ವಾಟ್ಸಪ್ ಸಂದೇಶ ಅಸಂಬದ್ಧ ; ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸ್ಪಷ್ಟನೆ
ಚಿಕ್ಕನಾಯಕನಹಳ್ಳಿ : ‘ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂಪಾಯಿಗಳ ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಈ ಮಾಹಿತಿ ಸಾರ್ವಜನಿಕರಿಗೆ ತಿಳಿದೇ ಇಲ್ಲ’ ಎಂಬ ವಾಟ್ಸಪ್ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಜಿಲ್ಲಾ ಮಕ್ಕಳ ಘಟಕದ ಬಳಿ ವಿಚಾರಿಸಿದಾಗ ಇದು ಮಾಹಿತಿಯ ಅಭಾವ ಹಾಗೂ ದೋಷಯುಕ್ತ ಸಂದೇಶ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ಪಷ್ಟಪಡಿಸಿದೆ.
ಇದಕ್ಕೆ ಅರ್ಜಿ ಸಲ್ಲಿಸಲು ಬಯಸಿ ಪ್ರತಿದಿನ ಹತ್ತಾರು ಮಂದಿ ಜಿಲ್ಲಾಧಿಕಾರಿಗಳ ಕಚೇರಿಗೆ, ತಹಸೀಲ್ದಾರರ ಕಚೇರಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಫೋನ್ ಕರೆ ಮಾಡಿ ಯೋಜನೆಯ ಕುರಿತು ವಿಚಾರಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಕೆಲಮಂದಿ ಮಧ್ಯವರ್ತಿಗಳು ಈ ಯೋಜನೆಗೆ ಅರ್ಜಿ ಹಾಕಿಸುತ್ತೇವೆ ಎಂದು ನಂಬಿಸಿ ಜನರಿಂದ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಬಯಸುವ ಅರ್ಹ ಆಕಾಂಕ್ಷಿಗಳಿಂದ ಸುಲಭದಲ್ಲಿ ಹಣ ಪೀಕುವ ತಂತ್ರವನ್ನೂ ಕೆಲಮಂದಿ ಮಧ್ಯವರ್ತಿಗಳು ರೂಪಿಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ. ಇದೊಂದು ವದಂತಿಯಾಗಿದ್ದು, ಇಂಥ ಸಂದೇಶ ಜನರ ಫೋನಿಗೆ ಬಂದಿದ್ದರೆ, ಯಾರೂ ಅದನ್ನು ಮುಂದೆ ಫಾರ್ವರ್ಡ್ ಮಾಡದೆ ಡಿಲೀಟ್ ಮಾಡಿಬಿಡಲು ಸೂಚಿಸಲಾಗಿದೆ.
ಹಾಗಾದರೆ, ಲಭ್ಯವಿರುವ ಸೌಲಭ್ಯವೇನು ಎಂದು ಪರಿಶೀಲಿಸಿದರೆ, ಈ ಯೋಜನೆಯಲ್ಲಿರುವ ಸೌಲಭ್ಯಗಳ ವಾಸ್ತವತೆಯೇ ಬೇರೆ ಇದೆ. ಮಕ್ಕಳ ಪಾಲನೆ ಮತ್ತು ರಕ್ಷಣೆಯ ಮಕ್ಕಳ ನ್ಯಾಯ ಕಾಯ್ದೆ 2015, ತಿದ್ದುಪಡಿ 2021 ಕಲಂ 2(58) ರ ಪ್ರಕಾರ, ಕುಟುಂಬದೊಂದಿಗೆ ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಮಗುಬಿನ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಬೇಕಾಗಿರುವ ಪೂರಕ ಬೆಂಬಲ, ಹಣಕಾಸು ಮತ್ತು ಇತ್ಯಾದಿ ಸಹಕಾರ ನೀಡಲು ಲಭ್ಯವಿರುವ “ಪ್ರಾಯೋಜಕತ್ವ ಕಾರ್ಯಕ್ರಮ” ಎಂದು ವ್ಯಾಖ್ಯಾನಿಸಲಾಗಿರುವ ಕಾರ್ಯಕ್ರಮವನ್ನು ಹೀಗೆ ಮಾಹಿತಿ ಅಭಾವ ಮತ್ತು ದೋಷಯುತ ವದಂತಿಯನ್ನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ.
