ಉಜ್ಜಜ್ಜಿ ರಾಜಣ್ಣ
ತುಮಕೂರು: ಕಾಯೋರು, ಕೊಯ್ದುಕೊಡೋರು ಮತ್ತು ಬೇಯಿಸೋರು ಇಂಗಡಿಸಿ ಮಾಡಬೇಕಾದ ಜವಾಬ್ದಾರಿ ಕೆಲಸಗಳೇ ಒಂದೊಂದು ಥರನಾಗಿರುತ್ತುವೆ.
ಉಗಾದಿ ಬೇರೆ ಈಗ ಬಂದಿದೆ. “ಕರಿ ತುಂಡು ತಿಂದು ಕುರಿ ಪಿಸುಗೆ ಹೂವು ಉಗ್ಗಿ” ಹೊಸ ದಿನ್ದು ಚಂದ್ರುನ್ನ ನೋಡೋದು. ದೇವ್ರು ಮಾಡದಂತೂವೆ ಬಿಡಿ ಕ್ವರ ತುಳುಕಂಡು ಬಸಿಲಲ್ಲಿ ತಿರುಗಾಡಿಕೊಂಡು. ಹೊಸ ದಿನ ಇನ್ನೇನು ಹತ್ರು ಬೀಳಾ ಬಂದಿದೆ. ಹೋದು ತಿಂಗಳಿನಿಂದಲೇ ಉಗಾದಿ ಹಬ್ಬದ ವಾರದ ಸಂತೆಗಳು ಮೇಲಿಂದ ಮೇಲೆ ವಾರಕ್ಕೊಂದಂದರಂತೆ ನಡೆಯುತ್ತಿವೆ.
ಉಗಾದಿ ಹಬ್ಬದ ಒಳಗೊಂದು ತಗಾದಿ ವರ್ಸತಡ್ಕು. ಮಳ್ಕ, ಪಟ್ಲಿ, ಹಲ್ಲಾಗಿರೋವು, ಎಳ್ಕಾಗಿರೋವು, ಬಲಿಕೆ ಆದಾವು, ದೇವ್ರುಗೆ ಬಿಟ್ಟಾವು, ಸಂತೆ ಮೇಲೆ ತಂದು ಕೊಯ್ದು ಹರಕೆ ತೀರುಸುವವು, ಹಿಂಡೊಳಿಗೆ ಮೇದಾವು, ಮನೇಕಡೆಗೇ ಮೇಯ್ಸಕೊಂಡು ಇರೋವು, ಬೀಜ್ದವು, ಬೀಜ ಕೀಳ್ಸಕೊಂಡೋವು, ಕವದಾರಿಗುಳು, ಗೊಡ್ಡುಕುರಿಗುಳು, ಹೂಪುಗುಳು ಹೀಗೆ; ಉಗಾದಿಗೆ ಮಾರನಾಮಿ ಮಾರಿಹಬ್ಬುಕ್ಕೆ ಕೊಯ್ಯುವ ಆಡುಕುರಿಗಳೆಲ್ಲಾ ಒಳ್ಳೊಳ್ಳೆ ‘ಖಷಿ’ಯಾದಾ ಉತ್ಪಾದನೆಗಳು.
ಉಗಾದಿಗೆ ಅವುಗಳೆಲ್ಲವೂ ಗೂಡು, ರೊಪ್ಪ, ಮನೆ, ಅಂಗಳಗಳಲ್ಲೆಲ್ಲಾನೂವೆ ಕಾಣುತ್ತಿವೆ. ಅಂತಹ ದಿಂಡಾದ ನಡು ಪಸಿಮೆಯಾದ ಕುರಿಗಳು ಹೊಟ್ಟೇಲಿ ಹುಟ್ಟಿದ ಬನಿಯಾದ ಮರಿಗಳನ್ನೇ ತಂದು ಕುಯ್ಯೋದು.
ಉಗಾದಿ ಹಬ್ಬದ ಸಂದರ್ಭದಲ್ಲಿ ಬೇಳೆಗಿಂತವಾ ಬಾಡಿಂದೇ ಬಹಳ. ಬೇಳೆ ಯಂಗೋ ಬೆಂದು ಬಿಟ್ಟಾವು, ಬಾಡು ಬೇಯಾಕೋಕೆ ಒಳಕೆ ಸೌದೇ ಬೇಕು ಆ ಮೇಲೆ ಸಾರು ಕುದಿ ಹತ್ತಲು ಎಳುರಿ ಇರಬೇಕು.
