ತುಮಕೂರು: ಕನ್ನಡ ಬೆಳವಣಿಗೆ ಮನೆಯಿಂದಲೇ ಆಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.
ತುಮಕೂರಿನ ಸುಫಿಯಾ ಕಾನೂನಿನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಮಾತೃ ಭಾಷೆ ಯಾವುದೇ ಇರಲಿ ಮಕ್ಕಳಿಗೆ ಕನ್ನಡ ಕಲಿಸಬೇಕು. ನಾನೂ, ನನ್ನ ಮಕ್ಕಳಿಗೆ ಕನ್ನಡ ಕಲಿಸಿರುವೆ. ನನ್ನ ಮಕ್ಕಳು ಅಂಗನವಾಡಿ ಯಲ್ಲಿ ಕನ್ನಡ ಕಲಿತರು. ಕನ್ನಡ ಪುಸ್ತಕಗಳನ್ನು ಓದುತ್ತಾರೆ ಎಂದರು.
ದಾವಣಗೆರೆಯಲ್ಲಿ ನ್ಯಾಯಾಧೀಶೆಯಾಗಿದ್ದಾಗ ಕನ್ನಡದಲ್ಲೇ ಜಡ್ಜ್ ಮೆಂಟ್ ಬರೆಯುತ್ತೇನೆ. ಕನ್ನಡ ಒಂದು ಅಸ್ಮಿತೆಯಾಗಿದೆ ಎಂದು ಹೇಳಿದರು.
ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇಂಗ್ಲೀಷ್ ಸಹ ಬೇಕು. ಆದರೆ ಕನ್ನಡವನ್ನು ಚೆನ್ನಾಗಿ ಕಲಿಯಬೇಕು.ಉಚ್ಛರಣೆ ತಪ್ಪಾಗಿ ಮಾಡಬಾರದು ಎಂದು ಸಲಹೆ ನೀಡಿದರು.
ಮಂಗಳೂರಿಗರು ಬಹು ಭಾಷಿಕರಾದರೂ ಕನ್ನಡದಲ್ಲೇ ಅವರು ಅಸ್ಮಿತೆಯನ್ನು ಕಂಡುಕೊಳ್ಳುತ್ತಾರೆ. ಇದು ಎಲ್ಲರಿಗೂ ಬರಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಗಳು, ಮಹತ್ವ, ಆಗಿರುವ ಕೆಲಸದ ಬಗ್ಗೆ ಹೇಳಿದರು.
ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡುತ್ತಿರುವ ಸಹಕಾರದ ಬಗ್ಗೆ ಹೇಳಿದರು.
ನ್ಯಾಯಮೂರ್ತಿ ವೀರಪ್ಪ ಅವರು ಹೇಳುವಂತೆ ನೀವುಗಳೆಲ್ಲ ನ್ಯಾಯಿಕ ಸೈನಿಕರು. ಜಡ್ಜ್ ಮೆಂಟ್ ಗಿಂತ ನ್ಯಾಯ ಕೊಡುವುದೇ ಮುಖ್ಯ. ನ್ಯಾಯವೇ ಸರ್ವ ಶ್ರೇಷ್ಠ ಎಂದರು.
ಸುಫಿಯಾ ಕಾಲೇಜು ಉತ್ತಮ ಕಾನೂನು ಕಾಲೇಜ್ ಆಗಿದೆ.ಇಲ್ಲಿನ ಪ್ರಾಂಶುಪಾಲರು, ಬೋಧಕರ ವ್ಯಕ್ತಿತ್ವವೇ ಒಂದು ಮಾದರಿಯಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರಾದ ಸಾ.ಚಿ.ರಾಜ್ ಕುಮಾರ್ ಮಾತನಾಡಿ, ನವೆಂಬರ್ ಪೂರಾ ಕನ್ನಡ ರಾಜ್ಯೋತ್ಸವ ಮಾಡುತ್ತಾರೆ. ಕನ್ನಡ ಉತ್ಸವದ ಹೆಸರಿನಲ್ಲಿ ಹಣ ಸಂಗ್ರಹ ಸಲ್ಲದು. ಭಾಷಣದಿಂದ ಕನ್ನಡ ಉದ್ಧಾರ ಆಗುವುದಿಲ್ಲ. ಕನ್ನಡದ ಬಳಕೆಯನ್ನು ಮಾಡುವುದರಿಂದ, ಬರೆಯುವುದರಿಂದ ಮಾತ್ರವೇ ಉಳಿಸಲು ಸಾಧ್ಯ ಎಂದರು.
