ತುಮಕೂರು: ಈ ಸಮಾಜದ ಚಲನಶೀಲ ವ್ಯಕ್ತಿ ಹಾಗೂ ರಕ್ತ, ಬೆವರುಗಳ ಮೂಲಕ ಸಂಪತ್ತನ್ನು ಸೃಷ್ಟಿಗೆ ಸದಾ ಶ್ರಮಿಸುವಂತಹ ಶ್ರಮಿಕರನ್ನು ಬೇಡುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಅಸಮಾನ ವ್ಯವಸ್ಥೆ ಬದಲಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಿಐಟಿಯು ಕಳೆದ 50 ವರ್ಷಗಳಿಂದಲೂ ಅಹರ್ನಿಷಿ ದುಡಿಯುತ್ತ ಬಂದಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ಅವರು ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೇ 30ರಂದು ಮಧ್ಯಾಹ್ನ 2ಗಂಟೆಗೆ ಕರ್ನ್ ಲಿಬರರ್ಸ್ ಹಾಗೂ ತ್ರಿವೇಣಿ ಏರೋನಾಟಿಕ್ಸ ಕಾರ್ಮಿಕರ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಸಿಐಟಿಯು 50ನೇ ವರ್ಷಾಚರಣೆ ಅಂಗವಾಗಿ ಮಾನವ ಸರಪಳಿಯನ್ನು ಉದ್ದೇಶಿಸಿ ಮಾತನಾಡಿದರು.
ಸಿಐಟಿಯು 50 ವರ್ಷಗಳಿಂದ ನಿರಂತರವಾಗಿ ಐಕ್ಯತೆ ಹಾಗೂ ಹೋರಾಟದ ಸಂದೇಶವನ್ನು ಜಾತಿ, ಧರ್ಮ, ಭಾಷೆ, ಹಾಗೂ ಪ್ರದೇಶಗಳ ಮಿತಿಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಶೋಷಣೆರಹಿತ ಸಮಾಜವನ್ನು ಕಟ್ಟುವಂತಹ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಬರುತ್ತಿದೆ ಎಂದರು.
ಸಿಐಟಿಯು ತುಮಕೂರು ತಾಲೂಕು ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 10 ಗಂಟೆಯಿಂದ 8 ಗಂಟೆಗೆ ಇಳಿಸಿರುವುದು ಸ್ವಾಗತಾರ್ಹ. ಮತ್ತೆ ಕೆಲಸದ ಅವಧಿಯನ್ನು ಹೆಚ್ಚಿಸಲು ಮುಂದಾದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನ್ ಲಿಬರರ್ಸ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಸ್ವಾಗತಿಸಿದರು. ಸಿಐಟಿಯು ತಾಲೂಕು ಖಜಾಂಚಿ ಹುಚ್ಚೇಗೌಡ,ತ್ರಿವೇಣಿ ಏರೋನಾಟಿಕ್ಸ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಲಿಂಗೇಶ್, ಮುಖಂಡರಾದ ಮಂಜುನಾಥ್, ಕರ್ನ್ ಲಿಬರರ್ಸ್ ಕಾರ್ಮಿಕರ ಸಂಘದ ಝಜಾಂಚಿ ಉಮೇಶ್ ಉಪಸ್ಥಿತರಿದ್ದರು.
ಸಿಐಟಿಯು 50ನೇ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧೆಡೆ ಕಾರ್ಮಿಕರು ಫ್ಯಾಕ್ಟರಿಗಳ ಮುಂದೆ ದೈಹಿಕ ಅಂತರವನ್ನು ಕಾಯ್ದುಕೊಂಡು ಮಾನವ ಸರಪಳಿ ರಚಿಸಿದರು. ಸಿಐಟಿಯು ಸದಸ್ಯರು ತಮ್ಮ ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು 50ನೇ ವರ್ಷ ಆಚರಿಸಿದರು.