ಬಾಡು ಮುಗಿಯೋತನುಕವಾ ಒಲೆ ಒಳುಗೆ ಸಾದಾ ದಪ್ಪ ಕೆಂಡ ಇರುಬೇಕು, ಬೆಂದು ಬಾಡು ಕೆಂಡುದು ಪರಿಮಳದಲ್ಲೇ ಕುದಿಹತ್ತಿದುರೆ ಮಾಂಸದ ಸಾರು ಬಹಳ ರುಚಿಕಟ್ಟು ಅಂತಾರೆ. ಕರುಗುದಾಗೆ ನೆಣ್ದು ತುಪ್ಪಾ ಕಾಯಿಸಲು ಗಟ್ಟಿ ಸೌದೆ ಕೆಂಡಿದ್ರೆ ಚೆಂದ ಒಳ್ಳೆಯದು ಅಂತುಲೂವೆ.
ನೆಣ್ದು ತುಪ್ಪುಕ್ಕೆ ಮಾರು ಹೋಗಂಗೆ ಮಾಡಿ ತಾನೆ ಚಿತ್ತಯ್ಯ ಆರುವ್ರು ಮಾಳಮ್ಮುನ್ನ ಮದಿವಾದುದ್ದು. ಉಗಾದಿ ವರ್ಸತಡುಕು ಮುಗುದು ಮೂರ್ನಾಕು ದಿನ ಬಾಡಿನು ಸ್ವಾರೆ ಅಥವಾ ತಪ್ಪಲೆ ಒಲೆ ಗದ್ದಿಗೆ ಬಿಟ್ಟು ಇಳಿಲಾರುದು.
ಉಗಾದಿ ಕಾಲ್ದಾಗೆ ನಾಡಿನಾದ್ಯಂತ ನಡಿಯೋ ಜಾನುವಾರು ಸಂತೆಗಳೆಲ್ಲಾವೂ ವರ್ಸತಡುಕಿನು ಸಂತೆಗಳೆ. ಮಾರನಾಮಿ ಕಾಲ್ದಾಗುಲೂವೆ ನಡಿಯೋ ಜಾನುವಾರುಗಳ ಸಂತೆಗಳನ್ನೂವೆ ಹಿರಿಯರ ಹಬ್ಬ ಸಂತೆಗಳೆಂತಲೇ ಕರೆಯಲಾಗುತ್ತದೆ.
ಬೆಳೆ ಒಡೆ ನೂಕುವ ಕಾಲ ಮತ್ತು ಕೊಯ್ಲೋತ್ತರ ಖೂಳೆ ಕಾಲದಲ್ಲೂ ನಡೆಯುವ ಜಾನುವಾರುಗಳ ಸಂತೆಗಳು ಮಾರಿ ಹಬ್ಬದ ಸಂತೆಗಳು. ಬಾಡಂತೂವೆ ಒಲೆಹಗ್ಗ. ಒಲೆ ಉರಿಯೋದು; ಬಾಡು ಬೇಯೋದು, ವಾರಾನುಗಟ್ಟಲೆ ಮುಂದುವರಿದಿರುತ್ತೆ.
ಒಲೆ ಕುಪ್ಪೆ ಮೇಲೆ ಬೇಯೋ ಬಾಡಿನ ಜೊತೆಜೊತೆಗೇ ಒಲೆ ಮೇಲಿನ ಜಂತಿಗೊ, ಜವಿಗೋ, ತೀರಿಗೋ, ದಬ್ಬಿಗೋ ನೇತು ಹಾಕಿದ ತೊಡೆ ಬಾಡಿಗೆ ಉರಿಒಡಿ ರಾಸಿ ಸದಾ ಕಾವತ್ತುತ್ತಿರುತ್ತದೆ, ಹಿಂದಾಗಿ ಹಬ್ಬಕ್ಕೆ ತಡವಾಗಿ ನಿಧಾನವಾಗಿ ಬರೋರಿಗೆ.
