Publicstory. in
Tumkuru: ವಯಸ್ಸಾದ ಗ್ರಾಹಕರಿಗೆ ವಂಚಿಸಿ ಎಟಿಎಂ ಕಾರ್ಡ್ ಪಡೆದು ಹಣ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ಎಟಿಎಂ ಕಾರ್ಡುಗಳು, ಎರಡು ಲ್ಯಾಪ್ ಟಾಪ್, 19 ವಿವಿಧ ಎಟಿಎಂ ಕಾರ್ಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತುಮಕೂರು ಚರ್ಚ್ ಸರ್ಕಲ್ ಬಳಿ ಕೀಬಂಚ್ ಗಳ ರೀತಿಯ ವಸ್ತುಗಳನ್ನು ಹಿಡಿದು ತಿರುಗುತ್ತಿದ್ದಾಗ ಅನುಮಾನಗೊಂಡು ಬ್ರಿಜ್ ಬನ್ ಸರೋಜ ಮತ್ತು ಹರಿಲಾಲ್ ಅವರನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ ಜನರಿಂದ ಹಣ ತೆಗೆದುಕೊಡುವುದಾಗಿ ಉಪಾಯವಾಗಿ ಎಂಟಿಎಂ ಕಾರ್ಡುಗಳನ್ನು ಪಡೆದು ನಂತರ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರ ಬಳಿ ಉಪಾಯವಾಗಿ ಎಟಿಎಂ ಕಾರ್ಡುಗಳನ್ನು ಪಡೆದುಕೊಂಡು ತಮ್ಮ ಬಳಿ ಇರುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ರೀಡರ್ ಮತ್ತು ಪೋರ್ಟಲ್ ಮ್ಯಾಗ್ನೆಟಿಕ್ ಕಾರ್ಡ್ ರೀಡರ್ ಸಾಧನಗಳನ್ನು ಬಳಸಿ ಅವುಗಳಿಗೆ ಎಟಿಎಂಗಳ ಸೀಕ್ರೇಟ್ ಕೋಡುಗಳನ್ನು ಸಂಗ್ರಹಿಸಿಕೊಂಡು ನಂತರ ತಾವು ತಂಗಿದ್ದ ಮನೆಗೆ ಹೋಗಿ ಮಿನಿ ಟೂಲ್ಸ್ ಮತ್ತು ಎಂಎಸ್ಆರ್.ಎಕ್ಸ್ ಸಾಫ್ಟ್ ವೇರ್ ಬಳಿಸಿ ಸೀಕ್ರೆಟ್ ಕೋಡುಗಳನ್ನು ನಮೂದಿಸಿ ಆರೋಪಿಗಳು ಎಟಿಎಂಗಳಿಗೆ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು ರಾಹುಲ್, ಅಂಕಿತ್, ಅಂಕುಶ್, ರಾಹುಲ್ ಸರೋಜ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳೆಲ್ಲರು ಉತ್ತರ ಪ್ರದೇಶದವರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೋನಂ ವಂಶಿಕೃಷ್ಣ ತಿಳಿಸಿದ್ದಾರೆ.
ಆರೋಪಿಗಳು ತಿಪಟೂರು ತಾಲೂಕು ಹೊನ್ನವಳ್ಳಿಯ ಎಚ್.ಕೆ.ಬಸವರಾಜು ಖಾತೆಯಿಂದ 13 ಸಾವಿರ, ಹಾಲುಕುರಿಕೆಯ ಪರಮೇಶ್ವರಯ್ಯ ಅವರ ಖಾತೆಯಿಂದ 23,500 ರೂ, ದಿಬ್ಬೂರಿನ ಮೈಲಾರ ರಾವ್ ಅವರ ಖಾತೆಯಿಂದ 30 ಸಾವಿರ, ವೀರಸಾಗರದ ಮೊಹಮದ್ ಜಬೀರ್ ಹುಸೇನ್ ಅವರ ಖಾತೆಯಿಂದ 15,500 ರೂಪಾಯಿಗಳನ್ನು ನಕಲಿ ಎಟಿಎಂ ಬಳಸಿ ಪಡೆದಿದ್ದಾರೆ ಎಂದು ಹೇಳಿದರು.
ಈ ಆರೋಪಿಗಳ ತಂಡ, ಗುಲ್ಬರ್ಗಾ, ರಾಯಚೂರು, ಲಿಂಗಸಗೂರ, ಗಡ್ನಿ, ಕೃಷ್ಠಗಿ, ಸಿಂಗನೂರು, ಬೆಳಗಾವಿ, ಕುಡ್ಲ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕೋಡಿ, ಹಾವೇರಿ, ಭದ್ರಾವತಿ, ಶಿವಮೊಗ್ಗ, ತರೀಕೆರೆ, ಕಡೂರು, ರಾಣೆಬೆನ್ನೂರು, ಧಾರವಾಡ, ಹಿರಿಯೂರು, ತುಮಕೂರು ಸೇರಿ ಒಟ್ಟು 85 ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮನೆ ಕಳವು, ಜಾತ್ರೆ, ಬಸ್ ಗಳಲ್ಲಿ ಚಿನ್ನದ ಸರಗಳನ್ನು ಕದಿಯುತ್ತಿದ್ದ ಆರೋಪಿ ಅಶೋಕ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ 330 ಗ್ರಾಂ ತೂಕದ 13, 86,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.