ಅವನು ಸಾಯಲು ನಿರ್ಧರಿಸಿಕೊಂಡನಾದರೂ ಅದುವೇ ಅವನಿಗೆ ಪ್ರಶ್ನೆಯಾಗಿ ಫೆಡಂಭೂತವಾಗಿ ಕಾಡತೊಡಗಿತ್ತು. ಅದೇಕೋ ಅವನಿಗೆ ನಿನ್ನೆಯ ಘಟನೆಗೆ ಇತಿಶ್ರೀ ಹಾಕಲೇಬೇಕಿತ್ತು. ಅಂತಹ ಗಡುಸು ಅವನಲ್ಲಿ ಇಲ್ಲದೇ ಹೋದದ್ದು ಇಷ್ಟೊಂದು ದುಬಾರಿಯಾಗಲಿದೆ ಎಂಬುದನ್ನು ಸಣ್ಣವನಿದ್ದಾಗನಿಂದಲೂ ಯಾರೂ ಅವನಿಗೆ ಹೇಳಿಕೊಟ್ಟಿರಲಿಲ್ಲ.
ಪಕ್ಕದ ಮನೆಯ ಹೆಂಗಸರಿಬ್ಬರು ಯಾಕೋ ಪಿಸುಗುಟ್ಟಿದ್ದನ್ನು ಇದೇ ಮೊದಲ ಸಲ ಕೇಳಿಸಿಕೊಂಡವನು ಗಮನಿಸಿಯೂ ಗಮನಿಸಿದಂತೆ ತಲೆ ತಗ್ಗಿಸಿಕೊಂಡು ಹೋಗಿಬಿಟ್ಟ.
ಮನೆ ಬಿಟ್ಟು ಎಷ್ಟು ದೂರ ನಡೆದಿದ್ದನೋ ಅವನಿಗೇನೆ ಗೊತ್ತಾಗಲಿಲ್ಲ. ಹಾದಿಯಲ್ಲಿ ಎಷ್ಟು ಜನ ಬಂದರೂ, ಹೋದರೂ ಅದನ್ನು ಗಮನಿಸದೇ ಹೋಗುತ್ತಿದ್ದವನಿಗೆ ರಭಸವಾಗಿ ಹಿಂದಿನಿಂದ ಒಬ್ಬರು ಕೈಯಿಂದ ನೂಕಿದಾಗಲೇ ಗೊತ್ತಾಗಿದ್ದು ಸ್ವಲ್ಪದರಲ್ಲೇ ಪ್ರಾಣ ಉಳಿಯತೆಂದು. ಎದೆಯ ಮೇಲೆ ಕೈ ಇಟ್ಟು ಕ್ಷಣ ಸುಧಾರಿಸಿಕೊಂಡವನು ತನಗೇ ತಾನೇ ಬೈದುಕೊಂಡವನು ನಂತರ ಅವನವನೇ ನಗಾಡಿಕೊಂಡನು ಅಯ್ಯೋ, ಸಾಯಲೆಂದೇ ಕಾತರಿಸುವವನಿಗೆ ಜೀವ ಉಳಿಯತ್ತಲ್ಲ ಎಂದು ಯಾಕೆ ಖುಷಿಯಾಯಿತು ಎಂದು ಅಚ್ಚರಿಪಟ್ಟುಕೊಂಡನು.
ಥೂ ನನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ ಸಾಯ್ತೀನಿ, ಸಾಯ್ತೀನಿ ಅಂದ್ರೂ ಜೀವದ ಬಗ್ಗೆ ಇಷ್ಟೊಂದು ಭಯನಾ ಅಂದುಕೊಂಡವನು ಮತ್ತಷ್ಟು ರಭಸವಾಗಿ ಹೆಜ್ಜೆ ಹಾಕುತ್ತಿದ್ದರೂ ರಸ್ತೆಯ ತುದಿ ಅಂಚಿನಲ್ಲೇ ನಡೆಯುತ್ತಿದ್ದನ್ನೂ ಎಷ್ಟೊ ಹೊತ್ತಿನ ನಂತರ ಗಮನಿಸಿಕೊಂಡ.
