(ಇಂಜಿನಿಯರ್ ಮತ್ತು ಗುತ್ತಿಗೆದಾರ ಕಂಪನಿಯ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಒತ್ತಾಯ)
(ಅಸಮರ್ಪಕ ರಸ್ತೆಯ ವೈಜ್ಞಾನಿಕ ದುರಸ್ತಿಗೆ ಹತ್ತಾರು ಬಾರಿ ಆಗ್ರಹಿಸಿದರೂ ಜಪ್ಪೆನ್ನದ ಹೆದ್ದಾರಿ ನಿರ್ಮಾಣ ಅಧಿಕಾರಿಗಳು)
ಚಿಕ್ಕನಾಯಕನಹಳ್ಳಿ : ಪಟ್ಟಣದ ಮೂಲಕ ಹಾದುಹೋಗುವ ಮೈಸೂರು-ಜೇವರ್ಗಿ ಹೆದ್ದಾರಿ ಮಾರ್ಗಮಧ್ಯದಲ್ಲಿ ಸಿಗುವ ಆಲದಕಟ್ಟೆ ಮತ್ತು ಸಾಲ್ಕಟ್ಟೆ ಭಾಗದಲ್ಲಿ ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನ ಅಪಘಾತಗೊಂಡಿದ್ದರೆ, ಸಂಜೆ ಅಡುಗೆ ಅನಿಲ (ಹೆಚ್ ಪಿ ಗ್ಯಾಸ್) ಸರಕು ಸಾಗಣೆ ವಾಹನ ಪಲ್ಟಿಯಾಗಿ ಉರುಳಿಬಿದ್ದಿದೆ.
ಅಪಘಾತದಲ್ಲಿ ತಲೆಗೆ ಬಿದ್ದ ತೀವ್ರ ಪೆಟ್ಟಿನಿಂದ ಹೆಚ್ಚಿನ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಿಸಿರುವ ದ್ವಿಚಕ್ರ ವಾಹನ ಸವಾರ ಸಾಲ್ಕಟ್ಟೆ ಸಮೀಪದ ಮುದ್ದೇನಹಳ್ಳಿಯವರು ಎಂದು ಗುರ್ತಿಸಲಾಗಿದೆ. ಅವರ ಚಿಕಿತ್ಸೆ ನಡೆಯುತ್ತಿದೆ. ಅದೇರೀತಿ, ಸಂಜೆಹೊತ್ತಿಗೆ ಅದೇ ಜಾಗದಲ್ಲಿ ಅಡುಗೆ ಅನಿಲ ಸರಕು ಸಾಗಣೆ ವಾಹನವೂ ಅಪಘಾತಕ್ಕೊಳಗಾಗಿದೆ.
ಈ ರಸ್ತೆಯಲ್ಲಿ ದಿನಕ್ಕೊಂದರಂತೆ ಒಂದಲ್ಲಾ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ನಿರ್ಮಿಸಿರುವ ಹೆದ್ದಾರಿ ರಸ್ತೆಯ ನಿರ್ಮಾಣ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎಂದು ಈ ಭಾಗದ ಚಾಲಕರ ಸಂಘ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ, ದೋಷಗಳನ್ನು ಶೀಘ್ರವೇ ವೈಜ್ಞಾನಿಕವಾಗಿ ಸರಿಪಡಿಸಿಕೊಡಬೇಕು ಎಂದು ಹಲವು ಬಾರಿ ಆಗ್ರಹಿಸಿದೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಕಾರಣ, ಚಿಕ್ಕನಾಯಕನಹಳ್ಳಿಯ ಆರಕ್ಷಕ ವೃತ್ತ ನಿರೀಕ್ಷಕರಾದ ಎಫ್ ಕೆ ನದಾಫ್’ರವರು ಈ ಮಾರ್ಗದ ರಸ್ತೆಯಲ್ಲಿ ಸ್ವತಃ ತಮ್ಮ ಜೀಪ್ ಚಾಲನೆ ಮಾಡಿ, ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದ ಏರು-ಪೇರುಗಳನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೃತ್ಯುಂಜಯ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿಯಾದ ಶ್ರೀ ಸಾಯಿ ಕನ್ಸಟ್ರಕ್ಷನ್ಸ್’ಗೆ ಪತ್ರ ಬರೆದಿದ್ದರು. ಅವರಿಂದ ಲಿಖಿತ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದರು. ಆದರೆ, ಅತ್ತ ಕಡೆಯಿಂದ ಯಾವುದಕ್ಕೂ ಏನೂ ಸ್ಪಂದನೆಯಿಲ್ಲದಂತಾಗಿದೆ.
