Tuesday, December 3, 2024
Google search engine
HomeUncategorizedಮನುವಾದ'ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ: ಸಿ.ಡಿ. ಚಂದ್ರಶೇಖರ್

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ: ಸಿ.ಡಿ. ಚಂದ್ರಶೇಖರ್

ಚಿಕ್ಕನಾಯಕನಹಳ್ಳಿ : ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಬೆಳಗ್ಗೆ 75’ನೆಯ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.

ಸಂವಿಧಾನ ಗ್ರಂಥ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದ ನಂತರ ತಹಸೀಲ್ದಾರ್ ಕೆ ಪುರಂದರ್’ರವರು,‌ ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದ ಅಧ್ಯಾಪಕ ಪ್ರಕಾಶ್, ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ರಚನೆಯಲ್ಲಿ ಸಮೀಕ್ಷಿಸಲಾದ ಮುಖ್ಯ ಸಂಗತಿಗಳು, ಸಮಕಾಲೀನ ಪ್ರಸ್ತುತೆ, ಮೂಲಭೂತ ಹಕ್ಕು ಮತ್ತು ಧರ್ಮನಿರಪೇಕ್ಷ ಆದ್ಯತೆ ತರಹದ‌ ಬಹಳಷ್ಟು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿಡಿಸಿ ಹೇಳಿದರು.

ನಂತರ ಮಾತನಾಡಿದ ಮಾದಿಗ ದಂಡೋರ ಚಂದ್ರು, ಸಂವಿಧಾನ ಸಮರ್ಪಿಸಿಕೊಂಡು ಎಪ್ಪತ್ತೈದು ವರ್ಷ ಕಳೆದರೂ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಸಮಾಜದಲ್ಲಿ ಇಂದಿಗೂ ಮೇಲು-ಕೀಳು, ತಾರತಮ್ಯ, ಸ್ವಜನ ಪಕ್ಷಪಾತ, ಅಸಮಾನತೆ ನಿರ್ಮೂಲನೆಯಾಗಿಲ್ಲ. ಅವು ಈಗಲೂ ನಮ್ಮ ಸುತ್ತ ತಾಂಡವವಾಡುತ್ತಿವೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗುವ ಕಾರಣದಿಂದ ಸಂವಿಧಾನದ ಆಶಯಗಳು ವಾಸ್ತವವಾಗಿ ಸಮಾಜದಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ ::

ಸರ್ಕಾರದ ಗ್ಯಾರಂಟಿಭಾಗ್ಯ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಸಿ ಡಿ ಚಂದ್ರಶೇಖರ್ ಮಾತನಾಡಿ, ಡಾ.ಅಂಬೇಡ್ಕರರು ರಚಿಸಿಕೊಟ್ಟ ಸಂವಿಧಾನದ ಕಾರಣದಿಂದ ಮನುವಾದದ ಚಾತುರ್ವರ್ಣ ವ್ಯವಸ್ಥೆಯ ದಾಸ್ಯಕ್ಕೆ ಈಡಾಗಿದ್ದ ನಮ್ಮ ವಂಚಿತ, ಅಲಕ್ಷಿತ, ಆದಿವಾಸಿ, ದಲಿತ-ಶೂದ್ರ ವರ್ಗಗಳು ಬಿಡುಗಡೆಯ ಭಾಗ್ಯ ಪಡೆದುಕೊಂಡವು. ಸಂವಿಧಾನ ಒಂದಿಲ್ಲದಿದ್ದರೆ, ಈಯೆಲ್ಲ ದಲಿತ-ಶೂದ್ರ ವರ್ಗಗಳು ಶಾಶ್ವತವಾಗಿ ಮನುವಾದದ ದಾಸ್ಯದಡಿಯಲ್ಲೇ ಇರಬೇಕಾಗುತ್ತಿತ್ತು. ಸಂವಿಧಾನ ಯಾಕೆ ಬೇಕು ಎಂದು ಕೇಳಿಕೊಂಡರೆ, ರಾಜಪ್ರಭುತ್ವ ಅಳಿದು ಪ್ರಜೆಗಳೇ ರಾಜ್ಯ ಆಳುವ ಪ್ರಜಾಪ್ರಭುತ್ವ ಜಾರಿಯಾಗುವುದಕ್ಕಾಗಿ ಬೇಕು. ಪುರೋಹಿತಶಾಹಿ ದಾಸ್ಯದಿಂದ ವಿಮೋಚನೆ ಪಡೆದು ಸಮಾನತೆಯ ಕಡೆಗೆ ವ್ಯವಸ್ಥೆಯನ್ನು ಬದಲಾಯಿಸುವುದಕ್ಕಾಗಿ ಬೇಕು. ಸರ್ವ ಜನಾಂಗದ ಶಾಂತಿಯ ತೋಟ’ದಂತಿರುವ ನಾಡು-ನುಡಿ-ನೆಲದ ಜೊತೆ ಬಾಳುವ ಎಲ್ಲ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲಿಕ್ಕಾಗಿ ಬೇಕು. ಪ್ರಜೆಗಳ ಅಭಿವ್ಯಕ್ತಿಯ ಹಕ್ಕುಗಳ ಸಂರಕ್ಷಣೆಗಾಗಿ, ನ್ಯಾಯಾಂಗದ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಯಾವುದೇ ರಾಷ್ಟ್ರ ಅಥವಾ ರಾಜ್ಯವೊಂದರ ಸುವ್ಯವಸ್ಥಿತ ಆಡಳಿತ ನಡೆಸಲು ಸಂವಿಧಾನ ಬೇಕು ಎಂದು ಅವರು ಹೇಳಿದರು.

ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ, ಎಲ್ಲರಿಗೂ ಲಭಿಸುವ ಸಮಾನ ಅಧಿಕಾರದ ಅವಕಾಶಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿಕೊಂಡು ಜನಸಮೂಹಗಳನ್ನು ಮುನ್ನಡೆಸಲು ಸಂವಿಧಾನ ಬೇಕು. ಇಲ್ಲದಿದ್ದರೆ, ಶಿಕ್ಷಣ ವಂಚಿತರಾಗಿ, ಭೂ-ರಹಿತರಾಗಿ ಎಲ್ಲ ಬಹುಜನ ಸಮುದಾಯಗಳು ಬದುಕಿರಬೇಕಾಗಿತ್ತು. ಈ ಸಂದರ್ಭದಲ್ಲಿ ಅವರು, ಏಕಲವ್ಯ-ದ್ರೋಣಾಚಾರ್ಯರ ಪ್ರಸಂಗವನ್ನು ನೆನಪಿಸುವ ಮೂಲಕ ಸಂವಿಧಾನದ ರಕ್ಷಣೆ ಮಾಡಿಕೊಳ್ಳದಿದ್ದರೆ, ಭವಿಷ್ಯದಲ್ಲಿ ಮತ್ತೆ ಬಂದೆರಗಲಿರುವ ಮನುವಾದ ಮತ್ತು ಚಾತುರ್ವರ್ಣ ವ್ಯವಸ್ಥೆಯ ಅಪಾಯಗಳನ್ನು ವಿವರಿಸಿದರು. ಹಾಗಾಗಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉಪಾಯಗಾರರಿಂದ ಸಂವಿಧಾನ ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ, ಸಂವಿಧಾನ ರಚಿಸಿದ ಡಾ.ಅಂಬೇಡ್ಕರರ ಜೀವನ ಮತ್ತು ವಿದ್ಯಾಭ್ಯಾಸದ ಸಂದರ್ಭದಲ್ಲಿ ಶಾಹು ಮಹಾರಾಜರು ಅವರಿಗೆ ಚಾಚಿದ ಸಹಾಯಹಸ್ತದ ಕುರಿತು ಪ್ರಸ್ತಾಪಿಸಿದರು. ಸಂವಿಧಾನದ ಅಡಿಯಲ್ಲಿ ಅಧಿಕಾರದ ಅವಕಾಶಗಳನ್ನು ಪಡೆದಿರುವ ಯಾರೇ ಆದರೂ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಮಹಾಓದುಗ ಅಂಬೇಡ್ಕರ್’ರವರು ಅವರ ವಿದ್ಯಾಭ್ಯಾಸಕ್ಕಾಗಿ ಅನುಭವಿಸಿದ ನೋವುಗಳನ್ನು ಕುರಿತು ಸೂಚ್ಯವಾಗಿ ಪ್ರಸ್ತಾಪಿಸಿದರು. ಇಷ್ಟೆಲ್ಲಾ ಆದರೂ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲ ರೀತಿಯ ಹಕ್ಕು-ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿರುವಂತಹ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಅವರು ಎಂದು ಅಂಬೇಡ್ಕರ್’ರವರನ್ನು ಸ್ಮರಿಸಿದರು.

ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿಯವರು, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ನಿರೂಪಿಸಿದರು. ತಹಸೀಲ್ದಾರ್ ಕೆ ಪುರಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಮುಖಂಡ ಮಹಬೂಬ್ ಆಲಮ್, ಮುಖಂಡ ಲಿಂಗದೇವರು, ಮಾದಿಗ ದಂಡೋರದ ಚಂದ್ರಶೇಖರ್, ಮುಖಂಡ ಕೆ ಜಿ ಕೃಷ್ಣೇಗೌಡ, ಕನ್ನಡ ಸಂಘದ ಸಿ ಬಿ ರೇಣುಕಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಚಂದ್ರಶೇಖರ್, ಅಧ್ಯಾಪಕ ಪ್ರಕಾಶ್ ಸೇರಿದಂತೆ, ಸುನೀಲ್, ಇಮ್ರಾನ್, ಪಾಂಡು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಸಂಚಲನ

ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?