“ಬಡುಗುಲು ಸೀಮೆಯ ಬಾಡು ಅಡುವಾಗದು ಚೆಂದ, ತೆಂಕಲು ಸೀಮೆಯ ಬಾಡು ರುಚಿಯಾಗದು ಚೆಂದ”. ಇದೂ! ಅಂದರೆ, ನಾನು ಮದುವೆ ಆಗಿದ್ದು; ತೆಂಕುಲು ಸೀಮೆ ಹೆಣ್ಣು.
ಅದೂವೆ ಹೊತ್ಕಂಬಂದು ಮದುವಾದೆ. ಹೆಣ್ಣು ಹೊತ್ಕಂಬರೋಕೋದ ದಿನ ಹೆಣ್ಣಿನ ಚಿಕ್ಕಪ್ಪ ಕೋಳಿ ಮರಿಯಣ್ಣ ಮತ್ತು ಅವರ ಗೆಳೆಯ ಗಿರಿತಿಮ್ಮಾವ ಬ್ಯಾಲಕೆರಿ ಗೇಟಾಗೆ ಬಸ್ ಹತ್ತಿದುರು.
ಅದು ಸಾಮಾನ್ಯವಾಗಿ ಚನ್ನಬಸವೇಶ್ವರ ಬಸ್ಸೋ, ಸುಮಲತ ಬಸ್ಸೋ ಇರಬಹುದು. ಹಿಂದಿನ ಸೀಟ್ ನಲ್ಲಿ ಕೂತಿದ್ದ ನಮ್ಮುನ್ನ , ನೋಡಿ ಗಿರಿತಿಮ್ಮಾವ; ಇವ್ಯಾಕ ಬಿದ್ದುವೋ ಮರಿಯಣ್ಣ ತೆಂಕಲು ಸೀಮೇವು ಅಡವಾದ ಬಾಡಿನವಲ್ಲ, ಸಣ್ಣ ಮಳ್ಳ ತುಳುದಾವು, ಸೀರಿದುರೆ ಸೀರಣುಗೆ ಬಾಯಿಗೆ ಸಿಗದೋವು ನಮ್ಮೆಣ್ಣಿಗೆ ಲಗತ್ತಾದವೇನಲ್ಲ ಬುಡು ಮರಿಯಣ್ಣ ಅಂಥವಾ ಮಾತನಾಡೋದು ಗಳಿಮ್ಖಯಾ ಸಣ್ಣುಗು ಕೇಳಿದಂಗಾಗುದು.
ಆದ್ರೂವೆ; ಇವೇನು ನೆಲ ನೆಡದಾವಲ್ಲ ಹೆಣ್ಣು ಹೊತ್ಕಂದು ಹೋಗುತ್ವ ಅದ್ಕಂದು ಸುಮ್ಮನಾಗದ್ರೊಳಿಗೆ ನಾವೂ ಅವ್ರು ಜೊತೆಯಲ್ಲಿ ಬಡಗುಲು ಸೀಮೆ ಬೆಡಗಿನು ಭೂಮಿ ಉಡುವಳ್ಳಿ ಕೆರೆ ದೊಡ್ಡಳ್ಳದ ಸಾಲು ತಟ್ಟಿಕಾಯಿ ಉಗುಣಿಬಳ್ಳಿ ದಿಬ್ಬದ ಮೂಲೆ ಮಖ್ದ ತೆಂಕಡಿ ಮೂಲೆಗಾದು ಹಿರಿಯೂರು ತಾಲ್ಲೂಕಿನ ಮಾರಿಕಣುವೆ ಕಡೆ ಹೋಗಿರೊ ಬ್ಯಾಟೆ ಮರದ ಹಟ್ಟಿ ಗೇಟಲ್ಲಿ ಬಸುರಾಜ ನಾನು ಬಸ್ ಇಳುದು ನಿಲ್ದಾಣದಿಂದ ಹಟ್ಟಿ ಕಡೆ ನಡುದುರೆ, ಮುಂದುಕು ಅಲ್ಲೇ ಹಾದಿಗುಂಟ ಹೋದರೆ ಚಿತ್ರದೇವರಹಟ್ಟಿ. ಅದಕೂ ಮುಂದೆ ಹೋದರೆ ಕರಿಯಾಲ್ದ ತೊರಿಗೋಗೊ ತಿರುವಲ್ಲೇ ಬಾಳೆಗೊಂದಿ ಹಳ್ಳ.
