ ರೈತರ ಕೃಷಿ ಸಂಕಷ್ಟಕೀಡಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತ ತನ್ನ ಜೀವದ ಜೀವಾಳಾದ ಜಾನುವಾರುಗಳಿಗೆ ಮೇವು ಹೊಂದಿಸುವುದು ಕಷ್ಟ ಸಾಧ್ಯವೇ ಸರಿ.
ಜಾನುವಾರುಗಳ ಹಸಿರು ಮೇವಾಗಿ ಕ್ಯಾಕ್ಟಸ್
ಪ್ರಪಂಚದ ಅನೇಕ ಭಾಗಗಳಲ್ಲಿ ವಾತಾವರಣದಲಾಗುತ್ತಿರುವ ತೀಕ್ಷ್ಣ ಬದಲಾವಣೆಗಳು ಭೀತಿಯನ್ನು ಸೃಷ್ಟಿಸುತ್ತಿವೆ. ಅದರಲ್ಲೂ ಶುಷ್ಕ ಹಾಗೂ ಅರೆ ಶುಶ್ಕ ಪ್ರದೇಶಗಳಲ್ಲಿ ಇದರ ಪರಿಣಾಮ ಕಣ್ಣಿಗೆ ರಾಚುವಂತಿದೆ.
ಈ ಕಾರಣಗಳಿಂದ ಸಹಜವಾಗಿ ಆಗಬೇಕಾದ ಮಳೆ ಬಾರದೆ ಒಂದೊಮ್ಮೆ ಬಂದರೂ ಪ್ರವಾಹದೋಪಾದಿಯಲ್ಲಿ ಸುರಿದು ಅಳಿದುಳಿದ ಕೃಷಿ ಬೆಳೆ ಮತ್ತು ಬದುಕನ್ನು ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಕಾಳು ಕಡಿ ಬೆಳೆದುಕೊಂಡು ಅದರಲ್ಲೂ ಸರಿಯಾಗಿ ಬೆಳೆ ಬಂದರೆ ಜೀವನೋಪಾಯ ಇಲ್ಲವೇ ಅಪಾಯ ಎನ್ನುವ ಪರಿಸ್ಥಿತಿಯಾಗಿದೆ.
ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ದೊಡ್ಡ ಸವಾಲೇ ಸರಿ. ಹಾಗಾಗಿ ಮುಳ್ಳುರಹಿತ ಪಾಪಸ್ಸು ಕಳ್ಳಿ ನಿಜಕ್ಕೂ ವರದಾನ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ಕ್ಯಾಕ್ಟಸ್ ಹಸಿರುಮೇವಾಗಿ ಜಾನುವಾರುಗಳಿಗೆ ನೀಡುವುದು ಜನಪ್ರಿಯವಾಗುತ್ತಿದೆ. ಪಾಪಸ್ಸು ಕಳ್ಳಿ ಬರೀ ಮೇವಾಗಿ ಬಳಸುವುದಲ್ಲದೆ ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ. ಶೇಕಡಾ ೮೫-೯೦ ರಷ್ಟು ನೀರಿನಾಶ ಹೊಂದಿದ ಹೇರಳ ವಿಟಾಮಿನ್ ಕಾರ್ಬೋಹೈಡ್ರೇಟ್, ಪ್ರೋಟೀನ್(೫-೯%), ಕ್ಯಾಲ್ಸಿಯಂ, ಪೋಟ್ಯಾಸಿಯಂ ಮುಂತಾದುವುಗಳ ಆಗರವಾಗಿದೆೆ. ಆಷ್ಟೆಯಲ್ಲ ಮನುಷ್ಯರು ಸಹ ತಿನ್ನಬಹುದಾಗಿದೆ. ಈ ಮುಳ್ಳುರಹಿತ ಪಾಪಸ್ಸುಕಳ್ಳಿಯನ್ನು ಒಂದು ಹೆಕ್ಟೇರ್ ಪ್ರದೇಶದಲ್ಲಿ ಸರಿಸುಮಾರು ೨೦ ಟನ್ ಗಳಷ್ಟು ಬೆಳೆಯಬಹುದಾಗಿದೆ.
ಕೊಂಚ ನಿಗಾ ವಹಿಸಿ ಬೆಳೆಸಿದ್ದೆ ಯಾದರೆ ಹುಲುಸಾಗಿ ಬೆಳೆದು ೫-೬ ಹಸುಗಳಿಗೆ ಒಂದು ವರ್ಷಕ್ಕಾಗುವಷ್ಟು ಹಸಿರು ಮೇವು ಒದಗಿಸಬಹುದಾಗಿದೆ.
