ತುರುವೇಕೆರೆಯ ಕನ್ನಡ ಭವನದಲ್ಲಿ ಕಸಾಪ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ಪ್ರಸಾದ್, ಷಣ್ಮುಖಪ್ಪ, ಸಾ.ಶಿ.ದೇವರಾಜ್ ಇತರರು ಚಿತ್ರದಲ್ಲಿದ್ದಾರೆ.
ತುರುವೇಕೆರೆ: ಮಹಿಳೆಯರು ತಮ್ಮ ಸಬಲೀಕರಣಕ್ಕಾಗಿ ರೂಪಿಸಿರುವ ಕಾಯಿದೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದರ ಜೊತೆಗೆ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸಬೇಕು. ಮೀಸಲಾತಿಯ ಮೇಲೆ ಅವಲಂಭಿತರಾಗದೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ತಮ್ಮನ್ನು ತಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮರ್ಥರನ್ನಾಗಿ ರೂಪಿಸಿಕೊಳ್ಳಬೇಕು ಎಂದು ಕೊಡಗೀಹಳ್ಳಿಯ ಮುಖ್ಯಶಿಕ್ಷಕಿ ವೀಣಾ ಅಭಿಪ್ರಾಯಪಟ್ಟರು
ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಸಂಯುಕ್ತವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ತಾಲ್ಲೂಕಿನ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆಗಳು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಲ್ಲುತ್ತವೆ ಎಂದು ಮಹಿಳಾ ಸಾಧಕಿಯರನ್ನು ಅಭಿನಂದಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ಮಹಿಳೆಯರು ತಮ್ಮ ಅವಕಾಶಗಳನ್ನು ತಾವೇ ಕಲ್ಪಿಸಿಕೊಳ್ಳಬೇಕು.ತಮ್ಮಗಿರುವ ಸಾಂವಿಧಾನಿಕ ಸ್ವಾತಂತ್ಯ್ರದ ಅಭಿವ್ಯಕ್ತಿಗೆ ಯಾರನ್ನೂ ಯಾಚಿಸುವ ಅಗತ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಆರ್. ಸತ್ಯನಾರಾಯಣ್ ಕಸಾಪದ ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್ ಅವರು ಮಹಿಳಾಪರ ಕಳಕಳಿ ಹೊಂದಿದ್ದಾರೆ. ಹಾಗಾಗಿ ಮುಂಬರುವ ಪರಿಷತ್ತಿನ ಚುನಾವಣೆಯಲ್ಲಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮಹಿಳಾ ಸಾಧಕಿಯರಾದ ಲಲಿತಾ ರಾಮಚಂದ್ರ, ದೇವಮ್ಮ ಶಂಕರಪ್ಪ, ರೂಪಶ್ರೀ, ಶರಿತಾ ದೇವರಮನೆ, ಹನುಮಕ್ಕ ಚಂದ್ರಯ್ಯ,ಭಾರತಿ ಪರಮೇಶ್ವರಯ್ಯ, ಜ್ಯೋತಿ ಸುಂಕಲಾಪುರ, ಪುಷ್ಪ ನಟೇಶ್,ವೀಣಾ, ಬಿ.ಪೂಜಾ ಇವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಖಜಾಂಚಿ ಪರಮೇಶ್ವರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜು, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ತುರುವೇಕೆರೆ ಪ್ರಸಾದ್, ಷಣ್ಮುಖಪ್ಪ, ದಿನೇಶ್, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು. ಟಿ.ರಾಮಚಂದ್ರ ಸ್ವಾಗತಿಸಿದರು. ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.