ತುರುವೇಕೆರೆ: ಕೊರೊನಾ ಸೋಂಕಿನಿಂದ ಸತ್ತವರ ಶವ ಕಂಡರೆ ದೂರ ಓಡುವ ಕಾಲ ಇದು. ಆದರೆ, ತುರುವೇಕೆರೆಯ ಮುಸ್ಲಿಂ ಯುವಕರು ಕೊರೊನಾದಿಂದ ಸತ್ತವರ ಶವ ಸಂಸ್ಕಾರಕ್ಕೆ ತಂಡ ಮಾಡಿಕೊಂಡಿರುವುದು ತಾಲ್ಲೂಕಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಯಾವುದೇ ಜಾತಿ, ಧರ್ಮದ ಜನರು ಸಾವಿಗೀಡಾದರೂ ಅವರವರ ಮನೆಯವರ ರೀತಿ ರಿವಾಜಿನಂತೆ ಶವ ಸಂಸ್ಕಾರ ನಡೆಸಿಕೊಡಲು ಮುಂದೆ ಬಂದಿದೆ.
ಪಟ್ಟಣದ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಮುಂದಾಗಿರುವುದು ತಾಲ್ಲೂಕಿನ ಸಾರ್ವಜನಿಕ ವಲಯ ಹಾಗು ಸಾಮಾಜಿಕ ಜಾಲ ತಾಣದಲ್ಲಿ ಪ್ರಶಂಸೆ ಪಡೆದಿದೆ.
ಪಟ್ಟಣದ ಹಾಜಿಆರಿಫ್ಫಾಷಾ, ಅಸ್ಲಾಂ, ನಯಾಜ್, ಜಫ್ರಲ್ಲಾ ಸೇರಿದಂತೆ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಸ್ವ-ಇಚ್ಛೆಯಿಂದ ಕೊರೊನಾದಿಂದ ಸತ್ತವರ ಸಂಪ್ರದಾಯಕ್ಕೆ ಅನುಗುಣವಾಗಿ ಶವ ಸಂಸ್ಕಾರ ಮಾಡುವುದಾಗಿ ತಹಶೀಲ್ದಾರ್ ಆರ್.ನಯೀಂಉನ್ನಿಸಾ ಮತ್ತು ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದು ಇದಕ್ಕೆ ತಾಲ್ಲೂಕು ಆಡಳಿತ ಕೂಡ ಶುಕ್ರವಾರ ಒಪ್ಪಿಗೆ ಸೂಚಿಸಿದೆ ಎನ್ನುತ್ತಾರೆ ಹಾಜಿಆರಿಫ್ಪಾಷಾ.
ಕೊರೊನಾ ಸೋಂಕಿಗೆ ಎಲ್ಲರೂ ಭಯಪಡುತ್ತಾರೆ. ಅದರಿಂದ ಸಾವಾದರೆ ಮುಟ್ಟಲು ಎಂತಹವರೂ ಅಳುಕುತ್ತಾರೆ. ಆದರೆ ನಮ್ಮ ಸ್ನೇಹಿತರು ಸತ್ತವರಿಗೆ ಒಂದು ಸಂಸ್ಕಾರ, ಸದ್ಗತಿ ನೀಡಿ ಆಮೂಲಕ ನೊಂದವರ ಕುಟುಂಬದವರಿಗೆ ಒಂದು ಸಾಂತ್ವಾನ ಹೇಳಿದಂತೆ ಆಗಲೆಂದು. ಆಮೂಲಕ ಸಮಾಜ ಸೇವೆಯ ಮನೋಭಾವನೆ ನಮ್ಮ ಯುವ ಸಮುದಾಯಲ್ಲಿ ಬೆಳೆಯಲು ಎಂಬ ಉದ್ದೇಶದಿಂದ ಇಂತಹ ಕೆಲಸ ಮಾಡಲು ಒಲವು ತೋರಿದೆವು.
ಈ ಕೆಲಸವನ್ನು ಕೊರೊನಾ ಬಂದ ಕಳೆದ ಬಾರಿಯೇ ಮಾಡಬೇಕೆಂದುಕೊಂಡಿದ್ದೆವು. ಅದು ಈಗ ಕೈಗೂಡಿದೆ. ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯು ನೀಡುವ ಸೋಂಕಿನ ಎಚ್ಚರ ಹಾಗು ಸೂಚನೆಯನ್ನು ಪಾಲಿಸುತ್ತಾ ಕೊರೊನಾದಿಂದ ಸತ್ತವರ ಶವವನ್ನು ಆರೋಗ್ಯ ಇಲಾಖೆ ಎಲ್ಲಿಗೆ ಕಳುಹಿಸುತ್ತದೆ ಆ ಊರಿಗೆ ತಮ್ಮ ಖರ್ಚು ವೆಚ್ಚಗಳಲ್ಲಿಯೇ ಹೋಗಿ ಅಲ್ಲಿ ಅಚ್ಚುಕಟ್ಟಾಗಿ ಶವ ಸಂಸ್ಕಾರ ಮಾಡಿ ಬರುವೆವು ಎನ್ನುತ್ತಾರೆ ಆರಿಫ್ಪಾಷಾ.