ಪಾಪಸ್ಸು ಕಳ್ಳಿ ನಾಟಿ ಹೇಗೆ ?
ತಾಜಾ ಪಾಪಸ್ಸುಕಳ್ಳಿ ಕಾಂಡವು ಶೇ೮೫-೯೦% ರಷ್ಟು ನೀರಿನಂಶ ಕೂಡಿದ್ದು, ನೀರಿನಂಶ ೬೫ ರಿಂದ ೭೦% ರಷ್ಟು ಇಳಿಸಿ ನಾಟಿ ಮಾಡಬೇಕು. ತಾಯಿ ಗಿಡದ ಕಾಂಡಗಳನ್ನು ಬೇರ್ಪಡಿಸಿ ೪ ರಿಂದ ೫ ದಿನಗಳ ಕಾಲ ನೆರಳಿನಲ್ಲಿ ಹರಡಿದಾಗ ನೈಸರ್ಗಿಕವಾಗಿ ತೇವಾಂಶ ಕಡಿಮೆಯಾಗುವುದು.
ಕಾಂಡವು ಅಗಲವಾಗಿದ್ದು ಹಾವಿನ ಹೆಡೆಯಾಕಾರದಲ್ಲಿ ೬ ರಿಂದ ೧೫ ಇಂಚು ಅಗಲದವರೆಗೆ ಬೆಳೆಯುವುದರಿದ ಕಾಂಡವನ್ನು ಪಟ್ಟೆ ಎಂದು ಕರೆಯುತ್ತಾರೆ. ಇದಕ್ಕಾಗಿ ಕಾಂಡಗಳನ್ನು ನೆರಳಿನಲ್ಲಿ ಒಣಗಿಸಬೇಕಾಗುತ್ತದೆ.
ಮುಂಗಾರು ಮಳೆಯ ನಂತರ ಅಂದರೆ ಅಕ್ಟೋಬರ್-ನವೆಂಬರ್ ನಂತರ ಮಾರ್ಚ್ ವರೆಗೂ ನಾಟಿ ಮಾಡಬಹುದಾಗಿದೆ. ಒಂದು ಅಡಿ ಎತ್ತರ ಮತ್ತು ೨ ಅಗಲ ಇರುವ ಹಾಗೆ ಏರುಮಡಿ ಮಾಡಿಕೊಳ್ಳಬೇಕು. ಎರುಮಡಿಯ ಬದುವಿನ ಮೇಲೆ ನಾಟಿ ಮಾಡಬೇಕು. ನಾಟಿ ಮಾಡುವಾಗ ಮುಕ್ಕಾಲು ಅಡಿ (೯ಇಂಚು) ಆಳದಲ್ಲಿ ಪಾಪಸ್ಸುಕಳ್ಳಿಯ ಕಾಂಡದ ಪಟ್ಟೆಯನ್ನು ಮಣ್ಣಿನಲ್ಲಿ ಸೇರಿಸಬೇಕು.
ನಾಟಿ ಮಾಡಿದ ತಕ್ಷಣವೆ ನೀರು ಕೊಡದೇ, ಒಂದು ವಾರ ಕಳೆದ ನಂತರ, ನೀರು ಪೂರೈಸಬೇಕು. ತಲಾ ಒಂದು ಪಾಪಸ್ಸುಕಳ್ಳಿಯ ಪಟ್ಟೆಗೆ ಒಂದು ಲೀಟರ್ ನಂತೆ ನೀರು ಕೊಟ್ಟರೆ ಸಾಕು. ನಂತರದ ದಿನಗಳಲ್ಲಿ ಹತ್ತು ದಿನಕ್ಕೊಮ್ಮೆ ನೀರು ಕೊಡಬೇಕು.
ಪಾಪಸ್ಸು ಕಳ್ಳಿ ನಾಟಿ ಮಾಡಲು ನಿರುಪಯುಕ್ತ ಬರಡು ಭೂಮಿ ಸೂಕ್ತ.
ಒಂದು ಗಿಡವು ಒಂದು ವರ್ಷದಲ್ಲಿ ೧೫-೩೦ ಪಟ್ಟೆಗಳನ್ನು ಕೊಡುತ್ತದೆ. ಒಂದು ವರ್ಷದ ನಂತರ ಪಾಪಸ್ಸು ಕಳ್ಳಿಯ ಪಟ್ಟೆಗಳನ್ನು ಕೊಯಿಲು ಮಾಡಿ ಮೇವಾಗಿ ಬಳಸಬಹುದಾಗಿದೆ.
