ಚಿಕ್ಕನಾಯಕನಹಳ್ಳಿ : ಕರ್ನಾಟಕ ಪೌರಸಭೆಗಳ ಅಧಿನಿಯಮ(1964)ದಂತೆ ಪಟ್ಟಣದ ಪುರಸಭೆಗೆ ನೂತನವಾಗಿ ಐದು ಮಂದಿ ಸದಸ್ಯರನ್ನು ನಾಮ-ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ಅವರಲ್ಲಿ, ಧರ್ಮಾವರ ಬೀದಿಯ ರಘುಪತಿ ಬಿನ್ ಲಕ್ಷ್ಮಣಪ್ಪ, ಮಹಾಲಕ್ಷ್ಮಿ ಬಡಾವಣೆಯ ಸುಗಂಧರಾಜು ಬಿನ್ ಸಿ ಎಮ್ ಸಿದ್ಧಪ್ಪ, ಹೊಸಬೀದಿಯ ಸಿ ಜಿ ಚಂದ್ರಶೇಖರಯ್ಯ ಬಿನ್ ಗಂಗಾಧರಪ್ಪ, ಅಂಬೇಡ್ಕರ್ ನಗರದ ಶ್ರೀಮತಿ ಕೆಂಪಮ್ಮ ಕೋಂ ಶಿವಕುಮಾರ ಹಾಗೂ ಕುರುಬರಹಳ್ಳಿ ರಸ್ತೆಯ ಮಹಮ್ಮದ್ ಹುಸೇನ್ ಬಿನ್ ಪ್ಯಾರೇಜಾನ್ ರವರು ನೂತನವಾಗಿ ಚಿಕ್ಕನಾಯಕನಹಳ್ಳಿ ಪುರಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯರು.
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯಾದ ಟಿ.ಮಂಜುನಾಥ್’ರವರು ಈ ಐವರನ್ನು ನಾಮ-ನಿರ್ದೇಶನಗೊಳಿಸಿರುವ ಆದೇಶ ಹೊರಡಿಸಿದ್ದಾರೆ.
ಕಸಮುಕ್ತ ಚಿ ನಾ ಹಳ್ಳಿ ::
ನಾಮ-ನಿರ್ದೇಶನಗೊಂಡ ಆದೇಶ ಕೈ-ತಲುಪಿದ ನಂತರ ಮಾತನಾಡಿದ ನೂತನ ಸದಸ್ಯ ಮಹಮ್ಮದ್ ಹುಸೇನ್, ಕರ್ನಾಟಕದ ಸಾಕಷ್ಟು ಕಡೆ ಪುರಸಭೆಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವ ನಿರೀಕ್ಷೆಗಳು ಕಾಣುತ್ತಿವೆ. ನಮ್ಮಲ್ಲೂ ಅಂತಹ ಆಧುನಿಕ ಮತ್ತು ವೈಜ್ಞಾನಿಕ ಮಾದರಿಯ ಕ್ರಮಗಳನ್ನು ಅನುಸರಿಸಲು ಆರಂಭಿಸಬೇಕಿದೆ.
ಪಟ್ಟಣದ ತ್ಯಾಜ್ಯವನ್ನು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಉಪಯುಕ್ತ ಗೊಬ್ಬರವಾಗಿ ಪರಿವರ್ತಿಸುವ ಆಧುನಿಕ ವಿಧಾನಗಳನ್ನು ನಮ್ಮಲ್ಲೂ ಅನುಷ್ಠಾನಗೊಳಿಸಬೇಕಿದೆ.
ತ್ಯಾಜ್ಯದಿಂದ ತಯಾರಾದ ಗೊಬ್ಬರವನ್ನು ಪುರಸಭೆಯ ವತಿಯಿಂದಲೇ ರೈತರಿಗೆ ಮಾರಾಟ ಮಾಡುವ ಸುಗಮವಾದ ಯೋಜನೆಯನ್ನು ರೂಪಿಸಿಕೊಂಡು, ಪರಿಸರ ಸ್ನೇಹಿ ಹಾಗೂ ಲಾಭದಾಯಕ ಮಾದರಿಯ ತ್ಯಾಜ್ಯ ನಿರ್ವಹಣೆಯನ್ನು ರೂಢಿಗೊಳಿಸಬೇಕು. ಒಟ್ಟಾರೆ, ಚಿಕ್ಕನಾಯಕನಹಳ್ಳಿ ಪಟ್ಟಣವನ್ನು ಕಸಮುಕ್ತ, ತ್ಯಾಜ್ಯಮುಕ್ತ ಪಟ್ಟಣವನ್ನಾಗಿ ರೂಪಿಸುವುದು ನಮ್ಮ ಮೊದಲ ಗುರಿ ಎಂದು ನೂತನವಾಗಿ ನಾಮ-ನಿರ್ದೇಶನಗೊಂಡ ಸದಸ್ಯರ ಪರವಾಗಿ ಮಹಮ್ಮದ್ ಹುಸೇನ್ ತಿಳಿಸಿದರು.
__ಸಂಚಲನ
ಚಿಕ್ಕನಾಯಕನ ಸೀಮೆಯಿಂದ