ಮಾಯಸಂದ್ರ (ತುರುವೇಕೆರೆ): ಇಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ವತಿಯಿಂದ ಆರಂಭಿಸಿರುವ ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನೆ ಗುರುವಾರ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಮ್ಮದು ಇನ್ನೂ ಕೃಷಿ ಆಧಾರಿತ ದೇಶವಾಗಿದೆ. ಕೃಷಿಕರು ಹೆಚ್ಚಾಗಿ ಆಧುನಿಕ ಉಪಕರಣಗಳನ್ನು ಉಪಯೋಗಿಸಬೇಕು. ಆಧುನಿಕತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದ ಶೇ.60 ರಷ್ಟು ಜನರು ಹಳ್ಳಿಗಳಲ್ಲಿದ್ದು ಅದರಲ್ಲಿ ಶೇ.50ರಷ್ಟು ಜನರು ವ್ಯವಸಾಯ ಮಾಡಿ ದುಡಿಮೆ ಮಾಡುತ್ತಾರೆ. ಕೃಷಿಯಿಂದ ಶೇ.18 ರಷ್ಟು ಮಾತ್ರ ದೇಶಕ್ಕೆ ಜಿ.ಡಿ.ಪಿ ಆದಾಯ ಬರುತ್ತಿದೆ. ನಮ್ಮ ದೇಶದ ಕೃಷಿ ವಿಜ್ಞಾನವಾಗಿ ಮಾರ್ಪಟಿಲ್ಲ. ಕೃಷಿ ಕೃಷಿಯಾಗಿಯೇ ಉಳಿದಿದೆ. ಬೇರೆ ದೇಶದ ರೈತರು ಉತ್ಪಾದನೆ ಮಾಡುವಷ್ಟು ನಮ್ಮ ರೈತರು ಮಾಡಲು ಸಾದ್ಯವಾಗುತ್ತಿಲ್ಲ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಬೇಕಿದೆ. ಕೃಷಿ ಸಚಿವರು ಹೆಚ್ಚು ಮುತುವರ್ಜಿ ವಹಿಸಿ ನಮ್ಮ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜು ನೀಡಿದ್ದಾರೆ. ಅವರಿಗೆ ಮಠದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಾಂಪ್ರದಾಯಿಕ ಕೃಷಿಗಿಂತ ಆಧುನಿಕ ಕೃಷಿ ಪದ್ಧತಿಯಲ್ಲಿ ಸಮಗ್ರ ಬೆಳೆ ಬೆಳೆಯುವುದನ್ನು ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಕಡೆಗೆ ಹೆಜ್ಜೆ ಇಡಬೇಕು ಎಂದು ಕಾಲೇಜು ಉದ್ಘಾಟಿಸಿ ಮಾತನಾಡಿದ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳು ಆಯೋಜಿಸಿದ್ದ ಮಕ್ಕಳ ಸಂತೆಗೆ, ಕೃಷಿ ಸಚಿವರು ಭೇಟಿ ನೀಡಿ ಮಕ್ಕಳ ವ್ಯಾಪಾರವನ್ನು ಪರಿಶೀಲಿಸಿದರು.
ಮಠದ ಪರವಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಸಿರು ಶಾಲು ಹೊದಿಸಿ ಸಚಿವ ಚಲುವರಾಯಸ್ವಾಮಿಯವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿವಿಧ ಶಾಖಾ ಮಠದ ಸ್ವಾಮೀಜಿಗಳಾದ ಸೋಮನಾಥ ಸ್ವಾಮೀಜಿ, ಮಂಗಳಾನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ. ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎ.ಶೇಖರ್, ಆದಿಚುಂಚನಗಿರಿ ಮಠದ ಸಿಇಓ ಎನ್.ಎಸ್. ರಾಮೇಗೌಡ, ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಿವಲಿಂಗೇಗೌಡರು, ಪ್ರೊ.ಪುಟ್ಟರಂಗಪ್ಪ ಇತರರು ಇದ್ದರು.