ಚಿಕ್ಕನಾಯಕನಹಳ್ಳಿ : ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜೈಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಶಾಖೆಯ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೈಭೀಮ್ ಛಲವಾದಿ ಮಹಾಸಭಾ ಮುಖಂಡ ಚೆನ್ನವೀರಯ್ಯ, ದಲಿತ ಸಮುದಾಯಗಳ ಪರಿಶಿಷ್ಟರಲ್ಲಿ ಛಲವಾದಿ ಮತ್ತು ಮಾದಿಗ ಬೇರೆ ಬೇರೆ ಅಲ್ಲ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ಭಿನ್ನಬೇಧ ಮಾಡಿ ಒಡೆದಾಳುವ ಪಟ್ಟಭದ್ರ ಶಕ್ತಿಗಳಿಗೆ ಅವಕಾಶ ಮಾಡಿಕೊಡಕೂಡದು. ನಾವೆಲ್ಲರೂ ಒಗ್ಗೂಡಿ ಒಗ್ಗಟ್ಟಿನಿಂದ ನಮ್ಮ ನಮ್ಮ ನೆಲೆಗಳನ್ನು ಬೇಗ ಕಂಡುಕೊಳ್ಳುವ ತುರ್ತಿದೆ ಎಂದು ದಲಿತ ಸಮುದಾಯಗಳ ಪರಿಶಿಷ್ಟರೆಲ್ಲರನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಬಂಧು ಗೌತಮ್, ಎಡಗೈಯ್ಯಲ್ಲಿ ಸಂವಿಧಾನ ಹಿಡಿದು ಅಧಿಕಾರ ಕೇಂದ್ರಗಳ ಕಡೆಗೆ ತಮ್ಮ ಬಲಗೈ ತೋರುಬೆರಳನ್ನು ತೋರುತ್ತಿರುವ ಅಂಬೇಡ್ಕರ್ ಪುತ್ಥಳಿಯ ಸಾಂಕೇತಿಕ ಅರ್ಥವಿಸ್ತಾರವನ್ನು ಬಿಡಿಸಿ ಹೇಳುತ್ತಾ, ಅಂಬೇಡ್ಕರ್ ಕೊನೆಯ ದಿನಗಳು (ಎ ಲಾಸ್ಟ್ ಫಿವ್ ಯೀಯರ್ಸ್ ಆಫ್ ಅಂಬೇಡ್ಕರ್) ಎಂಬ ಪುಸ್ತಕವನ್ನು ಎಲ್ಲರೂ ಓದಿಕೊಳ್ಳಲೇಬೇಕಾದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಶ್ರೀನಿವಾಸ್’ರವರು ಜೈಭೀಮ್ ಛಲವಾದಿ ಮಹಾಸಭಾ ಸ್ಥಾಪಿಸಿದ ಧ್ಯೇಯೋದ್ದೇಶ ಮತ್ತು ಅದನ್ನು ಸಾಕಾರಗೊಳಿಸಲು ಗೊತ್ತು ಮಾಡಿಕೊಂಡಿರುವ ಗುರಿಗಳನ್ನು ಸಭೆಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಜೈಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಶಾಖೆಗೆ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಯ್ತು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೈಭೀಮ್ ಛಲವಾದಿ ಮಹಾಸಭಾ ಶಾಖೆಯ ಗೌರವಾಧ್ಯಕ್ಷರಾಗಿ ಅಗಸರಹಳ್ಳಿ ನರಸಿಂಹಮೂರ್ತಿ, ಅಧ್ಯಕ್ಷರಾಗಿ ಆನಂದ್ ಬಿ ಆಶ್ರಿಹಾಲ್, ಕಾರ್ಯದರ್ಶಿಯಾಗಿ ಜಿ ಮಂಜುನಾಥ್’ರವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಜೈಭೀಮ್ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್ ಎಮ್, ಯುವ ಘಟಕದ ಅಧ್ಯಕ್ಷ ಆನಂದ್ ಕೆ ಸಿ, ತುಮಕೂರು ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ, ಹಾಗೂ ಮುಖಂಡ ಕೇಶವರ್ಧನ್ ಮತ್ತು ತಾಲ್ಲೂಕು ಪದಾಧಿಕಾರಿಗಳು, ಸಮುದಾಯದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.