ತುರುವೇಕೆರೆ: ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ಸುಮಾರು 120 ಹೆಚ್ಚು ಯುವಕರಿಂದ ಲಕ್ಷಾಂತರ ರೂಪಾಯಿಗಳ ಹಣ ಪಡೆದು ವಂಚನೆಮಾಡಿರುವ ಆರೋಪದಡಿ ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದ ರಮೇಶ್(44)ನನ್ನು ದಂಡಿನಶಿವರ ಪೊಲೀಸರು ಶನಿವಾರ ವಶಕ್ಕೆ ಪಡೆಯುವಲ್ಲಿ ಯಶ್ವಿಯಾಗಿದ್ದಾರೆ.
ಆರೋಪಿ ರಮೇಶ್ ಸ್ವ ಗ್ರಾಮದಲ್ಲಿ ಶನಿಮಹಾದೇವರ ಪೂಜೆ ಮಾಡುತ್ತಿದ್ದನು. ಮೊದಲೆ ಹೆಂಡತಿ ಮದುವೆಯಾದ ನಂತರ ಶೋಕಿಯ ಆಸೆಗೆ ಬಿದ್ದು ಕುಟುಂಬ ಬಿಟ್ಟು ಬೆಂಗಳೂರು ಸೇರಿದ.
ಆರೋಪಿ ರಮೇಶ್ ಬೆಂಗಳೂರಿನಲ್ಲಿ ನಳಿನಾ ಎಂಬಾಕೆಯನ್ನು ಮದುವೆಯಾಗಿದ್ದ. ಈತನ ತಂದೆ ರೈಲ್ವೆ ಕೆಲಸದಲ್ಲಿ ಇದ್ದು ನಿವೃತ್ತರಾಗಿದ್ದರು. ಆಗ ಒಂದಿಷ್ಟು ರೈಲ್ವೆ ಇಲಾಖೆಯ ರೀತಿ ನೀತಿಗಳನ್ನು ಅರಿತುಕೊಂಡಿದ್ದ ಅದನ್ನೇ ಲಾಭ ಮಾಡಿಕೊಂಡ ಆರೋಪಿ ದಂಪತಿಗಳಿಬ್ಬರೂ ರೈಲ್ವೆ ಇಲಾಖೆಯ ನೌಕರರೆಂದು ಹೇಳಿಕೊಂಡು ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡು ವಂಚನೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು.
ಆರೋಪಿ ರಮೇಶನು ನಾನು ರೈಲ್ವೆ ಕೆಲಸದಲ್ಲಿ ಇರುವುದಾಗಿ ಹೇಳಿಕೊಂಡು ತನಗೆ ಪರಿಚಯ ವಿರುವ ವ್ಯಕ್ತಿಗಳ ಮೂಲಕ ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ನಿರುದ್ಯೋಗಿ ಯುವಕರು ಮತ್ತು ಅವರ ಕುಟುಂಬದವರಿಂದ ವಿದ್ಯಾಭ್ಯಾಸದ ದಾಖಲೆ ಪಡೆದು ರೈಲ್ವೆ ಮೇಲಾಧಿಕಾರಿಗಳಿಗೆ ಲಂಚಕೊಡಬೇಕು ಅದಕ್ಕಾಗಿ ಲಕ್ಷಾಂತರ ರೂಪಾಯಿಗಳು ಬೇಕಾಗುತ್ತದೆಂದು ಮುಂಗಡವಾಗಿ ಹಣ ಕೀಳುತ್ತಿದ್ದರು.