ಅವೆಲ್ಲವೂ ನೆನಪಿಗಾಗಿ ಮನಸು ಮುತುಗುದು ಹೂವಾಗಿ ನನ್ನ ಮದುವೆ ವಿಚಾರ ಮರೆತು, ದುಮ್ಮೇನಳ್ಳಿ ಮಾಳಮ್ಮ ಮತ್ತು ಚಿತ್ರ ದೇವರ ಹಟ್ಟಿ ಚಿತ್ತಯ್ಯನು ಮದುವೆ ಕಣ್ಮಂದೆ. ಇರಲಿ, ಬಡುಗುಲು ಸೀಮೆ ಕುರಿ ನೆಲ ನೆಡದೋವು ಕಾಡು ಮೇದು ಕಣುವೆ ಕಲ್ಲು ತುಳುದು ಬೇಳದೋವು. ನಮಗೆ ತೆಂಕಲು ಸೀಮೆ ಬಿಳಿನೆಲ ಸಣ್ಣ ಮಳ್ಳು ನುಚ್ಚು ಕಲ್ಲು ನುಣ್ಣನೆಯ ಮಣ್ಣು ತುಳುದು ಮೇದಾವು ಅಂಬೋದು ಗಿರಿತಿಮ್ಮಾವುನು ಮಾತು.
ಭಾರತೀಯರಾದ ನಮುಗೆ ಬಾಡು ಬಿಟ್ಟು ಮಾತಾಡಾಕೆ ಬೇರೆ ಏನು ತಾನೆ ಐತೆ ಹೇಳಿ. ಬೆಳಿಯೋದು ಉಣ್ಣೋದು, ಉಡೋದು, ತಿನ್ನೋದು, ಕೊಡೋದು, ಕಟ್ಡೋದು, ಮಾಡೋದು, ತೀರುಸೋದು, ಮಾರೋದು ಎಲ್ಲಾದೂ ಬಾಡು ಬೆಳೆದಿದ್ದುದುದರಿಂದಲೇ ಬಂದದ್ದು ಭಾರತೀಯರಾದ ನಮ್ದು ನಡುದಿದ್ದೇ ಹೀಗೆ.
ಬಾಡು ಹೇರಳವಾಗಿ ಬೆಳಿಯೋ ಭಾರತೀಯ ಬೇಸಾಯ ಶಾಸ್ತ್ರ ಮತ್ತು ತತ್ತ್ವಶಾಸ್ತ್ರದಲ್ಲಿ ಹಾಗು ಭಾರತೀಯ ಆಧ್ಯಾತ್ಮಿಕ ತಾತ್ವಿಕ ನೆಲೆಗಳಲ್ಲಿ ಜಗತ್ತು, ಅಸ್ತಿತ್ವ, ಜೀವಾತ್ಮ, ಮೋಕ್ಷ, ಜೀವಸತ್ವ ಎಲ್ಲಾನೂ ಬಾಡೆಯಾ. ಕಂಡದ ವನವಾಗಿ ಬೆಳೆದ ಅಖಂಡುವಾದ ಸಾಕುಪ್ರಾಣಿಗಳ ಅಂಗಾಂಗಗಳನ್ನು ಖಾದ್ಯಗಳಿಂದ ಎಡೆ ಬಿಡಾರ ಮಾಡಿ ತಾನೆ ಭಾರತೀಯರು ಇಂದಿಗೂ ಹಿರಿಯರ ಹಬ್ಬಗಳನ್ನು ನಡೆಸುವುದು.
ಮರಣಾ ನಂತರದಲ್ಲಿ ಭಾರತೀಯ ಸ್ವರ್ಗಸ್ಥನಾಗಲು ಬಾಡು ಬಳಸಿ ನೆಡೆಸಿದ ಭಾತೀಯ ಪೌರೋಹಿತ್ಯವಂತೂ ಬಾಡು ಉಣ್ಣುವ ಜಗತ್ತಿನ ರಾಷ್ಟ್ರಗಳೇ ಕೊಂಡಾಡುವಂತಹದ್ದು. ಆಗಾದರೆ ಅಪಾಟಿ ಬಾಡು ಬೆಳೆದ ಭಾರತ ಯಾಕಾದರೂ ಬಡವಾಯಿತು.
