ಡಾ.ರಜನಿ ಅವರ ಈ ಕವನ ಈಚೆಗೆ ನಡೆದ ನೈಸರ್ಗಿಕ ವಿಕೋಪದ ಕುರಿತು ಕವನ ಹೇಳುತ್ತದೆ. ಪ್ರಕೃತಿ ಮುನಿದರೆ ಯಾರೂ ನಿಲ್ಲಲಾರರು. ಪ್ರಕೃತಿ ನೀಡಿರುವ ಸಹಜ ಜೀವನ ಯಾಕೆ ಮುಖ್ಯ ಎಂಬಾರ್ಥವೂ ಇದೆ. ಅಲ್ಲಾಡದು ಎಂದು ಕೊಳ್ಳು ವ ಬೆಟ್ಟಗಳು ಜಾರುತ್ತಿವೆ. ಮೋಡಗಳು ಹನಿಗಳಾಗದೇ ತುಂಡಾಗುತ್ತಿವೆ.ಪ್ರಕೃತಿ ಕೋಪಿಸಿ ಕೊಂಡಿದ್ದಾಳೆ. ಮಾನವ ಮರ ಕಡಿದು ಮನೆ ಮಾಡಿದ್ದಕ್ಕೊ ? ಏಕೋ ಏನೋ ಎಲ್ಲವೂ ಅಲ್ಲೋಲ ಕಲ್ಲೋಲ.ಮನುಷ್ಯ ಮುನಿದ ಪ್ರಕೃತಿ ಎದುರು ತರಗೆಲೆ ಅಲ್ಲವೇ?
ಬೆಟ್ಟ ಜಾರಿ
*********
ಅಲ್ಲೇ ಕೆಳಗೆ ಒಂದು ಮನೆಯಿತ್ತು
ಗೊತ್ತಿಲ್ಲ ಅವನಿಗೆ
ನಾನು ಜಾರಿ ಎಲ್ಲ ಮುಚ್ಚಾಕುವೆ ಎಂದು
ನಿಂತು ನೋಡುತ್ತಿದ್ದ ನಾನು …ಜಾರುವುದನ್ನ
ಗಿಡ ಮರ ಪೊದೆಗಳೆಲ್ಲಾ ಕಳಚಿ
ಬುಡ ಮೇಲಾಗಿ ಕುಸಿದು ಮಣ್ಣು
ಹರಿವ ನದಿಯಾಗಿ ಗೊತ್ತಿಲ್ಲ ಅವನಿಗೆ
ನಾನು …ಎಲ್ಲಿ ನಿಲ್ಲುವೆ ಎಂದು
ಸುರಿದ ಮಳೆ ಸರಿಸಿದೆಯೋ
ಕಿತ್ತಾಕಿದ ಮರ ಜಾರಿಸಿದೆಯೋ
ಉಡುದಾರದ ರಸ್ತೆ ಹರಿದು
ಬೆಳ ಬೆಳಗ್ಗೆ …ಅಲ್ಲಾಡಿ ತಳ
ಮೇಯುತ್ತಿದ್ದ ಕುರಿಗಳ ಮೃದು ತುಪ್ಪಟಗಳ
ಚಿಲಕ ಜಡಿದಿದ್ದ ಬಾಗಿಲುಗಳ
ಹಲಗೆ ಬಡಿದ ತಾರಸಿಗಳ
ತಲಾಂತರದಿದ್ದ ಬೀಡು ಬಿಟ್ಟ …ವಂಶಗಳ
ಸ್ಪರ್ಗವೇ ಇಳಿದು ಬಂದಂತಿದ್ದ
ಚೂಪು ಮರಗಳ ಮಧ್ಯೆ ಹತ್ತಿ ಮಂಜುಗಳ
ಬೆಟ್ಟಕ್ಕಿಂತ ಮೇಲೆ ಏರುತ್ತಿದ್ದ
ಗಮ್ಮನೆ ಕುದಿಯುತ್ತಿದ್ದ… ಚಹಾ
ತಣ್ಣಗೆ ಕೂಡಿಟ್ಟ ಕೋಪ
ತುಸು ತುಸು ಜಾರಿ
ಒಮ್ಮೆಲೆ ಸರಿದು ಕುಸಿದು
ಎಳೆ ಬಿಸಿಲಲ್ಲಿ ಜಾರುಬಂಡೆ
ನೋಡ ಬಂದವರ ನುರಿದು
ಅತಿಥಿ ಎಂಬುದ ಮರೆತು
ಬೇರು ಬಿಟ್ಟವರ ಬೀಳಿಸಿ
ಬೆಟ್ಟ ಜಾರಿ …ನೀರು
ಡಾII ರಜನಿ
Duraase manushyanige nisargada paata