ನ್ಯಾಯಾಧೀಶರಾದ ಕೆಂಪಗೌಡರು ಅವರು ಕೌಟುಂಬಿಕ ದೌರ್ಜನ್ಯ ಕುರಿತು ಪುಸ್ತಕ ಬರೆದರು. ಕನ್ನಡದ ಬಗ್ಗೆ ಪ್ರೀತಿ ಇರುವ ಅನೇಕ ನ್ಯಾಯಾಧೀಶರಿದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಇಲ್ಲವಾಗಿದೆ ಎಂದರು.
ಕೆಲವು ಹೋರಾಟಗಾರದಿಂದಲೇ ಕನ್ನಡ ಹಾಳಾಗುತ್ತಿದೆ. ಕನ್ನಡದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಪುಸ್ತಕ ಓದುವುದರಿಂದಲೇ ಕನ್ನಡ ಬೆಳೆಯುತ್ತದೆ ಎಂದರು.
ಕಾಲೇಜಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ನನಗೆ ಸಂತಸ ತಂದಿದೆ. ಹೆಣ್ಣು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಕಾನೂನು ಕಲಿತಿರುವುದು ಸಂತಸ ತಂದಿದೆ ಎಂದರು.
ಕ್ರಿಯೆ, ಪ್ರತಿಕ್ರಿಯೆ ಎರಡೂ ಈ ಕಾಲೇಜಿನಲ್ಲಿದೆ. ನಾವು ಸ್ವಾಂತನ ಕೇಂದ್ರ ನಡೆಸುತ್ತಿದ್ದೇವೆ. ಇಲ್ಲಿವರೆಗೂ 9500 ಪ್ರಕರಣಗಳನ್ನು ಬಗೆಹರಿಸಿದ್ದೇವೆ ಎಂದರು.
ಆಯ್ಕೆಯ ಸ್ವಾತಂತ್ರ್ಯ ಇರಬೇಕು. ಹೇರಿಕೆಯು ಪೊಲೀಸ್ ಭಾಷೆ. ಲಾ ಕಾಲೇಜಿನ ವಿದ್ಯಾರ್ಥಿಗಳು ಆರಂಭಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಇಡೀ ರಾಜ್ಯದ ಗಮನ ಸೆಳೆಯಿತು ಎಂದರು.
ನ್ಯಾಯಮೂರ್ತಿಗಳು ಹಾಗೂ ಜನರ ನಡುವಿನ ಮುಖಾಮುಖಿಯನ್ನು ಕಾನೂನು ಸೇವಾ ಪ್ರಾಧಿಕಾರ ಸಾಧ್ಯವಾಗಿಸಿದೆ. ನ್ಯಾಯಾಧೀಶೆ ನೂರುನ್ನೀಸಾ ಅವರು ಜಿಲ್ಲೆಯಲ್ಲಿ ಈ ವಿಷಯದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ ಎಂದರು.
ನಿಮ್ಮ ಪ್ರಾಂಶುಪಾಲರೇ ನಿಮಗೆ ಮಾದರಿ
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ರಮೇಶ್ ಅವರೇ ನಿಮಗೆ ಮಾದರಿಯಾಗಿದ್ದಾರೆ. ಕಾನೂನು ವಿಷಯದಲ್ಲಿ ತಜ್ಞರಾಗಿದ್ದಾರೆ. ಅವರ ಜೀವನವೇ ಒಂದು ಅನುಕರಣೀಯ ಎಂದರು.
ಫೆಮಿನಿಸ್ಟ್ ಆಗಬೇಕಿರುವರು ಯಾರು?
ಫೆಮಿನಿಸ್ಟ್ ಆಗಬೇಕಿರುವುದು ಮಹಿಳೆಯರಲ್ಲ, ಪುರುಷರು ಆಗಬೇಕಾಗಿದೆ. ಪುರುಷರಲ್ಲಿ ಮಹಿಳಾತನ ಗಟ್ಟಿಯಾಗಬೇಕು ಎಂದು ಪ್ರಾಂಶುಪಾಲ ಡಾ.ಎಸ್.ರಮೇಶ್ ತಿಳಿಸಿದರು.