ಅರ್ಥ ಮಾಡಿಕೊಳ್ಳಲು ತೀರಾ ತಡವಾಗಿದೆ. ಭಾರತದ ಆರ್ಥಿಕ ತಜ್ಞರು ಪಶುಪಾಲನಾ ಸಮುದಾಯಗಳ ಆರ್ಥಿಕ ವ್ಯವಸ್ಥೆಯನ್ನು ಗಡೆಗಣ್ಣಿನಿಂದ ನೋಡುತಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯನ್ನು ಅನಾದಿಕಾಲದಿಂದಲೂ IT, BT ಗಳಿಗಿಂತಲೂ ಆಡುಕುರಿಗಳೆಂಬ ATM ಗಳು ಇಂದಿಗೂ ಸಲಹುತ್ತಿವೆ. ಭಾರತದ ಹಳ್ಳಿಗಳಲ್ಲಿ ಕಂಪ್ಯೂಟರ್ ರೂಂಗಳಿಗೆ ಬದಲಾಗಿ ಕುರಿ ಗೂಡುಗಳು ಇರುವುದನ್ನು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರ ಅರ್ಥ ಮಾಡಿಕೊಳ್ಳಲು ಇನ್ನೂ ಎಷ್ಟೋ ವರ್ಷಗಳು ಬೇಕಾಗಬಹುದೇನೋ.
ಕೊಟ್ಟಿಗೆ, ಗ್ವಾಂದಿಗೆ, ತಿಪ್ಪೆಗಳು ಪುನರುತ್ಥಾನ ಕಾಣಬೇಕಾದ ಇಂಡಿಯಾದಲ್ಲಿ Fertilizer company, Seed company, Pesticides company ಗಳು ಬೆಳೆದವು. ಪರಿಣಾಮ, ಇವುಗಳನ್ನು ಬೆಳಸಿದ ಸರ್ಕಾರಗಳೇ ಕೊಟ್ಟಿಗೆ ಗೊಬ್ಬರ, ನಾಟಿ ಬೀಜ, ಸಿರಿ ಧಾನ್ಯ ಬಳಸಿ ಮತ್ತು ಬೆಳಸಿ ಎಂದು ವಿಶ್ವವಿದ್ಯಾಲಯಗಳಿಂದ ಹೇಳಿಸುತ್ತಿವೆ. ಕೊಟ್ಟಿಗೆ ಗೊಬ್ಬರ, ನಾಟಿ ತಳಿ ಬೀಜ, ಸಿರಿ ಧಾನ್ಯಗಳ ಬಗ್ಗೆ ಹೆಚ್ಚು ಗಮನ ಸರ್ಕಾವೇ ನೀಡಿದ ಮೇಲೆ ಇವುಗಳನ್ನು ಬೆಳೆಯಲು ಜಾನುವಾರುಗಳು ಅವುಗಳ ಮೇವು ನೀರಿಗಾಗಿ ಹುಲ್ಲುಗಾವಲುಗಳು ಉಳಿಯ ಬೇಕಾದುದು ಅತ್ಯವಶ್ಯಕ.
