ಶಿರಾ : ರಾಜ್ಯ ಸರ್ಕಾರಿ ಬಸ್ ನ ಚಾಲಕನೋರ್ವ ಕೆರೆಯಲ್ಲಿ ಬಸ್ ಚಾಲನೆ ಮಾಡುವಾಗ ರಸ್ತೆ ಪಕ್ಕದ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿ ಸಾಹಸ ಮೆರೆದಿರುವ ಘಟನೆ ಶಿರಾ ತಾಲೂಕು ಹಂದಿಕುಂಟೆ ಅಗ್ರಹಾರದಲ್ಲಿ ನಡೆದಿದೆ.
ಕೆಎಸ್ಆರ್ಟಿಸಿ ಶಿರಾ ಘಟಕದ ಬಸ್ ಚಾಲಕ ಮಂಜುನಾಥ್ ಶಿರಾದಿಂದ ನಾಗಪ್ಪನಹಳ್ಳಿ ಗೇಟ್ ಮಾರ್ಗವಾಗಿ ಬರುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಬಸ್ ಚಾಲಕ ತಮ್ಮ ಜೀವದ ಹಂಗನ್ನು ತೊರೆದು ಕೆರೆಗೆ ಧುಮುಕಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಶಿರಾ ತಾಲೂಕು ಕಾಮಗೊಂಡನಹಳ್ಳಿಯ ಇವರು,
ಭಾನುವಾರ ಮದ್ಯಾಹ್ನ ಬರಗೂರು ಕಡೆಗೆ ಹೋಗುವಾಗ ಇದ್ದಕಿದ್ದಹಾಗೆ ಮಹಿಳೆಯೊಬ್ಬಳು ಬಸ್ ಗೆ ಅಡ್ಡಲಾಗಿ ಬಂದು ಕೂಗಿಕೊಂಡು, ನನ್ನ ಮಕ್ಕಳಿಬ್ಬರು ಕೆರೆಯಲ್ಲಿ ಬಿದ್ದು ಮುಳುಗಿದ್ದಾರೆ ರಕ್ಷಿಸಿ ಎಂದು ಕೂಗಿಕೊಂಡಾಗ ತಕ್ಷಣವೇ ಮಂಜುನಾಥ್ ಬಸ್ ನಿಲ್ಲಿಸಿ ಮುಳುಗಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಪಬ್ಲಿಕ್ ಸ್ಟೋರಿ ಯೊಂದಿಗೆ ಮಾತಾಡಿದ ಚಾಲಕ ಮಂಜುನಾಥ್, ತಾಯಿ ಕೂಗಿಕೊಂಡಾಗ ನನಗೆ ಮಕ್ಕಳನ್ನು ರಕ್ಷಿಸಬೇಕೆಂಬುದು ಬಿಟ್ಟು ಬೇರೆ ಏನು ಕಾಣಲಿಲ್ಲ. ಹಿಂದೆಮುಂದೆ ನೋಡದೆ ಕೆರೆಗೆ ಜಿಗಿದು ಮುಳುಗಿ ನೀರು ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಮಕ್ಕಳನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸೆ ಮಾಡಿ ಬದುಕಿಸಿದೆ. ಇನ್ನೊಂದು ನಿಮಿಷ ತಡವಾಗಿದ್ದರೂ ಇಬ್ಬರೂ ಬದುಕುತ್ತಿರಲಿಲ್ಲ ಎಂದರು.
ಇಂಥ ಅವಕಾಶ ಸಿಕ್ಕಿದ ನಾನೆ ಧನ್ಯ ಎಂದು ಹೆಮ್ಮೆಯಿಂದ ಹೇಳಿದ ಅವರು, ಸುಮಾರು 5 ವರ್ಷದಿಂದ ಇದೇ ಮಾರ್ಗದಲ್ಲಿ ಬಸ್ ಚಾಲಕನಾಗಿರುವ ನಾನು ಈ ಭಾಗದ ಪ್ರಯಾಣಿಕರು ತೋರುವ ಪ್ರೀತಿಗೆ ಋಣಿಯಾಗಿದ್ದೇನೆ.
ಎಷ್ಟೋ ಸಲ ಬಸ್ ಛಾರ್ಜು ಇಲ್ಲದ ಗ್ರಾಮೀಣ ಪ್ರಯಾಣಿಕರಿಗೆ ನಾನೇ ಸ್ವತಃ ಹಣ ನೀಡಿ ಕರೆದೊಯ್ದಿದ್ದೇನೆ ಎಂದು ನೆನಪಿಸಿಕೊಂಡರು.
ಕರ್ತವ್ಯದ ಸಮಯದಲ್ಲೂ ಸಮಯೋಚಿತ ಕಾರ್ಯದಿಂದ ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಚಾಲಕನ ಈ ಸಾಹಸಕ್ಕೆ ವ್ಯವಸ್ಥಾಪಕ ನಿರ್ದೇಶಕರು ಮನತುಂಬಿ ಹಾರೈಸಿ, ಇವರ ಮಾದರಿ ಕಾರ್ಯ ಅನನ್ಯವೆಂದು ಬಣ್ಣಿಸಿದ್ದಾರೆ.
ನಮ್ಮ ಸಿಬ್ಬಂದಿಗಳ ಈ ಕಾರ್ಯತತ್ಪರತೆ ಸಂಸ್ಥೆಗೆ ಹೆಮ್ಮೆ ಮತ್ತು ಗೌರವ ತಂದು ಕೊಟ್ಟಿದೆ. ಇಂತಹ ಸಿಬ್ಬಂದಿಗಳೇ ನಮ್ಮ ಆಸ್ತಿ ಎಂದು ವ್ಯವಸ್ಥಾಪಕ ನಿರ್ದೇಶಕ ಅಭಿನಂದಿಸಿದ್ದಾರೆ.