ಸಾಯುವ ಕೊನೆ ಗಳಿಗೆಯ ಯೋಚನೆ, ನೆನಪು ಏನಿರುತ್ತದೆ ಎಂಬುದು ಅವನಿಗೆ ಹೈಸ್ಕೂಲಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇದಕ್ಕೆ, ಕೊನೆಗಾದರೂ ಉತ್ತರ ಸಿಗಬಹುದೇ ಎಂಬುದಕ್ಕೆ ಅವನು ಇನ್ನೇನು ಸಾವಿನ ಸನ್ನಿಹಕ್ಕೆ ಹೋಗಿ ಬಿಡುತ್ತೇನೆಂದರೂ ಸಿಕ್ಕಿರಲಿಲ್ಲ. ನೇಣಿಗೆ ಕೊರಳೊಡ್ಡುವ ಸಮಯದಲ್ಲಿ ಗೊತ್ತಾಗಬಹುದೇ ಎಂಬ ಗೊಂದಲದಲ್ಲೇ ಸಾವನ್ನು ಮುಂದಕ್ಕೆ ಹಾಕಿಕೊಂಡು ಬರುತ್ತಿದ್ದೇನೆಯೇ ಎಂದು ಅವನಿಗೆ ಅನ್ನಿಸಿಬಿಟ್ಟಿತ್ತು. ಸಾಯುವ ಮೂಲಕವೇ ತಾನು ಧೈರ್ಯ ತೋರಿಸಬೇಕೆಂಬ ಹುಚ್ಚುತನ ಬಿಟ್ಟು ಬದುಕುವ ಮೂಲಕ ಸವಾಲು ಗೆಲ್ಲಬೇಕು ಎಂಬ ಮಾತುಗಳನ್ನೇ ಮೂರು ದಿನಗಳಿಂದ ನೂರೆಂಟು ಸಲ ಹೇಳಿಕೊಂಡರೂ ಅದೇನು ಮನಸ್ಸಿನೊಳಗೆ ನಾಟಿದಂತೆ ತೋರುತ್ತಿಲ್ಲ. ಸಾಯಿಸುವುದೇ ಬದುಕುವುದಕ್ಕಿಂತ ಹೆಚ್ಚು ಧೈರ್ಯ ಶಾಲಿ ಕೆಲಸ ಎಂದು ಅವನಿಗೆ ಈಗ ಗೊತ್ತಾಗಿಬಿಟ್ಟಿದೆ. ಇದೇ ಚಿಂತನೆಯಲ್ಲಿ ಮನೆಗೆ ವಾಪಸ್ ಬಂದವನಿಗೆ ಮನೆಯ ಹೊಸ್ತಿಲು ಕಂಡು ತಲೆ ಚಿಟ್ಟಿಡಿದು ಹೋಯಿತು. ಸಾಕಪ್ಪ, ಸಾಕು ಎಂದು ತಲೆ ಅದುಮಿಕೊಂಡನು, ಈಗಲೇ ಭೂಮಿ ಕುಸಿಯಬಾರದೇ ಎಂದೆನಿಸಿತು ಅವನಿಗೆ.
ಸೀದಾ ಬಚ್ಚಲು ಮನೆಗೆ ಹೋದವನು ತಲೆಯ ಮೇಲೆ ನೀರು ಸುರಿದುಕೊಂಡು ಮೈ ಸೀಟಿಕೊಂಡು ಬಚ್ಚಲು ಮನೆಯಿಂದ ಈಚೆಗೆ ಬರುವಾಗ್ಗೆ ಸರಿಯಾಗಿ ಅವನ ತಾತನ ಪೋಟೋ ಕಂಡು ಮುಖ ಸಣ್ಣಗೆ ಮಾಡಿಕೊಂಡ. ಆದರೂ ನಾನು ಆತನ ದಾರಿಯನ್ನೇ ಹಿಡಿಯಬಹುದೆಂದು ಅವನು ಎಂದಿಗೂ ಅಂದೇ ಕೊಂಡಿರಲಿಲ್ಲ.