ಗಂಗಾನದಿ ತೀರದಿಂದ ಹಿಡಿದು ನಮ್ಮೂರು ಕೆಂಗುದುರೆ ಹಳ್ಳದವರೆವಿಗೂ ಆಡುಕುರಿ ದನದ ರೊಪ್ಪಗಳನ್ನು ಕಟ್ಟಿ ಬೆಳೆದುದ್ದು ಬರೀ ಬಾಡು. ಹಿಂದೆಲ್ಲಾ ಅಳೋಮಕ್ಕಳಿಗೆ ಹಾಲೊಯ್ಯುರು. ಅಂತಹ ಕಾಲದಲ್ಲೇ ಜಾನುವಾರು ಸಾಕಾಣಿಕೆ ಭಾರತದಲ್ಲಿ ಬಹಳವಾಗಿತ್ತು. ಅಂದರೆ, ಅವು ಕರೆದ ಹಾಲನ್ನುನ್ನೆಲ್ಲಾ ಅಳಾ ಮಕ್ಕಳೇ ಕುಡುದುವಾ. ಆನಾಡಿ ಜಾನುವಾರುಗಳನ್ನೆಲ್ಲಾ ಹಾಲು ಮಾತ್ರ ಕರಕೊಂಡು ಅವುಗಳನ್ನು ಕಾಡಿಗೆ ಹೊಡ್ದುರಾ. No,
ಕಾಸಿ ಕರೇವು ಮಾಡಿದ್ರು. ಕೊಯ್ದು ಒಣಗಿಸಿ ಕೊರಬಾಡು ಮಾಡಿ ಕಾಳ್ಸಿಗೆ, ಕೊಮ್ಮಗಳಿಗೆ ಒಣ ದಿನಸಿ ದವಸ ಮಾಡಿ ಕಾಳು ಕಡ್ಡಿತರ ಒಣ ಪಡಿ ಮಾಡಿ ಒಣ ಬಾಡನ್ನು ಸಂಗ್ರಹಿಸಿ ಇಟ್ಟುಕೊಂಡರು. ವರ್ಷ ಒಂಭತ್ತು ಕಾಲ ಜಮೀನ್ದಾರರ ಹೊಲ, ತೋಟ, ಗದ್ದೆಗಳಲ್ಲಿ, ಮನೆಯಲ್ಲಿ ದುಡದ್ರುವೇ ಆರು ತಿಂಗಳ ಅಂಬಲಿಗೆ ಸಾಕಾಗದಂತಹ ಕಾಲದಲ್ಲೂ ಕೊರಬಾಡು ಹಲವಾರು ಸಮುದಾಯಗಳನ್ನು ಆಹಾರವಾಗಿ ಅವರ ಹಸಿವಿಗೆ ಒದಗಿದೆ.
ಭಾರತದ ಬಡತನಕ್ಕೆ ಬಾಡೇ ಅನ್ನದ ಬಲ. ಯಾತರವೂ ಕಾಳಿಲ್ಲ, ಈ ಹೊತ್ತು ಸಾರಿಗೆ ವ್ಯವಸ್ಥೆ ಏನೊ? ಎಂದು ಅಡಿಗೆ ಹೊತ್ತಿಗೆ ಯಾರಾದ್ರು ಗುನುಗಿದ್ರೆ ತಗ ಒಂದು ಬೊಗಸೆ ಕೊರಬಾಡು ಒಣವುರೆ ಕಾಳೋ? ಇನ್ಯಾತರವ್ರೋ? ಉಂಡುಗಾಳು ಜತೆಗೆ ಬೇಯಾಕು ಅಂತವಾ ಕೊಡೋರು. ಇವತ್ತು ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಕರೇವು ಮತ್ತು ಕೊರಬಾಡು ಸಂಸ್ಕರಣಾ ಸಾಮರ್ಥ್ಯ ವಿಧಾನಗಳು ಕ್ವಾಣೆ ಸಾಲಿನಲ್ಲಿ ನಿಂತಿರುತಿದ್ದ ಕರಭಾನ್ದು ಸಾಲಿನಿಂದಲೇ ಕಾಣೆಯಾಗೆವೆ.
