ತುರುವೇಕೆರೆ:
ಜಿಲ್ಲಾ ಆಡಳಿತ ಹಾಗು ಜಿಲ್ಲಾ ಪಂಚಾಯಿತ್ ತುಮಕೂರು ವತಿಯಿಂದ ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಅಡಿಷನಲ್ ಡೆಫ್ಯೂಟಿ ಕಮಿಷನರ್ ಶಿವಾನಂದಕರಾಳೆ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
ಇದಕ್ಕೂ ಮುನ್ನ ಶಾಸಕ ಎಂ,ಟಿ.ಕೃಷ್ಣಪ್ಪ ಮಾತನಾಡಿ, ರೈತರು ತಮ್ಮ ಭೂದಾಖಲೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿ ಎಡತಾಕಿ ಹತಾಶರಾಗಿದ್ದಾರೆ. ಹಾಗಾಗಿ ಇಂದಿನ ಕಾರ್ಯಕ್ರಮದಿಂದ ಕೊಂಚ ನಿಟ್ಟುಸಿರುಬಿಡುವಂತಾಗಿದೆ ಎಂದರು.
ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರೆಲ್ಲ ಸ್ವಲ್ಪ ಮೈಚಳಿ ಬಿಟ್ಟು ಕೆಲಸ ಮಾಡಿದರೆ ಸಾರ್ವಜನಿಕರು ನೆಮ್ಮಂದಿಯಿಂದ ಜೀವನ ಮಾಡಲು ಸಾದ್ಯವಾಗುತ್ತದೆ. ಆದ್ದರಿಂದ ಕ್ಷೇತ್ರದ ಜನತೆ ತಮ್ಮ ಏನೇ ಸಮಸ್ಯೆಗಳಿದ್ದರೂ ಇಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳಿದ್ದಾರೆ ಅವರಿಗೆ ಮನವಿ ಕೊಡಿ, ನಾನು ನಿಮ್ಮ ಜೊತೆ ಇರುತ್ತೇನೆ ನಿಮ್ಮ ಕೆಲಸ ಬೇಗ ಆಗುತ್ತವೆ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ತಾಲ್ಲೂಕಿನಲ್ಲಿ ತಹಶೀಲ್ದಾರ್, ಇ.ಒ ಮತ್ತು ಪೊಲೀಸ್ ಇಲಾಖೆ ತಮ್ಮ ಪಾಲಿನ ಕೆಲಸಗಳನ್ನು ಪ್ರಾಮಾಣಿಕತೆ ಹಾಗು ಬದ್ಧತೆಯಿಂದ ಕೆಲಸ ಮಾಡಿದರೆ ಶಾಸಕರಿಗೆ ಏನೂ ಕೆಲಸ ಇರೋದಿಲ್ಲ. ಜನರ ಸಮಸ್ಯೆಗಳಿಗೆ ಯಾವುದೇ ಅಧಿಕಾರಿ ತಕ್ಷಣ ಸ್ಪಂದಿಸಿ ಕೆಲಸ ಮಾಡಿದರೆ ರೈತರು ಕೊನೆಗಂಟ ಆ ಅಧಿಕಾರಿಗಳನ್ನು ನೆನೆಯುತ್ತಾರೆ ಎಂದರು.
ಇದೇ ವೇಳೆ ಕೆ.ಮಾವಿನಹಳ್ಳಿ ವೃತ್ತಕ್ಕೆ ಗ್ರಾಮಾಡಾಳಿತಾಧಿಕಾರಿ ನೇಮಿಸುವುದು, ಕಂದಾಯ ಇಲಾಖೆಗೆ 124, ತಾಲ್ಲೂಕು ಪಂಚಾಯಿತಿಗೆ 23, ಪಟ್ಟಣ ಪಂಚಾಯಿತಿ 8, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 2, ಪೊಲೀಸ್ ಇಲಾಖೆ 3, ಆರೋಗ್ಯ ಇಲಾಖೆ 2, ಜಿಲ್ಲಾ ಪಂಚಾಯಿತಿ 2, ಲೋಕೋಪಯೋಗಿ ಇಲಾಖೆ1, ಗ್ರಾಮೀಣ ಕುಡಿಯುವ ನೀರಿನ ಇಲಾಖೆ 3, ಭೂಮಾಪನ ಇಲಾಖೆ 3, ಬೆಸ್ಕಾಂ 7, ಕೃಷಿ 1, ಅರಣ್ಯ ಇಲಾಖೆ 2 ಸೇರಿದಂತೆ ಒಟ್ಟು 183 ಅರ್ಜಿ ಸ್ವೀಕೃತವಾಗಿವೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ತುಮಕೂರು ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿ ಮಂಜುನಾಥ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಒ ಶಿವರಾಜಯ್ಯ, ಶಿರಸ್ಥೆದಾರ್ ಡಿ.ಆರ್.ಸುನಿಲ್ ಕುಮಾರ್, ಗ್ರೇಟ್-2 ತಹಶೀಲ್ದಾರ್ ಬಿ.ಸಿ.ಸುಮತಿ, ತೋಟಗಾರಿಕೆ ಇಲಾಖೆಯ ಆಂಜನೇಯರೆಡ್ಡಿ, ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್, ಬಿಇಒ ಸೋಮಶೇಖರ್, ಕಂದಾಯ ಇಲಾಖೆಯ ವತ್ಸಲಾ, ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.