ಸುಕ್ಕುಗಟ್ಟಿದ, ಜರಡೆಯಂತೆ ತೂತು ತೂತಾಗಿದ್ದ ಮುಖದ ಅವನ ತಾತಾ ಅಂದರೆ ಒಬ್ಬ ನರಪೇತಲ. ಯಾವ್ದೋ ಕಾಲದಲ್ಲಿ ಮನೆ ಬಿಟ್ಟುಬಂದವನು ತನ್ನ ನೆಂಟರಿಷ್ಟರ ಮನೆಯ ನೀರೊಲೆ ಕಾಯಿಸುವ ಕೆಲಸ ಮಾಡಿಕೊಂಡಿದ್ದವ. ಮೊದಲೇ ಗಂಡು ಸಂತಾನ ಇಲ್ಲದ ಆ ಮನೆಯಲ್ಲಿ, ಆ ಮನೆಯ ತೋಟ, ಹೊಲದ ಗೇಮೆಯೂ ಇವನ ಮೇಲೆಯೇ ಬಿತ್ತು. ಊರು ಅನ್ನೋದ್ನ ಮರತೇ ಬಿಟ್ಟ ಈ ತಾತನಿಗೆ ನೆಂಟರ ಮನೆಯ ಹುಡುಗಿಯನ್ನೇ ಕೊಟ್ಟು ಮದುವೆ ಮಾಡಿದರು.
ಸುಂದರವಾಗಿಯೇ ಇದ್ದ ತಾತನಿಗೆ ಮದುವೆ, ಮಕ್ಕಳಾದ ಮೇಲೆ ಸಿಡುಬು ರೋಗಕ್ಕೆ ತುತ್ತಾಗಿ ಮುಖವೆಲ್ಲ ತೂತಾಗಿ ಜರಡಿಯಂತಾಗಿತ್ತು.
ಈ ತಾತಾ ಯಾವಾಗಲೂ ದನ ಮೇಯಿಸಿಕೊಂಡಿದ್ದೇ ಹೆಚ್ಚು. ಅವನಿಗೂ ನನಗೂ ವಿಶೇಷ ಬಂಧ. ಎಷ್ಟೇ ಆಗಲಿ ಮೊಮ್ಮಗನಲ್ಲವೇ. ತಾತ, ಒಮ್ಮೆ ಇಪ್ಪತ್ತೈದು ಪೈಸೆ ನೀಡಿದ ನೆನಪಾಯಿತು ಅವನಿಗೆ.
ಸದಾಕಾಲ ತಲೆಗೆ ಮಾಸಿದ ಟವೆಲ್ ಕಟ್ಟಿಕೊಂಡಿರುತ್ತಿದ್ದ ಅವನಿಗೆ ಬೀಡಿ ಎಂದರೆ ಪಂಚಪ್ರಾಣ ಜತೆಗೆ ಯಾವಾಗಲೂ ಟೀ ಇರಬೇಕು.
ಇಂಥವನು ನಮ್ಮೂರ ಬಾವಿಯಲ್ಲಿ ಹೆಣವಾಗಿ ತೇಲಿದ್ದು ಈಗ ಇತಿಹಾಸ. ತಾತ, ಸತ್ತಿದಾದ್ದಾರೂ ಏಕೆ! ನನ್ನ ಕಾರಣವೇ ಅವನಿಗೂ ಆಗ ಇದ್ದಿರಬಹುದೇ ಎಂದುಕೊಂಡವನು ಮತ್ತೊಮ್ಮೆ ದುಂಖದ ನಗು ನಕ್ಕನು.
ಸಾವು ಒಂದೇ ಆದರೂ ಕಾರಣವೂ ಒಂದೇ ಆಗಿರಬೇಕಿಲ್ಲ ಎಂದರೆ ಸರಿ ಅಲ್ಲ ಎಂದು ಅವನ ಮನಸ್ಸು ಹೇಳಿತು.
ನಿಜಕ್ಕೂ ಅವನಿಗೆ ಕಿರಿಕಿರಿಯಾಗತೊಡಗಿತು.ಸಾಯಲು ಇಷ್ಟೆಲ್ಲ ಚರ್ಚೆ ಬೇಕಾ ಅನಿಸಿತು. ಕಾರಣವೂ ಇಲ್ಲದೇ ಸಾಯಬಹುದಲ್ಲ ಎಂದು ಹೇಳಿಕೊಂಡನು.
