ಚಿಕ್ಕನಾಯಕನಹಳ್ಳಿ : ತಾಲ್ಲೂಕು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕುಪ್ಪೂರು, ಮಲ್ಲೇನಹಳ್ಳಿ, ಬೇವಿನಹಳ್ಳಿ ಹಾಗೂ ಬೇವಿನಹಳ್ಳಿ-ಗೊಲ್ಲರಹಟ್ಟಿ ಗ್ರಾಮಗಳಲ್ಲಿ ‘ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕರುಣಾ’ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೂ ಮೊದಲೇ ಈಯೆಲ್ಲ ಗ್ರಾಮಗಳಲ್ಲಿ ಇಲಾಖೆಯ ಕರುಣಾ- ಅಭಿಯಾನದ ಬಗ್ಗೆ ವ್ಯಾಪಕವಾದ ಪ್ರಚಾರ ನಡೆಸಲಾಗಿತ್ತು. ಇದರಿಂದ, ಸಮಯಕ್ಕೆ ಸರಿಯಾಗಿ ನೂರಾರು ಮಂದಿ ಪಶುಪಾಲಕ-ರೈತರು ತಮ್ಮ ರಾಸುಗಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.
ಕರುಣಾ ಅಭಿಯಾನದ ಅಂಗವಾಗಿ ಈಯೆಲ್ಲ ಗ್ರಾಮಗಳ 75 ಕರುಗಳಿಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಯಿತು. ಎಲ್ಲ ಜಾತಿ-ಪ್ರಬೇಧದ ಕರುಗಳ ಸಮಗ್ರವಾದ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು. ಕರುಗಳಿಗೆ ಜಂತುನಾಶಕ ಔಷಧಿಗಳನ್ನು ಕುಡಿಸಿ, ಅವುಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಚುಚ್ಚುಮದ್ದುಗಳನ್ನು ನೀಡಿ, ರೋಗನಿರೋಧಕ ಲಸಿಕೆಗಳನ್ನೂ ನೀಡಲಾಯಿತು. ಅವುಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಮಾತ್ರೆ ಮತ್ತು ಟಾನಿಕ್ಕುಗಳನ್ನು ಪಾಲಕರಿಗೆ ವಿತರಿಸಿ, ಅವನ್ನು ಕರುಗಳಿಗೆ ನೀಡಬೇಕಾದ ವಿಧಾನಗಳನ್ನು ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ, ಪಶು ಸಹಾಯಕ ನಿರ್ದೇಶಕ ಡಾ. ರೆ ಮಾ ನಾಗಭೂಷಣ್, ಆಧುನಿಕ ಮತ್ತು ಲಾಭದಾಯಕ ವಿಧಾನಗಳ ಮೂಲಕ ಕರುಸಾಕಣೆ ಮತ್ತು ಪಶುಪಾಲನೆಗೆ ಕೈಗೊಳ್ಳಬೇಕಾದ ಅಗತ್ಯಗಳ ಕುರಿತಾಗಿ ಮಾಹಿತಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದರು. ಕರುಗಳ ಲಾಲನೆ-ಪಾಲನೆ , ಒಂದು ವರ್ಷದೊಳಗೆ ಕರು ಬೆದೆಗೆ ಬರುವಂತೆ ಮಾಡಲು ಅನುಸರಿಸಬೇಕಾದ ಅಂಶಗಳು, ಕೃತಕ ಗರ್ಭಧಾರಣೆಯ ಸಾಧಕ-ಬಾಧಕಗಳು, ಗರ್ಭ ಧರಿಸಿದ ರಾಸುಗಳ ಪಾಲನೆ-ಪೋಷಣೆ, ಒಣಮೇವು ಪೌಷ್ಠೀಕರಣ, ರಸಮೇವು ತಯಾರಿಕೆ, ಮೇವಿನ ಬೆಳೆಗಳ ಪ್ರಾಮುಖ್ಯತೆ, ಲಸಿಕೆಗಳ ಮಹತ್ವ, ಆಧುನಿಕ ಮತ್ತು ಲಾಭದಾಯಕ ಹೈನುಗಾರಿಕೆಯ ಪ್ರಮುಖ ತತ್ವಗಳು, ರೋಗಗಳ ನಿಯಂತ್ರಣ, ಕಂದು ರೋಗದ ಲಸಿಕೆ, ಚರ್ಮ ಗಂಟಿಕ್ಕುವ ರೋಗದ ಲಸಿಕೆ, ಕಾಲುಬಾಯಿ ಜ್ವರದ ಲಸಿಕೆಗಳನ್ನು ಸಕಾಲದಲ್ಲಿ ರಾಸುಗಳಿಗೆ ಹಾಕಿಸುವುದರ ಮಹತ್ವಗಳ ಬಗ್ಗೆ ರೈತರಿಗೆ ಅವರು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ಪರೀಕ್ಷಕರಾದ ಬಸವರಾಜು, ಕಿರಿಯ ಪಶು ಪರೀಕ್ಷಕ ಮನೋಜ್, ಸಹಸಿಬ್ಬಂದಿ ಅತಾಉಲ್ಲಾ, ದಯಾನಂದ್ ಮತ್ತು ಕುಪ್ಪೂರು ಗ್ರಾಮ ಪಂಚಾಯತಿಯ ಪಶು ಸಖಿ ಆಶಾ ಹಾಜರಿದ್ದರು.
___ಸಂಚಲನ
ಚಿಕ್ಕನಾಯಕನ ಸೀಮೆಯಿಂದ