ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಜನತೆ ಏಳು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ನನ್ನ ಗೆಲುವಿಗೆ ಬಹು ಮುಖ್ಯ ಕಾರಣ ಕರ್ತರಾಗಿದ್ದಾರೆಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಮೆಲಿನವಳಗೇರಹಳ್ಳಿ ಗ್ರಾಮಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂಧನೆ ಹಾಗು ವಿವಿಧ ಬೇಡಿಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಚುನಾವಣೆಗಿಂತ ಈ ಬಾರಿ ನನಗೆ ಕಸಬಾ, ದಂಡಿನಶಿವರ ಮತ್ತು ಮಾಯಸಂದ್ರ ಹೋಬಳಿಯಲ್ಲಿ ಉತ್ತಮ ವೋಟ್ ನೀಡಿದ್ದಾರೆ. ಮಾಜಿ ಶಾಸಕ ಜಯರಾಮ್ ಎ.ಎಸ್ ಚುನಾವಣೆ ವೇಳೆ ಹೇಳುತ್ತಿದ್ದರು ಸಿ.ಎಸ್.ಪುರ ಹೋಬಳಿಯಲ್ಲಿ ನನಗೆ ಹೆಚ್ಚು ಮತ ನೀಡುತ್ತದೆ ಅಂತ.ಆದರೆ ಫಲಿತಾಂಶದ ದಿನ ಗೊತ್ತಾಗಿದ್ದು ಅಲ್ಲಿಯೂ ಪ್ರಜ್ಞಾವಂತ ಜನರಿದ್ದಾರೆ. ಹೆಚ್ಚಿನ ಮತಗಳನ್ನು ನನಗೇ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆಗಳು ಎಂದರು.
ಕಡಬಾ ಹೋಬಳಿಯ ಕಲ್ಲೂರ್ ಪಂಚಾಯಿತಿ ಪೈಕಿ ಉಳಿದೆಲ್ಲವೂ ಜೆಡಿಎಸ್ಗೆ ಹೆಚ್ಚಿನ ಮತಗಳನ್ನು ನೀಡಿರುವುದು ಅತ್ಯಂತ ಸಂತಸ ತಂದಿದೆ ಎಲ್ಲೊ ಒಂದು ಕಡೆ ನಾನು ಕ್ಷೇತ್ರದಲ್ಲಿ 15 ವರ್ಷ ಉತ್ತಮ ಆಡಳಿತ ಮಾಡಿ, ಜನಪರ ಸೇವೆ ಮಾಡಿದ್ದ ಜನರ ಮನದಲ್ಲಿ ಉಳಿದು ಬಿಟ್ಟಿದೆ.
ಬಂಧುಗಳೆ ಈ ಚುನಾವಣೆ ನನ್ನದಲ್ಲ. ಚುನಾವಣೆ ವೇಳೆ ನನ್ನಲ್ಲಿದ್ದ ಆರ್ಥಿಕ ಸಂಪತ್ತು ಆಕಸ್ಮಿಕವಾಗಿ ಕೈತಪ್ಪಿ ಹೋಗಿ ಸಂಕಷ್ಟದಲ್ಲಿದ್ದಾಗ ಕ್ಷೇತ್ರದ ಕಾರ್ಯಕರ್ತರು ನೀವು ದುಡ್ಡೇ ಕೊಡಬೇಡಿ ನಾವೆ ಎಲ್ಲ ಖರ್ಚು ಮಾಡಿ ಚುನಾವಣೆ ಮಾಡುತ್ತೇವೆ ಮತ್ತು ಗೆಲ್ಲಿಸುತ್ತೇವೆ ಎಂದು ನನಗೆ ಭರವಸೆ ಕೊಟ್ಟಿದ್ದರು. ಅದರಂತೆ ನಾನು ಗೆದ್ದಿದ್ದೇನೆ.ಇದು ಜೆಡಿಎಸ್ ಕಾರ್ಯಕರ್ತರ ಗೆಲುವು ನನ್ನದಲ್ಲ ನಾನು ನೆಪ ಮಾತ್ರ ಎಂದು ಭಾವುಕರಾದರು.
ಮೆಲಿನವಳಗೇರಹಳ್ಳಿಗೆ ಸುವರ್ಣ ಗ್ರಾಮ ಯೋಜನೆ ನೀಡಿದ್ದೇನೆ, ಹೇಮಾವತಿ ನಾಲಾ ಪಿಕಪ್ ಡ್ಯಾಮ್, ಸೇತುವೆ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಸರ್ಕಾರ ಬಂದಿದ್ದರೆ ಕ್ಷೇತಕ್ಕೆ ಅನುದಾನದ ಮಹಾಪೂರವೇ ಹರಿದು ಬರುತ್ತಿತ್ತು. ಆದರೂ ತಾಲ್ಲೂಕಿನ ಅಭಿವೃದ್ದಿಗೆ ನಾನು ಶ್ರಮವಹಿಸುತ್ತೇನೆ ಎಂದರು.
ಇದೇ ವೇಳೆ ಶಾಸಕರಿಗೆ ಗ್ರಾಮಸ್ಥರು ಮೆಲಿನವಳಗೇರಹಳ್ಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯಣ್ಣ ಮಾವಿನಕೆರೆ, ಶರತ್ ಕುಮಾರ್, ಬಿ.ಎಸ್.ದೇವರಾಜ್, ರಾಘು, ಎಂ.ಬಿ.ಹರೀಶ್, ಮಾವಿನಕೆರೆ ಪ್ರಸನ್ನ, ತ್ಯಾಗರಾಜ್, ಬಲರಾಮೇಗೌಡ, ಪಟೇಲ್ ಗೋಪಾಲ, ನಾಗರಾಜ, ಮೋಹನ, ಜಗದೀಶ್, ನಟರಾಜ್ ಹಾಗು ಗ್ರಾಮಸ್ಥರು ಪಾಲೊಂಡಿದ್ದರು.