ಚಿಂತೆಯಲ್ಲೇ ಮುಳುಗಿದ್ದವನಿಗೆ ಮನೆಯಲ್ಲಿ ತಡಬಡ ಸದ್ದಾಗಿದ್ದು ಗೊತ್ತಾಗಲೇ ಇಲ್ಲ. ಒಳಗಿನಿಂದ ಸೊಸೆಯ ಕಿರುಚಾಟ ಕೇಳುತ್ತಲೇ ಇತ್ತು. ನಿಮ್ಮಪ್ಪ ಮಿಂಡ್ರಿಗುಟ್ಟಿದವನ ಅನ್ನೋದನ್ನೇ ಅವಳು ಒತ್ತಿ ಒತ್ತಿ ಹೇಳುತ್ತಿದ್ದಳು. ಮಗ ಮಾತ್ರ ಮೌನವಾಗಿಯೇ ಕುಳಿತಿದ್ದ, ತುಟಿ ಎರಡು ಮಾಡದಂತೆ ಯಾಕಾಗಿ ಕುಳಿತಿದ್ದನೋ ? ಅವನನ್ನು, ಅವನ ಅವಸ್ಥೆಯನ್ನು ಕಂಡು ಎದೆಯೊಳಗೆ ಸಂಕಟದ ಸಮುದ್ರವೇ ಹಾದು ಹೋದಂತಾಯಿತು. ಪಾಪ! ಧೈರ್ಯ ಸಾಲದವನು. ನಾನೇಕೆ ಅವನನ್ನು ಧೈರ್ಯವಂತನಾಗಿ ಬೆಳೆಸಲಿಲ್ಲ. ಅವನು ಹೆದರುತ್ತಿರುವುದು ಹೆಂಡತಿಗೂ, ಜಗಳ ಜೋರಾದರೆ ಏನ್ ಗತಿ, ಪಕ್ಕದ ಮನೆಯವರು ಕೇಳಿಸಿಕೊಂಡರೆ ಸಮಾಜದಲ್ಲಿ ಮರ್ವಾದೆ ಹೋಗುತ್ತದೆ ಎಂಬ ಭಯಕ್ಕೂ, ಎಂದು ಅಂದಾಜಿಸಿಕೊಂಡವನು ಸೊಸೆಯ ವಾಕರಿಕೆಯ ಮಾತುಗಳಿಗೆ ಹೃದಯ ಚುಚ್ಚಿಬಂತು.
ವಯಸ್ಸಾದ ಹಸುಗಳನ್ನು ಮಾರುವಂತೆ ಮನುಷ್ಯರನ್ನು ಮಾರುವಂತಿದ್ದರೆ ಅದೇ ಚೆನ್ನಾಗಿರುತಿತ್ತು ಎಂದು ಮನಸ್ಸು ಹೇಳುವಷ್ಟರಲ್ಲಿ ಎರಡು ಹನಿ ಕಣ್ಣೀರು ಸುರಿದುಹೋಯಿತು. ಅಡುಗೆ ಮನೆಯಿಂದ ಈಚೆ ಬಂದ ಮಗ ಸೀದಾ ರೂಮಿನೊಳಗೆ ಹೋಗಿ ಕುಳಿತು. ಸೊಸೆಯ ದನಿ ಇನ್ನೂ ಜೋರಾಯಿತು. ಮನೆಯ ನಾಯಿಗೆ ಊಟ ಹಾಕೊಂಡಿದ್ದೀವಿ ಎಂದು ಸಾಕ್ತಾ ಇದ್ದೀನಿ ಎಂದು ಮತ್ತೆರಡು ಸಲ ಜೋರಾಗಿಯೇ ಹೇಳಿದಳು ಅದು ನನಗೆ ಕೇಳಿಸಲೆಂದೇ ಎಂಬುದನ್ನು ಅವನಿಗೆ ಯಾರು ಹೇಳಬೇಕಿರಲಿಲ್ಲ.
ಪಕ್ಕದ ಮನೆಯ ರಾಚಯ್ಯ ದುಡೀತಿಲ್ವೆ, ಬೆಳಿಗ್ಗೆ ಎದ್ರೆ ಮನೆಯಲ್ಲೇ ಕೂತಿರುತ್ತಾನೆ ಎಂದು ಮಾತುಗಳು ಏಕವಚನಕ್ಕೆ ಇಳಿದವು. ಇಂತ ಬೈಗುಳ ಹೊಸದೇನಲ್ಲ ಅಂದುಕೊಂಡವ ಹರಿದ ಎಕ್ಕಡ ಮೆಟ್ಟಿಕೊಂಡು ನಿಧಾನವಾಗಿ ಆಚೆ ಸರಿದುಕೊಂಡ.
