ಚಿಕ್ಕನಾಯಕನಹಳ್ಳಿ : ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ರಸ್ತೆಗಳು ವಿಪರೀತ ಹದಗೆಟ್ಟು ಪಟ್ಟಣವಾಸಿಗಳು ಮತ್ತು ವಾಹನ ಚಾಲಕರ ನೆಮ್ಮದಿ ಕೆಡಿಸಿವೆ.
ಮಳೆ ಇಲ್ಲದ ದಿನಗಳಲ್ಲೇ ಈ ರಸ್ತೆಗಳ ಮೇಲೆ ಚಲಿಸುವುದು ಅಪಾಯಕಾರಿ. ಇನ್ನು ಮಳೆ ಬಂದ ದಿನಗಳಲ್ಲಿ ಇಲ್ಲಿಂದ ಹಾದು ಹೋಗುವುದೇ ದೊಡ್ಡ ಸಾಹಸ. ಮಂಡಿಗಾಲವರೆಗೂ ನೀರು ನಿಲ್ಲುವಷ್ಟು ಆಳದ ಗುಂಡಿಗಳು ರಸ್ತೆಗಳಲ್ಲಿವೆ.
ಒಳ ಚರಂಡಿಗಳು ಬ್ಲಾಕ್ ಆಗಿ ಮಳೆ ನೀರು ತುಂಬಿ ಉಕ್ಕಿ ಹರಿಯುತ್ತವೆ. ಕಚೇರಿಗಳ ಅಕ್ಕಪಕ್ಕ ಮತ್ತು ಇಂದಿರಾ ಕ್ಯಾಂಟೀನ್ ಬಳಿ ಹಾಗೂ ಸರ್ಕಾರಿ ಕಟ್ಟಡ ಮತ್ತು ಭವನಗಳ ಬಳಿ ಮಳೆ ನೀರು ನಿಂತು ಲಕ್ಷಾಂತರ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
ಡೆಂಗ್ಯೂ ಹರಡಿಕೊಳ್ಳುವ ಭೀತಿಯಿರುವ ಈ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದ್ದ ಇಲಾಖೆಗಳ ಬೇಜವಾಬ್ದಾರಿತನ ಹೇಳತೀರದು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪಟ್ಟಣದ ಖಾಲಿ ನಿವೇಶನಗಳಲ್ಲಿ ಆಳೆತ್ತರದ ಪಾರ್ಥೇನಿಯಂ ಮತ್ತು ಇತರೆ ಕಳೆಗಿಡಗಳು ಬೆಳೆದು ನಿಂತಿವೆ. ಸೊಳ್ಳೆಗಳ ಆವಾಸಕ್ಕೆ ಹೇಳಿ ಮಾಡಿಸಿದ ಆಯಕಟ್ಟಿನ ಜಾಗವದು. ಕ್ಷಣಕ್ಷಣಕ್ಕೂ ಸೊಳ್ಳೆಗಳ ದಾಳಿಗೊಳಗಾಗುತ್ತಿರುವ ಅಕ್ಕಪಕ್ಕದ ಮನೆ ನಿವಾಸಿಗಳ ರೋದನೆ ಕೇಳುವವರೇ ಇಲ್ಲದಂತಾಗಿದೆ.
ಪಟ್ಟಣದಲ್ಲಿ ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಬೆಳೆದಿರುವ ಪಾರ್ಥೇನಿಯಂ ಮತ್ತು ಇತರೆ ಕಳೆ ಗಿಡಗಳು ಬೆಳೆಯದಂತೆ ಅವನ್ನು ನಿಯಂತ್ರಿಸಿ, ಖಾಲಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡುವುದು ನಿವೇಶನಗಳ ಮಾಲೀಕರ ಜವಾಬ್ದಾರಿ.
