ತುರುವೇಕೆರೆ: ರಾಜ್ಯ ಬಿಜೆಪಿಗೆ 40ರ ನಂಬರ್ ಮೇಲೆ ಬಹಳ ಪ್ರೀತಿ ಇದ್ದು, ಅವರಿಗೆ ಈ ಬಾರಿ ಕೇವಲ 40 ಸೀಟುಗಳನ್ನು ನೀಡಿ. ಭ್ರಷ್ಟಾಚಾರ ಹಣದಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬರದಂತೆ ಮಾಡಲು ರಾಜ್ಯದ ಜನತೆ ಕಾಂಗೆಸ್‍ಗೆ 150 ಸ್ಥಾನ ನೀಡಿ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಪರ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯಿಗೆ ಉಚಿತವಾಗಿ ಬಸ್ ಸೌಲಭ್ಯ ನೀಡಲಾಗುವುದು. ಪ್ರತಿಯೊಬ್ಬ ಮಹಿಳೆಯರ ಖಾತೆಗೆ 2 ಸಾವಿರ ಹಣ ಜಮೆ ಮಾಡುವುದು, ಯುವಕರಿಗೆ ಯುವ ನಿಧಿ ಸೇರಿದಂತೆ 5 ಭರವಸೆಗಳನ್ನು ಈಡೇರಿಸುವ ಆಸ್ಥೆ ತೋರಿದರು.
ಮೇ10 ರಂದು ನಡೆಯುವ ಚುನಾವಣೆ ಯಾವುದೋ ವ್ಯಕ್ತಿಗಾಗಿ ಅಥವಾ ನರೇಂದ್ರ ಮೋದಿಗಾಗಿ ನಡೆಯುವ ಚುನಾವಣೆಯಲ್ಲ. ಅದು ಈ ರಾಜ್ಯದ ಸಮಸ್ತ ಯುವಕರ, ಹೆಣ್ಣು ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.
ಕಳೆದ ಬಾರಿ ರಾಜ್ಯದ ಜನತೆ ಬಿಜೆಪಿಗೆ ವೋಟ್ ಕೊಟ್ಟಿಲ್ಲ ಆದರೂ ಅವರು ನಮ್ಮ ಶಾಸಕರುಗಳಿಗೆ ದುಡ್ಡುಕೊಟ್ಟು ಅವರನ್ನು ಖರೀದಿ ಮಾಡಿ, ಲೋಕ ತಂತ್ರವನ್ನು ಹಾಳು ಮಾಡಿ ಸರ್ಕಾರ ಮಾಡಿದರು ಎಂದು ದೂರಿದರು.
ಈಗಿನ ಸರ್ಕಾರ ಕೆಲಸ ಶಿಕ್ಷಣ, ಆರೋಗ್ಯ ಮತ್ತು ರಸ್ತೆ ನಿರ್ಮಾಣ ಮಾಡುವುದರಲ್ಲಿ ಹಣವನ್ನು ತೊಡಗಿಸಬೇಕಿತ್ತು ಆದರೆ ಇಂತಹ ಕೆಲಸಗಳಿಗೆ ಹಣ ಹಾಕಲಿಲ್ಲ ಬದಲಾಗಿ, ರೈತರು, ಕೂಲಿಕಾರ್ಮಿಕರು, ಬಡವರ ಜೇಬಿನಿಂದ ಅವರ ಹಣವನ್ನು ಕಸಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಗುತ್ತಿಗೆದಾರ ಸಂಘದವರು ಕಾಮಗಾರಿ ಗಳಿಗೆ 40 ಪರ್ಸೆಂಟ್ ಲಂಚ ಕೇಳುತ್ತಿದ್ದಾ ರೆಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಪ್ರಧಾನಿಗಳಿಂದ ಯಾವುದೇ ಉತ್ತರವಿಲ್ಲವೆಂದು ಚೇಡಿಸಿದರು.
ಪೊಲೀಸ್, ಪೊಫೆಸರ್, ಎಂಜಿನಿಯರ್, ಸಹಕಾರ ಸಂಘಗಗಳ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಿದೆ. ಬಿಜೆಪಿ ಶಾಸಕರೊಬ್ಬರೇ ಹೇಳುವಂತೆ ಎರಡುವರೆ ಸಾವಿರ ಕೋಟಿ ಹಣ ಕೊಟ್ಟು ಸಿ.ಎಂ ಆಗಿದ್ದಾರೆ. ರಾಜ್ಯದ ಪ್ರತಿಯೊಬ್ಬ ಮಗುವಿಗೂ ಈ ವಿಚಾರ ಗೊತ್ತಿದೆ ಅಂದ ಮೇಲೆ ಪ್ರಧಾನ ಮಂತ್ರಿಗೆ ಗೊತ್ತಿಲ್ಲದೆ ಇರುತ್ತದೆಯೇ ಎಂದು ಪ್ರಶ್ನಿಸಿದರು.
ನಾನು ಪ್ರಧಾನ ಮಂತ್ರಿಗಳನ್ನು ಕೇಳ ಬಯಸುತ್ತೇನೆ ಇಷ್ಟೆಲ್ಲಾ ಅನ್ಯಾಯ ಆಗುತಿದ್ದರೂ ನೀವು ಇಂತಹ ಲೂಟಿ ನಿಲ್ಲಿಸಲು ಏನು ಪ್ರಯತ್ನ ಮಾಡಿದ್ದೀರಾ? ಉತ್ತರಿಸಿ ಎಂದರು.