ಸುಮ್ಮನೇ ನಡೆದೇ ಹೋಗುತ್ತಿದ್ದವನಿಗೇ ಮರದ ನೆರಳು ಕಂಡು ಕೂತ.ಯಾರೇರೋ ಪರಿಚಯದವರು ಸಿಕ್ಕರೆ ಕಷ್ಟ ಎಂದು ಮರೆಗೆ ಸರಿದು ಕೂತಚನ ಕಣ್ಣಲ್ಲಿನೀರು ಹರಿದು ಹೋಯಿತು. ಮತ್ತೇ ಅವನಿಗೆ ತಾಯ ನೆನಪಾದ. ನಾನು, ತಾತನಿಗಿಂತ ಪುಕ್ಕಲೇ ಎಂದುಕೊಂಡ.
ತಾತ, ತಾನೇ ಕಟ್ಟಿಸಿದ ತೋಟದ ಬಾವಿಗೆ ಬಿದ್ದು ಸಾಯುವುದಕ್ಕೆ ಮುನ್ನ ವಾರದ ಕೆಳಗೆ ಎಮ್ಮೆಗಳನ್ನು ಮೇಯಿಸುವಾಗ ಹೇಳಿದ ಮಾತುಗಳು ನೆನಪಿಗೆ ಬಂದವು. ನೋಡು, ಯಾರನ್ನೂ ನಂಬಬೇಡ. ಕೊನೆಯಲ್ಲಿ ಯಾರೂ ಆಗುವುದಿಲ್ಲ. ನಿನ್ನ ಬುದ್ದಿ ನಿನ್ನ ಕೈಯಲ್ಲಿ ಇಟ್ಟಿಕೋ. ನಿನಗೆ ಕೊಡಲು ನನ್ನತ್ರ ಈ ಮಾತುಗಳನ್ನು ಬಿಟ್ಟರೆ ಬೇರೇನು ಇಲ್ಲ ಅಂದಿತ್ತು. ಆಗಿನ್ನೂ, ಹೈಸ್ಕೂಲ್ ಓದುತ್ತಿದ್ದ ನನಗೆ ಆತನ ಮಾತಿಗಿಂತಲೂ ಹತ್ತು ಪೈಸೆಯಾದರೂ ಕೊಡು ತಾತಾ ಎಂದು ಅವರ ಎದುರು ಕೈ ಚಾಚಿದ್ದು, ಅವರ ಮುಖ ತಿರುಗಿಸಿ ಅತ್ತಿದ್ದು ಯಾಕೆಂಬುದನ್ನು ಅರ್ಥ ಮಾಡಿಕೊಳ್ಳಲು ಇಷ್ಟು ದಿನ ಬೇಕಾಯಿತೇ ಅನಿಸಿತು.
ಒಂದು ಲೋಟ ಟೀ ಗಾಗಿ ಪರಿತಪಿಸುತ್ತಿದ್ದ ತಾತ, ಬಟ್ಟರ ಅಂಗಡಿಯಲ್ಲಿ ಟೀ ಕುಡಿದು ಮಾಡಿದಸಾಲ ತೀರಿಸಲು ಒಂದು ಸಣ್ಣದಾದ ಬಾಳೆಗೊನೆ ಕಡಿದು ಮಾರಿದ್ದು ಮನೆಯಲ್ಲಿ ರಂಪಾಟ ಆಗಲು ಕಾರಣ ಎಂದು ಸಣ್ಣವನಿದ್ದಾಗ ಗೊತ್ತಿತ್ತು.
ಇದಾದ ಬಳಿಕ ತಾತ, ಯಾಕೋ ಮಂಕಾಗಿ ಬರ ತೊಡಗಿದ. ಅವ, ಬೀಡಿ ಸೇದುವುದನ್ನು ಕಡಿಮೆ ಮಾಡಿದ. ಎಮ್ಮೆ ಮೇಯಿಸಲು ಮಾತ್ರ ಬರುತ್ತಿದ್ದ. ನನ್ನೊಂದಿಗೆ ಮಾತ್ರ ಮಾತನಾಡುತ್ತಿದ್ದ, ಏನೇನ್ ಮಾತನಾಡಿದನೊ, ಏನೇನ್ ಹೇಳಿಕೊಂಡನೋ.
