ಗುಬ್ಬಿ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೇಮಾವತಿ ನಾಲೆ ಕುಸಿದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 206ನ್ನು ಸೀಳಿಕೊಂಡು ಹೋಗುವ ನಾಲೆಯ ರಸ್ತೆಬದಿಯಲ್ಲೇ ಮಣ್ಣು ಕುಸಿದು ಆತಂಕ ಮೂಡಿಸಿದೆ. ಹೀಗಾಗಿ ಕೂಡಲೇ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಅಪಾಯ ಎದುರಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಸಮೀಪ ಈ ನಾಲೆ ಕುಸಿದಿದೆ. ಸೇತುವೆಗೆ ಹೊಂದಿಕೊಂಡಂತೆ ಇರುವ ನಾಲೆಯ ಎರಡೂ ಬದಿ ಕುಸಿದು ಜನರ ಆತಂಕಕ್ಕೆ ಕಾರಣವಾಗಿದೆ. ಸ್ವಲ್ಪ ಹೆಚ್ಚಿಗೆ ಮಳೆ ಸುರಿದ್ದರೆ ಇಡೀ ಸೇತುವೆ ಬಿದ್ದು ಹೋಗಿ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಜನರು ಮಣ್ಣು ಕುಸಿದಿರುವುದನ್ನು ವೀಕ್ಷಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ. ಸಾವಿರಾರು ವಾಹನಗಳ ಸಂಚಾರದ ಹಿನ್ನೆಲೆಯಲ್ಲಿ ಮಣ್ಣು ಕುಸಿದಿರುವುದನ್ನು ರಿಪೇರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.