ತಾಯಿ ಪಟ್ಟೆಯನ್ನು ಬಿಟ್ಟು ಎರಡನೆ ಮತ್ತು ಮೂರನೆ ಹಂತದ ಪಟ್ಟೆಗಳನ್ನು ಬೆಳವಣಿಗೆಯ ಅನುಸಾರ ಕೊಯ್ಲು ಮಾಡಿ ಮೇವಾಗಿ ನೀಡಬಹುದು.
ಮೇವಾಗಿ ಏನಿದರ ವಿಶೇಷತೆ
• ಪಾಪಸ್ಸು ಕಳ್ಳಿಯ ಪಟ್ಟೆಗಳಲ್ಲಿ ೮೫-೯೦% ನೀರಿನಾಂಶವಿದ್ದು ವರ್ಷಪೂರ್ತಿ ರಸಭರಿತವಾಗಿ ಹಸಿಯಾಗಿ ಹಸಿರಾಗಿರುತ್ತದೆ.
• ಮುಳ್ಳುರಹಿತ ಪಾಪಸ್ಸುಕಳ್ಳಿ ಸವಳು ನೆಲಕ್ಕೂ ಒಗ್ಗುತ್ತದೆ ಹಾಗೂ ಮಣ್ಣಿನ ಕೊರತೆ ತದೆಗಟ್ಟಲು ಸಹಕಾರಿ. ಮಣ್ಣು ಮತ್ತು ನೀರು ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ
• ಸಮೃದ್ಧವಾಗಿ ಬೆಳೆದ ಪಟ್ಟೆಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಹಸುಗಳಿಗೆ/ ಆಡುಗಳಿಗೆ ಇತರೆ ಮೇವಿನೊಂದಿಗೆ ಮಿಶ್ರಣ ಮಾಡಿಯೂ ನೀಡಬಹುದು. ನಾರಿನಂಶ ಸಮೃದ್ಧವಾಗಿ ಇರುವುದರಿಂದ ಬೇಸಿಗೆಯಲ್ಲಿ ಉತ್ತಮ ಮೇವಾಗಿ ಅನುಕೂಲ.
• ಮೊದಲ ಬಾರಿ ಕೊಯ್ಲು ಮಾಡುವಾಗ ಪಾಪಸ್ಸುಕಳ್ಳಿಯು ಒಂದು ಮೀಟರ ( ೩ಅಡಿ) ಎತ್ತರಕ್ಕೆ ಬೆಳೆದಿದ್ದರೆ ಸೂಕ್ತ.
• ಕಡಿಮೆ ನೀರಿನಲ್ಲಿ ವರ್ಷ ಪೂರ್ತಿ ಹೆಚ್ಚು ಪಟ್ಟೆಗಳು ಸಿಗುತ್ತವೆ.
ಭಾರತದಲ್ಲಿ ಪಾಪಸ್ಸುಕಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಇನ್ನೂ ಆರಂಭಿಸಿಲ್ಲ ಈ ವಿಷಯವಾಗಿ ವಿವಿಧ ಮುಳ್ಳುರಹಿತ ಪಾಪಸ್ಸುಕಳ್ಳಿಯ ಬೆಳೆ ಹಾಗೂ ಬಳಕೆಯ ಕುರಿತು ಬೈಫ್ ಸಂಸ್ಥೆಯ ಉರುಳಿಕಾಂಚನ ದಲ್ಲಿರುವ ಕೇಂದ್ರೀಯ ಸಂಶೋಧನಾ ಕೇಂದ್ರದಲ್ಲಿ ನಿರಂತರ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳ ರೈತರಿಗೆ ಪರ್ಯಾಯ ಮೇವಿನ ಬೆಳೆಯಾಗಿ ಪರಿಚಯಿಸಲಾಗುತ್ತಿದೆ.
ಅದೇ ರೀತಿ ಬೈಫ್ ಸಂಸ್ಥೆಯ ತಿಪಟೂರಿನ ಬಳಿಯ ಗ್ರಾಮೋದಯ ತರಬೇತಿ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆಯಾಗಿ ೪ ವಿವಿಧ ಮುಳ್ಳುರಹಿತ ಪಾಪಾಸ್ಸುಕಳ್ಳಿಯ ತಳಿಗಳನ್ನು ಬೆಳೆಸಲಾಗಿದ್ದು ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ-+917019867706
Good article and more informative, Dr. Hugar