ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ
ಹಾಗೂ
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ; ಸಿಐಟಿಯು ಅಗ್ರಹ
ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಒಂದು ಸಾವಾಗಿ ಇನ್ನೂ ನಾಲ್ಕೈದು ದಿನಗಳಷ್ಟೇ ಆಗಿದೆ. ಕಾರ್ಮಿಕ-ಸಮುದಾಯದಲ್ಲಿ ಅದರ ದುಃಖ ಆರುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.
ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ-ಕೈಗಾರಿಕಾ ಪ್ರದೇಶದಲ್ಲಿನ ‘ಪರಿಮಳ ಆಗ್ರೋ ಟೆಕ್’ ಕಾರ್ಖಾನೆಯಲ್ಲಿ ಬುಧವಾರ ಭೀಕರ ಸ್ಫೋಟ ಸಂಭವಿಸಿ, ಎರಡು ಸಾವು ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಮೂವರು ಕಾರ್ಮಿಕರ ಸ್ಥಿತಿ ಚಿಂತಾಜನಕ.
ಹಿಂದಿನ ದಿನವಷ್ಟೇ ಕೋಪ್ಪಳ ತಾಲ್ಲೂಕಿನ ಅಲ್ಲಾನಗರದ ಹೋಸಪೇಟೆ ಸ್ಟೀಲ್ ಕಾರ್ಖಾನೆ(ಕಾಮಿನಿ ಇಂಡಸ್ಟ್ರೀಸ್)’ನಲ್ಲಿ ಮಂಗಳವಾರ ಸಂಜೆ ಅನಿಲ ಸೋರಿಕೆಯಿಂದಾಗಿ ಮಾರುತಿ ಕೊರಗಲ್ (24 ವರ್ಷ) ಹೆಸರಿನ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದರು. ಈ ಸ್ಫೋಟದಲ್ಲಿ ಇನ್ನೂ 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಮಾಸುವ ಮುನ್ನವೇ ತುಮಕೂರಿನ ಸ್ಫೋಟದ-ಘಟನೆ ರಾಜ್ಯದ ಕಾರ್ಖಾನೆ ಕಾರ್ಮಿಕರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದೆ.
ಕಾರ್ಖಾನೆ ಮಾಲೀಕರ ಹೊಣೆಗೇಡಿತನ ಹಾಗೂ ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಮರ್ಜಿಯಲ್ಲಿ ದುಡಿಯುತ್ತಿದ್ದ ಈ ನಾಲ್ಕೂ ಅಮೂಲ್ಯ ಜೀವಗಳು ತಮ್ಮದಲ್ಲದ ತಪ್ಪಿನಿಂದಾಗಿ ಇಹಲೋಕ ತ್ಯಜಿಸಿವೆ.
ಬಂಡವಾಳಶಾಹಿ ನಿರ್ಲಕ್ಷ್ಯ, ಸುರಕ್ಷತಾ ಉಡುಪು ಮತ್ತು ಸಲಕರಣೆಗಳ ಕೊರತೆ ಹಾಗೂ ಯಂತ್ರೋಪಕರಣಗಳ ಸಮರ್ಪಕ ದುರಸ್ತಿ ಮಾಡಿಸದ ಕಾರ್ಖಾನೆ ಆಡಳಿತ ಮಂಡಳಿಯವರ ಬೇಜವಾಬ್ದಾರಿತನಗಳು ಮೇಲ್ನೋಟಕ್ಕೆ ಇಲ್ಲಿ ಎದ್ದು ಕಾಣುತ್ತಿವೆ.
ಕಾರ್ಖಾನೆಗಳ ಯಂತ್ರೋಪಕರಣಗಳ ಸಮರ್ಪಕವಾದ ನಿರ್ವಹಣೆಯ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅದರ ಸುರಕ್ಷತೆಯನ್ನು ಖಾತರಿಪಡಿಸಬೇಕಿದ್ದ
‘ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಇಲಾಖೆ’ಯ ಬೇಜವಾಬ್ದಾರಿತನವೂ ಇಲ್ಲಿ ಪ್ರಮುಖ ದೋಷಿ. ತಮ್ಮ ಹೊಣೆಗಾರಿಕೆಗಳನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸಬೇಕಿದ್ದ ಬಹುತೇಕರ ಬೇಜವಾಬ್ದಾರಿತನದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು, ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಗಂಭೀರವಾಗಿ ಅರೋಪಿಸುತ್ತದೆ. ತಮ್ಮ ಹೊಣೆಗೇಡಿತನದಿಂದಾಗಿ ಇಂತಹ ಅವಘಡಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಆಗ್ರಹಿಸುತ್ತದೆ. ಮತ್ತು, ಘಟನೆಯಲ್ಲಿ ಮರಣ ಹೊಂದಿರುವ ಕಾರ್ಮಿಕರ ಅವಲಂಬಿತರಿಗೆ ಅಯಾ ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ಪರಿಹಾರವನ್ನು ಕೊಡಿಸುವಂತೆ ಸಿಐಟಿಯು ಒತ್ತಾಯಿಸುತ್ತದೆ. ಹಾಗೂ ಎಲ್ಲಾ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ಕೊಡಿಸುವುದಲ್ಲದೆ, ಅವರಿಗೂ ತಲಾ 15 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಒತ್ತಾಯಿಸುತ್ತದೆ.