ಹೆಣ್ಣು ಮಕ್ಕಳಿಗೆ ಪ್ರಾಧ್ಯಾನತೆ ಕೊಡಬೇಕು. ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದೆ ಎಂದರೆ ಕಾಲೇಜಿನ ಅಡ್ಮಿ಼ಷನ್ ಕಮಿಟಿಯಲ್ಲಿ ಇರುವವರೇ ಕಾರಣವಾಗಿದ್ದಾರೆ. ಅವರು ಹೆಣ್ಣು ಮಕ್ಕಳಿಗೆ ಪ್ರಾಧ್ಯಾನತೆ ನೀಡುತ್ತಾರೆ ಎಂದರು.
ಮಹಿಳಾ ಪ್ರಾಧ್ಯಾನತೆ ಬಗ್ಗೆ ಹೆಚ್ಚು ಮಾತನಾಡಿದ್ದು ನ್ಯಾಯಮೂರ್ತಿ ಚಂದ್ರಚೂಡ್. ಆದರೆ ಅವರಿದ್ದರೂ ಕೊಲೆಜಿಯಂ ನಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಧ್ಯಾನತೆ ಸಾಧ್ಯವಾಗಲಿಲ್ಲ ಎಂದರು.
ಹೆಚ್ಚು ಶೋಷಣೆ
ಅಮೆರಿಕ ಚುನಾವಣೆಯಲ್ಲಿ ಹ್ಯಾರಿಸ್ ಗೆದ್ದರೆ ದೊಡ್ಡ ಬದಲಾವಣೆಗೆ ಸಾಧ್ಯವಾಗಲಿದೆ. ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಶೋಷಣೆ ಇದೆ ಎಂದರು.
ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕು
ಮಹಿಳಾ ನ್ಯಾಯಧೀಶರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ಖಾಸಗಿ ಆಸ್ತಿ; ಚರ್ಚೆ ಬೇಕು
ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಖಾಸಗಿ ಸ್ವತ್ತು ಸರ್ಕಾರದ್ದು ಎಂದು ಹೇಳಿದರು. ಸಂವಿಧಾನದ 39 ಬಿ ರಾಜ್ಯದ ಸಂಪತ್ತಿನ ಬಗ್ಗೆ ಹೇಳುತ್ತದೆ. ಆದರೆ ನಿನ್ನೆ ಸುಪ್ರೀಂ ಕೋರ್ಟ್ , ರಾಜ್ಯಕ್ಕೆ ಅಧಿಕಾರ ಇಲ್ಲ ಎಂದಿದ್ದಾರೆ. ಇದು ಸಮಾಜವಾದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡರೆ ಸಂವಿಧಾನದ ಪೀಠಿಕೆಗೆ ಈ ತೀರ್ಪು ಏನು ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ನೀತಿಗೆ ಪೂರಕವಾಗಿ ನ್ಯಾಯಾಲಯಗಳು ಸ್ಪಂದಿಸಬೇಕೇ ಎಂಬ ಕುರಿತು ಚರ್ಚೆ, ಅಧ್ಯಯನ ಬೇಕಾಗಿದೆ ಎಂದು ಹೇಳಿದರು.
ಜಾಗತೀಕರಣಕ್ಕೆ ನ್ಯಾಯಾಲಯಗಳು ಹೊರತಾಗಿಲ್ಲವೇ ಎಂಬ ಪ್ರಶ್ನೆ ಮೂಡಿ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಸುಫಿಯಾ ಸುಲ್ತಾನ, ಉಪ ಪ್ರಾಂಶುಪಾಲರಾದ ಟಿ. ಓಬಯ್ಯ, ಪ್ರೊ. ಮಮತಾ, ಪ್ರೊ. ಸಿ.ಕೆ.ಮಹೇಂದ್ರ, ಪ್ರೊ. ಖಾಷಿಫ್, ಪ್ರೊ. ತರುಣಂ, ಪ್ರೊ. ಸುಬ್ರಹ್ಮಣ್ಯ ಇತರರು ಇದ್ದರು.
.