ಸದರಿ ಪ್ರಾಯೋಜಕತ್ವ ಕಾರ್ಯಕ್ರಮದ ಅಡಿಯಲ್ಲಿ ಪುನರ್ವಸತಿ ಮತ್ತು ತಡೆಗಟ್ಟುವಿಕೆ ಎಂಬ ಎರಡು ಮಾದರಿಗಳಿವೆ. 18 ವರ್ಷ ವಯಸ್ಸಿನ ಒಳಗಿರುವ ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಯ ವಾತಾವರಣದಿಂದ ಬಿಡುಗಡೆಗೊಳಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರಾಯೋಜಕತ್ವ ಬೆಂಬಲ ಒದಗಿಸುವ ಅವಕಾಶ ಪುನರ್ವಸತಿ ಮಾದರಿಯಲ್ಲಿದೆ. ಅದೇ ರೀತಿ ವಿವಿಧ ಕಾರಣಗಳಿಗಾಗಿ ಪೋಷಕರಿಂದ ಬೇರ್ಪಟ್ಟು ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಕುಟುಂಬದ ವಾತಾವರಣದಲ್ಲಿ ಮಕ್ಕಳು ಬೆಳೆಯುವ ಅನುಕೂಲವನ್ನು ಒದಗಿಸಲು ತಡೆಗಟ್ಟುವಿಕೆ ಮಾದರಿಯ ಪ್ರಾಯೋಜಕತ್ವ ಬೆಂಬಲ ಒದಗಿಸಲು ಅವಕಾಶವಿದೆ.
ಇದು, ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳು, ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡುವ ಮಕ್ಕಳು, ಮಕ್ಕಳ ಕಾಯ್ದೆ 2015’ರ ಪ್ರಕಾರ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು, ವಸತಿರಹಿತ ಮಕ್ಕಳು, ನೈಸರ್ಗಿಕ ವಿಕೋಪಗಳಿಗೆ ಒಳಗಾದ ಸಂತ್ರಸ್ತ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಬಾಲ್ಯವಿವಾಹಕ್ಕೆ ಬಲಿಯಾದ ಸಂತ್ರಸ್ತರು, ಮಾನವ ಕಳ್ಳಸಾಗಾಣಿಕೆಗೆ ಒಳಗಾದ ಸಂತ್ರಸ್ತ ಮಕ್ಕಳು, ಹೆಚ್ಐವಿ ಅಥವಾ ಇನ್ನಿತರೆ ಮಾರಣಾಂತಿಕ ರೋಗಗಳಿಗೆ ಒಳಗಾದ ಸಂತ್ರಸ್ತ ಮಕ್ಕಳು, ವಿಶೇಷ ಚೇತನ ಮಕ್ಕಳು, ತಪ್ಪಿಸಿಕೊಂಡಿರುವ ಅಥವಾ ಮನೆಬಿಟ್ಟು ಓಡಿ ಬಂದಿರುವ ಮಕ್ಕಳು, ಬಾಲ ಭಿಕ್ಷುಕ ಮಕ್ಕಳು, ಬೀದಿ ವಾಸಿ ಮಕ್ಕಳು, ಹಿಂಸೆಗೆ ಒಳಪಟ್ಟ ಅಥವಾ ನಿಂದನೆಗೆ ಒಳಪಟ್ಟ ಮಕ್ಕಳು, ಇತರೆ ಶೋಷಿತ ಮಕ್ಕಳು ಹಾಗೂ ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಂತಹವರ ಅರ್ಹ ಮಕ್ಕಳು, ಲೈಂಗಿಕವಾಗಿ ದುರ್ಬಳಕೆಗೆ ಒಳಗಾದ ಸಂತ್ರಸ್ತ ಮಕ್ಕಳು, ವಿಸ್ತೃತ ಕುಟುಂಬದಲ್ಲಿರುವ ಅನಾಥ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಅರ್ಹ ಮಕ್ಕಳು, ಜೈಲು ಸೇರಿರುವ ಪೋಷಕರ ಮಕ್ಕಳು ತರಹದ ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಮಾತ್ರ ಪ್ರಾಯೋಜಕತ್ವ ಬೆಂಬಲ ಯೋಜನೆಯಡಿ ಅನುಕೂಲ ಒದಗಿಸಿಕೊಡಲು ಅವಕಾಶಗಳಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
______ಸಂಚಲನ
ಚಿಕ್ಕನಾಯಕನ ಸೀಮೆಯಿಂದ