ತುರುವೇಕೆರೆ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಯಲ್ಲಿ ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ವಿರುದ್ದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ತುರುವೇಕೆರೆ ತಾಲ್ಲೂಕು ವೀರಶೈವ ಲಿಂಗಾಯತ ಕಾಂಗ್ರೆಸ್ ಸಮಾವೇಶವನ್ನು ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಾರ್ಚ್ 31ರಂದು ಹಮ್ಮಿಕೊಳ್ಳಲಾಗಿತ್ತು.
ಈ ವಿಚಾರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಅವರು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಸಮಾವೇಶ ನಡೆಸಲು ಅನುಮತಿಯನ್ನು ಪಡೆದುಕೊಂಡಿದ್ದು ಸರಿಯಷ್ಟೇ ಆದರೆ ವೇದಿಕೆಯ ಹಿಂದಿನ ಫ್ಲೆಕ್ಸ್‍ನಲ್ಲಿ ಬಳಸಿರುವ ‘ವೀರಶೈವ ಲಿಂಗಾಯತ ಕಾಂಗ್ರೆಸ್ ಸಮಾವೇಶ’ ಎಂದು ಹಾಕಿರುವುದು ನೀತಿ ಸಂಹಿತೆಯ ಕಾಲಾವಧಿಯಲ್ಲಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇದಕ್ಕೆ ಕಾರಣರಾದವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಫ್ಲೈಯಿಂಗ್ ಸ್ವ್ಕಾಡ್ ಚುನಾವಣಾಧಿಕಾರಿ ಪ್ರಭಾಕರ್ ಪಟ್ಟಣದ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ತಿಪಟೂರು ಮಾಜಿ ಶಾಸಕ ಕೆ.ಷಡಕ್ಷರಿ, ಹಾಗು ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜ್ ಪಾಲ್ಗೊಂಡಿದ್ದರು.