ಆರಕ್ಷಕ ವೃತ್ತ ನಿರೀಕ್ಷಕರ ಪತ್ರ ಮುಖೇನ, ವೈಜ್ಞಾನಿಕವಾಗಿ ರಸ್ತೆಯ ಮರುಪರಿಶೀಲನೆ ನಡೆಸಿ, ಅದರಲ್ಲಿ ಆಗಿರುವ ಲೋಪಗಳನ್ನು ಸಾಧ್ಯವಾದಷ್ಟು ಬೇಗನೇ ಸರಿಪಡಿಸುವುದು. ಪ್ರಸ್ತುತ ಸ್ಥಿತಿಯಲ್ಲಿ ರಸ್ತೆಮೇಲೆ ಚಲಿಸುವ ವಾಹನಗಳು ಆಯತಪ್ಪುವ ಸಂಭವ ಹೆಚ್ಚಿದೆ. ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ದಿನೇದಿನೆ ಏರುತ್ತಿದೆ. ಕೂಡಲೇ ಹೆದ್ದಾರಿ ರಸ್ತೆಯ ವೈಜ್ಞಾನಿಕ ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ವಹಿಸತಕ್ಕದ್ದು ಎಂಬ ಸಲಹೆಗಳನ್ನು ನೀಡಲಾಗಿತ್ತು. ಗುತ್ತಿಗೆದಾರ ಕಂಪನಿಯೇ ಆಗಲಿ ಅಥವಾ ಹೆದ್ದಾರಿ ನಿರ್ಮಾಣ ಅಧಿಕಾರಿಯೇ ಆಗಲಿ ಯಾರಿಂದಲೂ ಇದೂತನಕ ಯಾವುದೇ ಪ್ರತಿಸ್ಪಂದನೆ ಕಂಡುಬಂದಿಲ್ಲ.
ಅಪಘಾತಕ್ಕೆ ಕಾರಣ ::
ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರು ಮಾರ್ಗವಾಗಿ ಮೈಸೂರು-ಜೇವರ್ಗಿ ಹೆದ್ದಾರಿಯ ರಸ್ತೆಯ ಎರಡೂ ಬದಿಯ ಪಥ ಸಮತಟ್ಟಾಗಿರುವುದಿಲ್ಲ. ಎಡಬದಿಯ ಪಥ ತುಸು ಎತ್ತರಕ್ಕಿದ್ದರೆ, ಬಲಬದಿಯ ಪಥ ಕೊಂಚ ತಗ್ಗಾಗಿದೆ. ಭಾರೀ ವಾಹನಗಳು ಮತ್ತು ಸರಕು ಸಾಗಣೆಯ ವಾಹನಗಳು ಇಲ್ಲಿ ಚಲಿಸುವಾಗ ಏಕಾಏಕಿ ಒಂದುಕಡೆಗೆ ವಾಲಿಕೊಂಡು ಆಯತಪ್ಪಿ ಪಲ್ಟಿಹೊಡೆದು ಉರುಳಿಬೀಳುತ್ತವೆ.
ಸಾಧ್ಯವಾದಷ್ಟೂ ಶೀಘ್ರವೇ ರಸ್ತೆಯ ಸಮರ್ಪಕ ದುರಸ್ತಿಯನ್ನು ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಈಗ್ಗೆ ತಿಂಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಧಿಕಾರಿ ಮೃತ್ಯುಂಜಯ ಹೇಳಿದ್ದರು. ಆದರೆ, ಇದುವರೆಗೂ ಅವರು ಏನೂ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಶನಿವಾರ ಮಧ್ಯಾಹ್ನ ಮತ್ತು ಸಂಜೆ ಮತ್ತೆ ಇದೇ ಜಾಗದಲ್ಲಿ ಎರಡೆರಡು ಅಪಘಾತಗಳು ಸಂಭವಿಸಿವೆ. ಇದರ ಹೊಣೆಯನ್ನು ಅವರ ಮೇಲೆ ಹೊರೆಸಿ, ಎಫ್ ಐ ಆರ್ ದಾಖಲಿಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