ಒಂದಿನ ಬೆಳ್ಳಂಬೆಳಿಗ್ಗೆ ಕಟ್ಟೆಯ ಏರಿಯ ಕಡೆಯಿಂದ ಯಾರೋ ಕೂಗು ಹಾಕಿದ್ದು ಕೇಳಿಸಿತು. ಊರೋರು ಎಲ್ಲ ತಡಬಡಿಸಿ ಓಡಿ ನೋಡಿದರೆ ಬಾವಿಯ ಬಂದು ಕಲ್ಲಿನ ಮೇಲೆ ಅಪ್ಪನ ಮಾಸಲು ಟವೆಲ್ ಎಲ್ಲವನ್ನೂ ಹೇಳುತ್ತಿತ್ತು. ಆ ಕೊರೆಯುವ ಚಳಿಯಲ್ಲಿ.
ಬೀಳ್ತಿದಂಗೆ ಪ್ರಾಣ ಹೋಗ್ ಬಿಟೈತೆ. ಮೇಲಿಂದ ಬಿದ್ದಿಲ್ಲ. ಮೆಟ್ಟಿಲ ಇಳಿದು ಕೊನೆ ಮೆಟ್ಟಿಲ ಮೇಲೆ ಟವಲ್ಇಟ್ಟೇ ಬಿದ್ದೋನೆ. ಆದರೂ ಹೆಣ ನೆಲ ಕಚ್ಕೊಂಡಿತ್ತು ಅನ್ನುವ ಮಾತುಗಳು, ಏನೇನೊ ಲೆಕ್ಕಾಚಾರಗಳು ಮಾರ್ದನಿ ಆಡಿತು. ನನ್ನಮ್ಮ, ನನ್ನಪ್ಪನ ಅಳು ಮಾತ್ರ ಮೋಡಮುಟ್ಟಿತು. ಅವನಿಗೇನು ಕಡಿಮೆ ಮಾಡಿದ್ದೋ ಅಂತ ಹಿಂಗ್ ಮಾಡ್ಕಂಡ. ನಮಗೆ ಕೆಟ್ಟ ಹೆಸರು ತಂದ್ಬಿಟ್ಟ. ಗೂರಲು ಇತ್ತು. ಸಂಕಟ ಪಡ್ತಿದ್ದ. ಆದರೆ ಗೂರಲಿಗೆ ಹೆದರಿ ಹಿಂಗ್ ಮಾಡ್ಕಂತನೇ ಅಂತ ಗೊತ್ತಿದ್ದರೆ ಬಾವಿ ಹತ್ತಿರಕ್ಕೇನೆ ಕಳುಸುತ್ತಿರಲಿಲ್ಲ ಎಂಬ ಮಾತುಗಳು ಕಿವಿಯಲ್ಲಿ ಕೇಳಿದಂತಾದವು. ತಾತ ಯಾಕ್ ಅಂಗ ಮಾಡ್ದ. ಬಾವಿಯ ಮೆಟ್ಟಿಲು ಮೇಲೆ ಟವಲ್ ಕಳಚಿ ಇಡುವಾಗ ಅವನು ಯಾರನ್ನು ನೆನದಿರಬಹುದು. ಯಾರಿಗೆ ಶಾಪ ಹಾಕಿರಬಹುದು.ಯಾರಿಗೆ ಒಳ್ಳೆಯದಾಗಲಿ ಎಂದು ಬಯಸಿರಬಹುದು. ನಾನೇ ಅವನಿಗೆ ಹೆಚ್ಚು ಪ್ರೀತಿಯ ಮೊಮ್ಮಗ. ನನ್ನ ಹೆಸರನ್ನು ನೆನದಿರಬಹುದಾ ಎಂಬ ಪ್ರಶ್ನೆಗಳಿಗೆ ಈ ದಿನದವರೆಗೂ ಉತ್ತರ ಹುಡುಕುತ್ತಿರುವ ಮನಸ್ಸಿಗೆ ಅವನು ಏನನ್ನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ತಾತನೇ ಪದೇ ಪದೇ ಕರೆದಂತಾಗಿ, ನೆನಪಿಗೆ ಬಂದಂತಾಗಿ ತಲೆ ಹಿಡಿದುಕೊಂಡು ಚೀರಾಡಿದ.