ಮೃತರ ಕುಟುಂಬದ ದುಃಖದಲ್ಲಿ ಸಿಐಟಿಯು ಸದಾ ಭಾಗಿಯಾಗಿರುತ್ತದೆ.
ತುಮಕೂರು ನಗರದ ಸ್ಪೋಟದಲ್ಲಿ ಮರಣ ಹೊಂದಿರುವ ಕಾರ್ಮಿಕರು ಬಿಹಾರ ಮೂಲದದವರು. ಸಂತೋಷ್(22 ವರ್ಷ) ಮತ್ತು ಚಂದನ್ ಶರ್ಮಾ(26 ವರ್ಷ). ದೂರದ ಬಿಹಾರದಲ್ಲಿರುವ ಅವರ ಕುಟುಂಬದ ಹೊಣೆಯನ್ನು ನಿರ್ವಹಿಸಿಬೇಕಾಗಿದ್ದ ಈಯಿಬ್ಬರು ಯುವಕರು ಇಷ್ಟು ಸಣ್ಣವಯಸ್ಸಿಗೆ ಮರಣ ಹೊಂದಿರುವುದು ವಿಷಾದಕರ.
ಬಿಹಾರ ಸೇರಿದಂತೆ ಉತ್ತರಭಾರತ ಮತ್ತು ಹಲವು ಈಶಾನ್ಯ ರಾಜ್ಯಗಳಿಂದ ಲಕ್ಷಗಟ್ಟಲೆ ಕಾರ್ಮಿಕರು ನಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿ ವಿವಿಧ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಹಿಂಡು-ಹಿಂಡಾಗಿ ಕಾರ್ಮಿಕರನ್ನು ಇಲ್ಲಿಗೆ ಕರೆತಂದು, ಯಾವುದೇ ಕಾರ್ಮಿಕ ಕಾಯ್ದೆ- ಕಾನೂನುಗಳ ಕನಿಷ್ಟ ರಕ್ಷಣೆ ಇಲ್ಲದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಡೆಗೆ ಇವರ ಜೀವಗಳಿಗೂ ಬೆಲೆಯಿಲ್ಲದಂತೆ ಇವರನ್ನು ಸಾರಾಸಗಟು ಕಡೆಗಣಿಸಿ, ನಿತ್ಯ ಶೋಷಿಸುತ್ತಿರುವುದನ್ನು ಸಿಐಟಿಯು ಖಂಡಿಸುತ್ತದೆ. ಬಂಡವಾಳಗಾರರು ಕಾರ್ಮಿಕರ ಜೀವಗಳಿಗೆ ಕನಿಷ್ಟ ಕಿಮ್ಮತ್ತನ್ನೂ ಕೊಡದೆ ತಮ್ಮ ಲಾಭದ ಕಡೆಗಷ್ಟೇ ಗಮನ ಕೇಂದ್ರಿಕರಿಸಿದ್ದಾರೆ. ವಲಸೆ ಕಾರ್ಮಿಕರ ಪಾಲಿನ ಶೋಚನೀಯ ಸ್ಥಿತಿಯಿದು.
ಈ ನಾಲ್ಕೂ ಪ್ರಕರಣಗಳಲ್ಲಿಯೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿರುವವರ ವಿರುದ್ದ ಸೂಕ್ತವಾದ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಸಿಐಟಿಯು ಅಗ್ರಹಿಸುತ್ತದೆ.
ಮುಖ್ಯವಾಗಿ, ಎಲ್ಲ ಗಾಯಾಳುಗಳಿಗೂ ಅತ್ಯುತ್ತಮವಾದ ಚಿಕಿತ್ಸೆಯನ್ನು ಸರ್ಕಾರ ಉಚಿತವಾಗಿ ಒದಗಿಸಿಕೊಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕರ್ನಾಟಕದ ಸೈಯದ್ ಮುಜೀಬ್, ಎ. ಲೋಕೇಶ್, ಜಿ.ಕಮಲ ಹಾಗೂ ಅಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ.
__________________________________________________
*ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್*
ಜನಪರ ಚಳವಳಿ ಕೇಂದ್ರ, ಗಾಂಧಿನಗರ,
ವಿದ್ಯೋದಯ ಲಾ-ಕಾಲೇಜು ಹಿಂಭಾಗ, ತುಮಕೂರು. ಫೋ: 0816-2278960
ವರದಿ,
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