ಅವರು ತಮ್ಮ ನಿವೇಶನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಅವರಿಗೆ ನೊಟಿಸ್ ಕೊಟ್ಟು ಅವರಿಂದ ಸ್ವಚ್ಛತಾ ಕೆಲಸ ಮಾಡಿಸಬೇಕಾದುದು ಪುರಸಭೆಯ ಕರ್ತವ್ಯ. ಆದರೆ, ಚಿಕ್ಕನಾಯಕನಹಳ್ಳಿ ಪುರಸಭೆಯ ಅಧಿಕಾರಿಗಳು ಅಂತಹ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಡೆಂಗ್ಯೂ ಹರಡಿಕೊಳ್ಳುವ ಭೀತಿಯಿರುವ ಈ ದಿನಗಳಲ್ಲಿ ಪುರಸಭೆಯ ಇದೆಂಥ ಬೇಜವಾಬ್ದಾರಿ ನಡೆ ಎಂದು ಪಟ್ಟಣವಾಸಿಗಳು ನೊಂದುಕೊಳ್ಳುತ್ತಿದ್ದಾರೆ!
ನಗರೋತ್ಥಾನ ಅನುಷ್ಠಾನ ; ಮುಖ್ಯಾಧಿಕಾರಿ ::
ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಮಂಜುಳ’ರವರಲ್ಲಿ ಪಟ್ಟಣದ ಈ ಅವ್ಯವಸ್ಥೆಯ ಬಗ್ಗೆ ಕೇಳಿದರೆ, ನಗರೋತ್ಥಾನ ಯೋಜನೆ ಪ್ರಾರಂಭಗೊಳ್ಳಬೇಕಿದೆ. ಆ ಯೋಜನೆಯಡಿ ಎಲ್ಲ ಕಾಮಗಾರಿಗಳನ್ನೂ ಮಾಡಲಿದ್ದೇವೆ. ಖಾಲಿ ನಿವೇಶನಗಳ ಮಾಲೀಕರಲ್ಲಿ ಅರಿವು-ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತೇವೆ ಎನ್ನುತ್ತಾರೆ.
ಬೇಸತ್ತ ಪಟ್ಟಣವಾಸಿಗಳು , ಆ ನಗರೋತ್ಥಾನ ಅದಿನ್ನೆಂದು ಅನುಷ್ಠಾನಗೊಳ್ಳಲಿದೆಯೋ ಎಂದು ಹತಾಶರಾಗಿ ಹೋಗಿದ್ದಾರೆ.
ಅಭಿವೃದ್ಧಿಗೆ ಮತ್ತೆ 64 ಕೋಟಿ ; ಶಾಸಕರ ಭರವಸೆ :
ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಅದರ ಟ್ರಯಲ್-ಪರೀಕ್ಷೆಗಳನ್ನು ನಡೆಸಿ ಕನೆಕ್ಷನ್ ಕೊಟ್ಟ ನಂತರ, ಪಟ್ಟಣದ ರಸ್ತೆಗಳಿಗೆ ಡಾಂಬರೀಕರಣದ ಕಾಮಗಾರಿ ಕೈಗೆತ್ತಿಕೊಳ್ಳಲು ಸುಗಮವಾಗಲಿದೆ.
ಈಗ ಹೊಸದಾಗಿ ಮತ್ತೆ 64 ಕೋಟಿ ರೂಪಾಯಿಗಳನ್ನು ಕುಡಿಯುವ ನೀರಿನ ಪೈಪ್’ಲೈನ್ ಕಾಮಗಾರಿಗಾಗಿ ಬಿಡುಗಡೆ ಮಾಡಿಸಲಾಗಿದೆ.
ಗಣಿ ಬಾಧಿತ ಪ್ರದೇಶಾಭಿವೃದ್ಧಿ ಮತ್ತು ಪರಿಸರ ಪುನರುಜ್ಜೀವನ ಯೋಜನೆಯಡಿ 50 ಕೋಟಿ ರೂಪಾಯಿಗಳನ್ನು ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಊರೂರಿಗೂ ಸಿಮೆಂಟ್ ರಸ್ತೆ ನಿರ್ಮಿಸಿಕೊಡುವ ಯೋಜನೆಯಿದೆ. ನಗರೋತ್ಥಾನ ಯೋಜನೆಯಡಿ ಎಲ್ಲ ಅಭಿವೃದ್ಧಿ ಕೆಲಸಗಳನ್ನೂ ಸಾಂಗೋಪಾಂಗವಾಗಿ ನೆರವೇರಿಸಲಾಗುವುದು. ಮಳೆ ಇರುವ ಕಾರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ತೊಡಕುಂಟಾಗುತ್ತಿದೆ, ಅಷ್ಟೆ ಎಂದು ಶಾಸಕ ಸಿ ಬಿ ಸುರೇಶ್ ಬಾಬು’ರವರು ಹೇಳುತ್ತಾರೆ.
