ತುರುವೇಕೆರೆ: ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಸ್ಥಿತಿಯನ್ನು ತಲುಪುತ್ತಿದ್ದು; ಎಲ್ಲರೂ ತಮ್ಮ ಮಕ್ಕಳನ್ನು ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ತಾಲ್ಲೂಕು ಶಿಕ್ಷಣ ಸಂಯೋಜಕ ಸಿದ್ದಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀ ಚಂಪಕಾ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಶಾಲತಾ ಬಿ.ಎಸ್ ಅವರಿಗೆ ಅಭಿನಂಧನೆ, ಗುರುವಂದನಾ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತಾವು ಓದಿದ ಶಾಲೆಯನ್ನು, ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವ ಕೆಲಸವಾಗಬೇಕು ಹಾಗಾದಲ್ಲಿ ಮಾತ್ರ ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ. ತಾವು ಕಲಿತ ವಿದ್ಯೆಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮೀಸಲಾಗಿಸದೆ ಸಮಾಜದಲ್ಲಿ ನೊಂದವರ, ಅಸಹಾಯಕರ, ಬಡವರ ಕಣ್ಣೊರಿಸುವ ಶಕ್ತಿಯಾಗಬೇಕು ಎಂದರು.
ಸಂಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೃಜನಶೀಲ ಶಿಕ್ಷಕರು ಸುಸ್ಥಿರ ಸಮಾಜ ಹಾಗು ದೇಶದ ನಿರ್ಮಾತೃಗಳಾಗಿರುತ್ತಾರೆ. ಶಾಲೆಯಿಂದ ಈ ಭಾಗದ ಸಾವಿರಾರು ಮಕ್ಕಳು ಅಕ್ಷರ ಕಲಿತು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಇಂತಹ ಶಾಲೆಯನ್ನು ಉಳಿಸಿ, ಬೆಳೆಸುವ ಸಂಕಲ್ಪ ಎಲ್ಲರದು ಎಂದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಿ.ಎಸ್.ಆಶಾಲತಾ ಡಾ.ರವೀಶ್ ಎನ್.ಆರ್ ದಂಪತಿಗಳನ್ನು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ, ಹೂ ಮಳೆಗರೆದು ಅಭಿನಂಧಿಸಿದರು. ನಂತರ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಮಂತ ಕುಮಾರಿರಾಜು, ಚಂಪಕ ವಿದ್ಯಾ ಸಮಿತಿ ಮಾಜಿ ಅಧ್ಯಕ್ಷರಾದ ಸುರೇಶ್, ಮಾಜಿ ಕಾರ್ಯದರ್ಶಿ ರೇಣುಕಪ್ಪ, ಸಿಆರ್ಪಿ ಶ್ರೀದೇವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಮಾಜಿ ಉಪಾಧ್ಯಕ್ಷ ಚಿನ್ಮಯ್, ಮಾಜಿ ಸದಸ್ಯರಾದ ಶ್ರೀನಿವಾಸ್, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳ ತಂಡ, ಗ್ರಾಮಸ್ಥರು ಮತ್ತು ಪೋಷಕರು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿ ಚಿರಂಜೀವಿ ನಿರೂಪಿಸಿ, ರೂಪೇಶ್ ಎಚ್.ಬಿ ಸ್ವಾಗತಿಸಿ, ವೆಂಕಟೇಶ್ ಪ್ರಸಾದ್ ವಂದಿಸಿದರು.