ಚಿಕ್ಕನಾಯಕನಹಳ್ಳಿ : ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಯೋಜನೆಯಡಿಯಲ್ಲಿ 27 ಮಂದಿ ಅರ್ಹ ಫಲಾನುಭವಿ ಅಲೆಮಾರಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಪತ್ರ ನಮೂನೆ- 2 ನ್ನು ಪ್ರತಿ ಸೋಮವಾರದ ತಮ್ಮ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಿ ಬಿ ಸುರೇಶ್ ಬಾಬು ವಿತರಿಸಿದರು.
ತಾಲ್ಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಗೆರೆ ವಸತಿ ಪ್ರದೇಶದಲ್ಲಿ ಎಸ್ ಸಿ-ಎಸ್ ಟಿ ಅಲೆಮಾರಿ ಸಮುದಾಯದವರಿಗೆ ಹಂಚಲಾಗಿದ್ದ ನಿವೇಶನಗಳಲ್ಲಿ ಆಗಿರುವ ಮನೆ-ಮಂಜೂರಾತಿ ಹಾಗೂ ಕಾಮಗಾರಿ ಪತ್ರದ ನಮೂನೆ-2 ನ್ನು ತಾಲ್ಲೂಕು ಪಂಚಾಯತ್ ಹಾಗೂ ಕೆಂಕೆರೆ ಗ್ರಾಮ ಪಂಚಾಯತಿ ವತಿಯಿಂದ ಶಾಸಕರ ಮೂಲಕ ಹಕ್ಕುದಾರ ಅಲೆಮಾರಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ-ರಾಜಣ್ಣ, ಹಳ್ಳಳ್ಳಿ ತಿರುಗಿ ಹೇರ್ ಪಿನ್ನು, ಪ್ಲಾಸ್ಟಿಕ್ ಸಾಮಗ್ರಿ, ಮಕ್ಕಳಾಟಿಕೆ ಮಾರಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಅಲೆಮಾರಿಗಳು, ಈ ಆನ್’ಲೈನ್ ಶಾಪಿಂಗು ಮತ್ತು ಹೋಮ್ ಡೆಲಿವರಿ ಆಧುನಿಕ ಕಾಲದ ಜೊತೆ ಏಗಲಾಗದೆ ನಿರುದ್ಯೋಗಿಗಳಾಗಿ ನಾಶವಾಗುತ್ತಿರುವುದನ್ನು ಶಾಸಕರ ಬಳಿ ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ ಬಿ ಸುರೇಶ್ ಬಾಬು’ರವರು, ಅಲೆಮಾರಿಗಳ ಉದ್ಯೋಗ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದಂತೆ ವಿವರವಾಗಿ ಚರ್ಚಿಸಿ, ಶೀಘ್ರವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಿ ದೊಡ್ಡಸಿದ್ಧಯ್ಯನವರು ಪ್ರತಿಕ್ರಿಯಿಸಿ, ತಾಲ್ಲೂಕು ಯೋಜನಾಧಿಕಾರಿಗಳ ಕೂಡಲೇ ಚರ್ಚಿಸಿ, ಅಲೆಮಾರಿ ಸಮುದಾಯದವರಿಗೆ ಕೌಶಲ್ಯ ತರಬೇತಿ, ಸ್ವಸಹಾಯ ಗುಂಪು ಮತ್ತು ನಿರ್ದಿಷ್ಟವಾದ ಯಾವುದಾದರೂ ಒಂದು ಉತ್ಪಾದಕ ಸಾಮಗ್ರಿ, ಕೌಶಲ್ಯಾಧಾರಿತ ಕಸುಬುದಾರಿಕೆಯ ತರಬೇತಿ ಕಾರ್ಯಾಗಾರಗಳಿಗೆ ಒತ್ತುಕೊಡುವ ಯೋಜನೆಯನ್ನು ಶೀಘ್ರವೇ ರೂಪಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ, ತಹಸೀಲ್ದಾರ್ ಕೆ ಪುರಂದರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ ದೊಡ್ಡಸಿದ್ಧಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕೆಂಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ಮನೆ ಮಂಜೂರಾತಿ ಪತ್ರ ಪಡೆದ ಅಲೆಮಾರಿ ಸಮುದಾಯದ ಮಹಿಳೆಯರು ಉಪಸ್ಥಿತರಿದ್ದರು.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