ಯುಜಿಡಿ ಮಾಡಿದ್ದೇ ಬಂತು ; ಊರ ಜನರ ನೆಮ್ದಿ ಕೆಡ್ತು ::
ಇಂದಿರಾ ಕ್ಯಾಂಟೀನ್, ವಿದ್ಯಾನಗರ, ಮಹಾಲಕ್ಷ್ಮಿ ಬಡಾವಣೆ, ಕನಕಗಿರಿ ಬಡಾವಣೆ, ಮಾರ್ಕೆಟ್ ರಸ್ತೆ, ತೇರುಬೀದಿ, ಸರ್ಕಾರಿ ಆಸ್ಪತ್ರೆ ರಸ್ತೆ, ಜೋಗಿಹಳ್ಳಿ ರಸ್ತೆಗಳಲ್ಲಿ ಓಡಾಡುವ ಜನ ಸಂಬಂಧಿಸಿದ ಸರ್ಕಾರಿ ಇಲಾಖೆಗಳಿಗೆ ದಿನನಿತ್ಯ ಶಾಪ ಹಾಕುತ್ತಿದ್ದಾರೆ.
ಯುಜಿಡಿ ಕಾಮಗಾರಿಗಾಗಿ ಬೀದಿ ಬೀದಿಗಳಲ್ಲಿ ರಸ್ತೆಯನ್ನು ಬಗೆದು, ಕನೆಕ್ಷನ್ ಪೈಪುಗಳನ್ನು ಜೋಡಿಸಿದ ಮೇಲೆ, ರಸ್ತೆ ಮಧ್ಯದ ಯುಜಿಡಿ ಹೊಂಡಗಳಿಗೆ ಬರೇ ಮಣ್ಣು ಮುಚ್ಚಿ ಕೈ ತೊಳೆದುಕೊಂಡ ಕಂಟ್ರಾಕ್ಟರುಗಳ ಪತ್ತೆಯಿಲ್ಲ. ಆ ಯುಜಿಡಿ ಹೊಂಡಗಳ ಮಣ್ಣು ಕಸಿದುಕೊಂಡು ಈಗ ಅವೆಲ್ಲಾ ನಾಲೆಯಂತಾಗಿವೆ. ಯುಜಿಡಿ ಕಾಮಗಾರಿಯಿಂದ ಜನತೆಗೆ ಸಿಕ್ಕ ಪ್ರಯೋಜನವಾದರೂ ಏನು ಎಂದು ಕೇಳುತ್ತಾರೆ ಬೇಸತ್ತ ಮಂದಿ.
ಸಂಬಂಧಪಟ್ಟ ಇಲಾಖೆಗಳು ಯಾಕಿಷ್ಟು ಹೊಣೆಗೇಡಿಯಾಗಿವೆ ಎಂದು ಆಶ್ಚರ್ಯಪಡುವ ನಾಗರಿಕರಲ್ಲಿ, ನೀವು ಆರಿಸಿ ಕಳಿಸುತ್ತಿರುವ ನಿಮ್ಮ ಪ್ರತಿನಿಧಿಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ…. ಎಂದು ಊರಿನ ಪ್ರಜ್ಞಾವಂತರು ತಿರುಗಿ ಕೇಳುವಂತಾಗಿದೆ ಪರಿಸ್ಥಿತಿ.
_ವರದಿ: ಸಂಚಲನ
ಚಿಕ್ಕನಾಯಕನ ಸೀಮೆಯಿಂದ