ಆಧುನಿಕ ಭಾರತದಲ್ಲಿ ಬಾರೀ ನೀರಾವರಿ ಯೋಜನೆಗಳು ಜಾರಿಗೆ ಬಂದವು. ಕಬ್ಬು, ಕಾಯಿ, ಕೊಬರಿ, ಭತ್ತದ ಬಯಲು ನಿರ್ಮಾಣವಾದವು. ಆದರೆ ಭಾರತೀಯರ ಪ್ರಧಾನ ಬೆಳೆ ಪಶುಪಾಲನೆಯನ್ನು ಬೆಳೆಯುವ ಬಯಲುಗಳು ಇಡೀ ಭಾರತದಲ್ಲಿ ಎಲ್ಲಿ ನೋಡಿದರೂ ಕಾಣಸಿಗಲಾರವು. ಬ್ರಿಟಿಷ್ ಸರ್ಕಾರ ಇದ್ದಾಗ ಪಶುಪಾಲನಾ ಸಮುದಾಯಗಳ ಜಾನುವಾರು ಸಂಪತ್ತಿನ ಮೇಲೆ, ಅವುಗಳ ಮೇವು ಮತ್ತು ನೀರಿನ ಪ್ರದೇಶದಲ್ಲಿ ಆಕ್ರಮಣಗಳಾಗಲಿಲ್ಲ . ಭಾತದ ಪಾಳೇಗಾರರು, ಮಾಂಡಲೀಕರು, ರಾಜರುಗಳ ಅಧೀನದಲ್ಲಿದ್ದ ಭಾಗಗಳಲ್ಲಿ ಪ್ರಭತ್ವ ಪಶುಪಾಲನಾ ಜನಾಂಗಗಳನ್ನು ಅವನತಿಗೆ ತಳ್ಳದಂತಹ ಸ್ಥಿತಿ ಇತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದ ಪ್ರಧಾನ ಆಹಾರವನ್ನು ಕದ್ದು ಮುಚ್ಚಿ ತಿನ್ನುವಂತಾಗಿದೆ. ಬ್ಯಾಂಕುಗಳ ಬೆಂಬಲವನ್ನು ಪಡೆಯದೆ ಬಹುಕಾಲದಿಂದಲೂ ಬೆಳೆದ ಆರ್ಥಿಕ ವ್ಯವಸ್ಥೆ. ಪಶುಪಾಲನೆಗೆ Special Economic development zone ಗಳಾಗಿದ್ದ ನದಿಯ ಬಯಲು ಪ್ರದೇಶದಲ್ಲಿ ಮತ್ತು ಹುಲ್ಲುಗಾವಲುಗಳನ್ನು ನಾಶಪಡಿಸುವುದೇ ಜಾನುವಾರು ಸಾಕಾಣಿಕೆದಾರರ ವಿರುದ್ಧದ ಮೊದಲ ಆಕ್ರಮಣಕಾರಿ ಬೆಳವಣಿಗೆಗಳು.
ದೇಶದ ಅಲೆಮಾರಿ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ನದಿಗಳು ಹರಿಯು ಪ್ರದೇಶಗಳಿಗೆ ಆಡುಕುರಿ ಮೇವು ನೀರಿಗಾಗಿ ಹೋಗುವರು. ಹಾಗೆ ಪರಸ್ಥಳಗಳಿಗೆ ಹೋದವರು ಅನೇಕವೇಳೆ ಅಪಘಾತ ಮತ್ತು ಆಪತ್ತುಗಳಿಗೆ ಒಳಗಾಗುವರು. ಹತ್ತಿರದಲ್ಲೇ ಇದ್ದ ಅವರ ಹುಲ್ಲುಗಾವಲುಗಳನ್ನು ಸರ್ಕಾರ ಹಾಳು ಮಾಡಿದ್ದರಿಂದ ಅವರು ಬಹಳ ದೂರ ಹುಲ್ಲು ನೀರು ಹುಡುಕಲು ಆರಂಭಿಸಿದರು.
ಬೆಳೆದ ಬೆಳೆ ದನ ಕುರಿಗಳನ್ನು ಕದ್ದು ಮಾರುಕಟ್ಟೆಗೆ ತರುವಂತಾಗದೆ. ಮಾಂಸ ಮಾರುವವರನ್ನು ಹೊಡೆಯುವ ಮತ್ತು ಕೊಲ್ಲುವ ಹಾಗು ಬಂದಿಸಿ ಜೈಲಿನಲ್ಲಿಡುವ ಪರಂಪರೆಯನ್ನು ಭಾರತದ ಉದ್ದಗಲಕ್ಕೂ ಬೆಳಸಿ ಪಶುಪಾಲನಾ ಸಮುದಾಯಗಳ ವೃತ್ತಿಪರತೆಯನ್ನು ಅವಮಾನಿಸಲಾಯಿತು ಹಾಗು ಹಾಳುಮಾಡಲಾಯಿತು.
ಆಧುನಿಕ ಭಾರತದ ಚರಿತ್ರೆಯಲ್ಲಿ ಮಾಂಸಾಹಾರಿಗಳ ವಿರುದ್ಧ ಕಂಡರಿಯದಂತಹ ಕ್ರೌರ್ಯ ಸ್ವತಂತ್ರವಾದ ನಂತರದಲ್ಲಿ ಬೆಳೆದುದ್ದಾದರೂ ಎಕೆ ಎಂಬುದನ್ನು ದೇಶದ ಪಶುಪಾಲನಾ ಸಮುದಾಯಗಳು ಮತ್ತು ಆ ಮೂಲಗಳಿಂದ ಆಯ್ಕೆ ಆದವರೂ ಇಂದಿಗೂ ಸರಿಯಾದ ರೀತಿಯಲ್ಲಿ ಹೇಳುವುದಾದರೆ ಇದನ್ನು ಅರ್ಥ ಮಾಡಿಕೊಳ್ಳಲು ಆಗಿರುವುದಿಲ್ಲ.
