ತುಮಕೂರು: ಕ್ಷೇತ್ರದಲ್ಲಿ ಪ್ರತಿ ಗ್ರಾಮಕ್ಕೊಂದು ಸಾರ್ವಜನಿಕ ಸ್ಮಶಾನ ಸ್ಥಳ ಗುರುತಿಸುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಅಧಿಕಾರಿಗಳಿಗೆ ತಿಳಿಸಿದರು.
ಮಂಗಳವಾರ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಸ್ಮಶಾನ ಇಲ್ಲದೇ ಬಡಜನರು, ಪರಿಶಿಷ್ಟ ವರ್ಗದವರು ಪರದಾಡಬಾರದು. ವಿಧಾನ ಸಭಾ ಅಧಿವೇಶನದಲ್ಲಿ ಈ ಸಂಬಂಧ ಸರ್ಕಾರದ ಗಮನ ಸೆಳೆದು ಭೂಮಿ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಹೇಳಿದರು.
ಅಯಾ ಗ್ರಾಮಗಳಲ್ಲಿ ಇರುವ ಗೋಮಾಳದ ಜಾಗವನ್ನು ಕೂಡಲೇ ಗುರುತಿಸಬೇಕು. ಈ ಜಾಗವನ್ನು ನಿವೇಶನವಾಗಿ ಪರಿವರ್ತನೆ ಮಾಡಿ ಪ್ರತಿ ಬಡವರಿಗೂ ನಿವೇಶನ ಹಂಚುವ ಯೋಜನೆ ರೂಪಿಸುವಂತೆ ಹೇಳಿದರು.
ಎಲ್ಲೂ ಕೂಡ ಪ್ಲೆಕ್ಸ್ ಗಳನ್ನು ಅಳವಡಿಸದಂತೆ ನೋಡಿಕೊಳ್ಳಬೇಕು. ಪ್ಲೆಕ್ಸ್ ಗಳಿಂದ ಅಂದ ಕೆಡುವುದಲ್ಲದೇ ಪರಿಸರಕ್ಕೂ ಮಾರಕ ಎಂದು ಎಚ್ಚರಿಸಿದರು.
ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನ ಕೊಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.