ನೀವು ಕರ್ನಾಟಕಕ್ಕೆ ಬಂದು ವೋಟ್ ಕೇಳುವುದಕ್ಕೆ ಮುಂಚೆ ಈ ದೇಶದ ಪ್ರಧಾನಿಗಳಾದ ನೀವು ರಾಜ್ಯದ ಭ್ರಷ್ಟಾಚಾರ ನಿಲ್ಲಿಸಲು ಏನು ಮಾಡಿದ್ದೀರಿ ಅಂತ ಜನರಿಗೆ ಹೇಳಿ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ವರಿಷ್ಟರು, ನಾಯಕರು ಕರ್ನಾಟಕಕ್ಕೆ ಬಂದಾಗ ಇಲ್ಲಿನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಏನೇನು ಕೊಡುಗೆ ನೀಡಿದ್ದಾರೆ ಎಂದು ಮಾತನಾಡುತ್ತೇವೆ. ಆದರೆ ಬಿಜೆಪಿಯ ಕೇಂದ್ರ ನಾಯಕರು ಇಲ್ಲಿಗೆ ಬಂದಾಗ ತಮ್ಮದೇ ಪಕ್ಷದ ಮುಖ್ಯ ಮಂತ್ರಿ ಹೆಸರೇಳಲ್ಲ ಕೊನೆ ಪಕ್ಷ ಬಿ.ಎಸ್.ಯಡಿಯೂರಪ್ಪ ಸಾಧನೆಯನ್ನೂ ಹೇಳಲ್ಲ. ನೀವು ಕೇವಲ ಪ್ರಧಾನಿಗಳ ಬಗ್ಗೆ ಮಾತ್ರ ಭಾಷಣ ಬಿಗಿತಿರಿ ಎಂದು ತಿರುಗೇಟು ನೀಡಿದರು.
ಆ ಎಲ್ಲಾ ಹಣವನ್ನು ಕಾಂಗ್ರೆಸ್ ಮರಳಿ ನಿಮ್ಮ ಕಿಸೆಗೆ ತುಂಬಿಸುವ ಕೆಲಸ ಮಾಡುತ್ತದೆ. ಬಿಜೆಪಿ ಸರ್ಕಾರ ಒಂದು ಕಡೆ ಭ್ರಷ್ಟಾಚಾರ ಮಾಡಿ, ಇನ್ನೊಂಡು ಕಡೆ ಬೆಲೆ ಏರಿಕೆ ಮಾಡಿದರು. ಪ್ರಧಾನಿಗಳು ಸ್ನೇಹಿತರಿಗೆ ಸಹಾಯ ಮಾಡುವುದ ಕ್ಕೋಸ್ಕರ ಇಡೀ ದೇಶದಲ್ಲಿ ಬೆಲೆ ಏರಿಕೆ ಮಾಡಿದರೆಂದು ಪರೋಕ್ಷವಾಗಿ ಅದಾನಿ ಕುರಿತು ಹೇಳಿದರು.
ಬಿಜೆಪಿ ಸರ್ಕಾರ ಶಾಲಾ ಕಾಲೇಕು, ಯುನಿವರ್ಸಿಟಿಗಳನ್ನು ಖಾಸಗೀಕರಣ ಮಾಡಿದೆ. ನರೇಂದ್ರಮೋದಿ ನೋಟ್ ಬ್ಯಾನ್ ಮಾಡಿ, ಜಿಎಸ್ಟಿ ಹೆಚ್ಚಳ ಮಾಡಿದ್ದರಿಂದ ಈ ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದರು.
ಇದ್ದಕ್ಕೂ ಮೊದಲು ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದು ಪಟ್ಟಣದ ಜಿಜೆಸಿ ಕ್ರೀಡಾಂಗಣದಲ್ಲಿ ಇಳಿದು ಅಲ್ಲಿಂದ ವೇದಿಕೆ ಕಾರ್ಯಕ್ರಮದ ವರೆಗೆ ವಾಹನದಲ್ಲಿ ತೆರಳಿದರು.
ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ಸರಿಯಾಗಿ ಅಲ್ಲಾ ಕೂಗಿದರಿಂದ ಸು 3 ನಿಮಿಷ ಭಾಷಣ ನಿಲ್ಲಿಸಿ ಮೌನವಾದರು.
ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಬದಲಾಯಿಸುತ್ತೇವೆ ಎಂದವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಸ್ ರಾಜ್ಯದಲ್ಲಿ 113 ಸ್ಥಾನಗಳೂ ಬರೋದಿಲ್ಲ ಹಾಗಾಗಿ ಜೆಡಿಎಸ್ಗೆ ಮತ ಹಾಕ ಬೇಡಿ. ಈ ಬಾರಿ ನನಗೆ ಮತನೀಡಿ ತಾಲ್ಲೂಕಿನ ಅಭಿವೃದ್ದಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖಂಡರುಗಳಾದ ರಾಯಸಂದ್ರ ರವಿಕುಮಾರ್, ಎನ್.ಆರ್.ಜಯರಾಮ್, ಗೀತಾರಾಜಣ್ಣ, ಬಿ.ಎಸ್.ವಂಸತ್ ಕುಮಾರ್, ಶ್ರೀಕಂಠೇಗೌಡ, ಗೋಣಿತುಮಕೂರು ಲಕ್ಷ್ಮೀಕಾಂತ್, ನಾಗೇಶ್, ಪ್ರಸನ್ನಕುಮಾರ್, ಜೋಗಿಪಾಳ್ಯ ಶಿವರಾಜ್, ಶ್ರೀನಿವಾಸ್,ಶಶಿಶೇಖರ್ ಇನ್ನಿತರರು ಉಪಸ್ಥಿತರಿದ್ದರು.