ಇದರಿಂದಾಗಿ ದೇಶದ ಜಾನುವಾರು ಸಾಕಾಣಿಕೆದಾರರ ಅರ್ಥಶಾಸ್ತ್ರ ಬುಡಮೇಲಾಗಿದೆ. ವೃತ್ತಿ ಜೀವನವನ್ನೇ ತೊರೆಯುತಿದ್ದಾರೆ. ಮಾಂಸಾಹಾರದ ರಾಜಕೀಯ ಮಾಡಿದ ಪಕ್ಷಗಳು ಗೆಲ್ಲುತ್ತವೆ. ಇದು ಇಡೀ ಪಶುಪಾಲನಾ ಸಮುದಾಯಗಳ ಸೋಲು.
ಅಪಾರವಾದ ಆದಾಯವನ್ನು ಹೊಂದಿರುವ ಉದ್ಯೋಗ ವಲಯವನ್ನು ನಾಶಪಡಿಸುವ ಸಂಚಯಗಳು. ಪಶುಪಾಲನಾ ಪ್ರದೇಶಗಳ ಮೇಲೆ ಆಕ್ರಮಣಗಳು ಸ್ವತಂತ್ರ ನಂತರದ ಭಾರತದಲ್ಲಿ ನಡೆಯುತ್ತಿವೆ.
ದಿಬ್ಬದ ಮೇಲೆ ಮೇಲಾಗಿ ಬೆಳಿಯೋದು ಕಾಡು, ತಗ್ಗು ತಗ್ಗಾದ ಇಳಿಜಾರು ಪ್ರದೇಶಗಳಲ್ಲಿ ಹರಿಯೋದು ನೀರು. ತೊಡೆ ಮರೆಯಲ್ಲಿ ಸಂಸಾರ ಬೆಳದರೆ; ಎಲೆ ಮರೆಯಲ್ಲಿ ಆಡುಕುರಿ ಎತ್ತುಎಮ್ಮೆ ಬೆಳಿಯೋವು. ಹಿಂದೆಲ್ಲಾ ಮಾಂಸಾಹಾರ ಬೆಳೆಯುವವರ ವನಸಂಪತ್ತು ಹುಲ್ಲುಗಾವಲುಗಳು ದನಕರುಗಳಿಗೆ ದೇಶದುದ್ದಕ್ಕೂ ಇದ್ದವು.
ಅನ್ನ ತಿಂದು ಅರಿವೆ ಹೊದಿಯೊ ಪಶುಪಾಲಕರಿಗೆ ಇದು ನಿಸರ್ಗದ ಅರಿವು ವರ. ಆದರೆ, ಆಡಳಿತವನ್ನು ಹಿಡಿಯೋವು, ಆಳೋವು ಇದನ್ನು ಅಪಾರ್ಥ ಮಾಡಿಕೊಂಡುವು. ಮಡ್ದುನೀರು, ಅಡವಿ ಹುಲ್ಲು ಜಾನುವಾರುಗಳ ಬೆಳೆಗಾರರಿಗೆ ಸಿಗದಂತೆ ಇಂದಿಗೂ ಮೋಸ ಮಾಡುತ್ತಿವೆ.
ಮಾಂಸಾಹಾರವನ್ನು ಗುರಿಯಾಗಿ ಇರಿಸಿಕೊಂಡು ನಡೆಯುತ್ತಿರುವ ಭಾರತದ ರಾಜಕಾರಣ ಇಡೀ ದೇಶದಲ್ಲಿ ಪಶುಪಾಲನಾ ಸಮುದಾಯಗಳ ಕಸುಬು, ಕೃಷಿ ಮತ್ತು ಮಾರುಕಟ್ಟೆಗಳನ್ನು ಹಾಳುಮಾಡುತ್ತಿದೆ.