ಹಣಕೊಟ್ಟವರು ಕೆಲಸಕೊಡಿಸುವುದು ವಿಳಂಬವಾದಾಗ ಒತ್ತಾಯ ಮಾಡಿದವರಿಗೆ ಆರೋಪಿ ರಮೇಶ್ ನಕಲಿ ನೇಮಕಾತಿ ಪತ್ರ ಕೊಟ್ಟು ತಲೆ ಮರೆಸಿಕೊಳ್ಳುತ್ತಿದ್ದು ಮತ್ತೆ ಕೆಲವರಿಗೆ ಹಣ ಪಡೆದು ನೇಮಕಾತಿ ಪತ್ರ ತಡವಾಗಿ ಬರುತ್ತದೆ ಎಂದು ಸಬೂಬು ಹೇಳಿ ದೂರವಾಣಿ ಕರೆ, ವಾಸದ ಮನೆ ಬದಲಾಯಿಸಿ ಬಿಡುತ್ತಿದ್ದ ಇದರಿಂದ ಹಣ ಕೊಟ್ಟವರಿಗೂ ಆರೋಪಿ ಸಿಗುತ್ತಿರಲಿಲ್ಲ.
ಹೀಗೆ ಆರೋಪಿ ಮೈಸೂರು, ಬೆಂಗಳೂರು, ತುಮಕೂರು, ಗುಬ್ಬಿ, ತಿಪಟೂರು ಬೇರೆ ಬೇರೆ ಜಿಲ್ಲೆ, ತಾಲ್ಲೂಕು ಸೇರಿದಂತೆ ಸುಮಾರು 120 ಕ್ಕೂ ಹೆಚ್ಚು ವ್ಯಕ್ತಿಗಳಿಂದ ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ಪೀಕಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು.
ಆರೋಪಿ ಹುಡುಕಿಕೊಂಡು ಮನೆಗೆ ಬರುವ ಪೊಲೀಸರ ಮೇಲೆ ಸಾಕು ನಾಯಿ ಬಿಟ್ಟು ಓಡಿಸುವುದು, ಇನ್ನೂ ಹಣ ಕೊಟ್ಟ ಕೆಲವರು ಮನೆಗೆ ಬಂದು ಹಣ ಕೊಡುವಂತೆ ಒತ್ತಾಯ ಮಾಡಿದವರಿಗೆ, ದಮ್ಕಿ ಹಾಕಿ ಮಾತ್ರೆ ನುಂಗಿ ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದ ದಂಪತಿಗಳಿಬ್ಬರು.
ಈತನ ಮೇಲೆ ವಂಚನೆ ಆರೋಪದಡಿ ಬೆಂಗಳೂರು, ಶಂಕರಪುರ, ಮಾದನಾಯಕನಹಳ್ಳಿ, ತುಮಕೂರು, ದಂಡಿನಶಿವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸೆರೆಗಾಗಿ ಕಳೆದ ಒಂದು ವಷಗಳಿಂದ ಪೊಲೀಸರು ಹುಡಕಾಟ ನಡೆಸಿದ್ದರೂ ವಾರವಾರಕ್ಕೊಮ್ಮೆ ತಂಗುವ ಸ್ಥಳವನ್ನು ಬದಲಾಯಿಸುತ್ತಿದ್ದರಿಂದ ಸುಲಭವಾಗಿ ಪೊಲೀಸರಿಗೆ ದಕ್ಕುತ್ತಿರಲಿಲ್ಲ.
ದಂಡಿನಶಿವರ ಎಸ್.ಐ ಚಂದ್ರಕಾಂತ್ ತುರುವೇಕೆರೆ ಸಿಪಿಐ ಲೋಹಿತ್ ಅವರ ಮಾರ್ಗದರ್ಶನ ಪಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಎರಡನೇ ಪತ್ನಿ ನಾಪತ್ತೆಯಾಗಿದ್ದು ಈ ಬಗ್ಗೆ ದಂಡಿನಶಿವರ ಪೊಲೀಸರು ತನಿಖೆ ಮುಂದು ವರೆಸಿದ್ದು ಈತನ ಮೇಲೆ ಇನ್ನಷ್ಟು ವಂಚನೆ ಪ್ರಕರಣಗಳ ಬೆಳಕಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.