ಚಿಕ್ಕನಾಯಕನಹಳ್ಳಿ : ದಿನಾಂಕ.26.09.2024 ರ ಗುರುವಾರದಂದು ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಕುಂದು-ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿರಲಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಮತ್ತು ಇತ್ಯರ್ಥವಾಗದೇ ಉಳಿದಿರುವ ಅರ್ಜಿಗಳ ಬಗ್ಗೆ ಸಾರ್ವಜನಿಕರಿಂದ ಲಿಖಿತ ದೂರನ್ನು ಪಡೆದುಕೊಳ್ಳುವುದಕ್ಕಾಗಿ ಲೋಕಾಯುಕ್ತ-ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಪ್ರಪತ್ರ– 01 ಮತ್ತು ಪ್ರಪತ್ರ– 02 ರಲ್ಲಿ ಸಾರ್ವಜನಿಕರ ದೂರನ್ನು ಅಗತ್ಯ ದಾಖಲಾತಿಗಳೊಂದಿಗೆ ಇಲ್ಲಿ ಪಡೆದುಕೊಳ್ಳಲಾಗುವುದು.
ಸಾರ್ವಜನಿಕರ ಕುಂದು-ಕೊರತೆಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ತಾಲ್ಲೂಕು ಮಟ್ಟದ ಇಲಾಖಾವಾರು ಎಲ್ಲ ಅಧಿಕಾರಿಗಳು ನಿಗದಿಪಡಿಸಿದ ದಿನದಂದು, ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಲು ಸೂಚಿಸಲಾಗಿದೆ. ತತ್ಸಂಬಂಧ ಸಾರ್ವಜನಿಕರಿಂದ ತಮಗೆ ಸಲ್ಲಿಕೆಯಾಗಿರುವ ದೂರು ಮತ್ತು ಅರ್ಜಿಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳೊಂದಿಗೆ ತಾಲ್ಲೂಕು ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಸೂಚಿಸಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಪತ್ರಿಕಾ ಪ್ರಕಟಣೆ ನೀಡಿದೆ.
ಸಭೆಯಲ್ಲಿ ಸಿಗಲಿರುವ ಲೋಕಾಯುಕ್ತ ಅಧಿಕಾರಿಗಳು::
ಈ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮಿನಾರಾಯಣ ಎ ವಿ, ಪೊಲೀಸ್ ಉಪಾಧೀಕ್ಷಕ ಕೆ ಜಿ ರಾಮಕೃಷ್ಣ, ಪೊಲೀಸ್ ಉಪಾಧೀಕ್ಷಕ ಬಿ ಉಮಾಶಂಕರ್, ಪೊಲೀಸ್ ನಿರೀಕ್ಷಕ ಸುರೇಶ್ ಕೆ, ಪೊಲೀಸ್ ನಿರೀಕ್ಷಕ ಕೆ ರಾಮರೆಡ್ಡಿ, ಪೊಲೀಸ್ ನಿರೀಕ್ಷಕ ಬಿ ಮೊಹಮ್ಮದ್ ಸಲೀಂ, ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ’ಯವರು ಉಪಸ್ಥಿತರಿರುತ್ತಾರೆ ಎಂದು ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ ಎ ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
___ಸಂಚಲನ
ಚಿಕ್ಕನಾಯಕನ ಸೀಮೆಯಿಂದ