ತಿಪಟೂರು: ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗಾಗಿ ಭೂಮಿ ಕೊಟ್ಟ ರೈತರಿಗೆ ಜಿಲ್ಲಾಧಿಕಾರಿಗಳ ನ್ಗಾಯಾಲಯದಲ್ಲಿ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ದೂರಿ ಭಾನುವಾರ ಕೇಂದ್ರ ಸಚಿವ ಎಸ್. ಸೋಮಣ್ಣ ಅವರಿಗೆ ರೈತರು ಮನವಿ ನೀಡಿದರು.
ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಆಗಿನ ಜಿಲ್ಲಾಧಿಕಾರಿಗಳು ಹಳ್ಳಿ ಹಳ್ಳಿಗೆ ಭೇಟಿ ನೀಡಿ ರೈತರಿಗೆ ವಚನ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಸರಿಯಾದ ರೀತಿಯಲ್ಲಿ ನ್ಯಾಯದಾನ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ರೈತ ಮುಖಂಡ ಕಲ್ಲೇಶ್ ಮಾತನಾಡಿ, ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಾಸನದ ಜಿಲ್ಲಾಧಿಕಾರಿಗಳು ಆಬ್ರಿಟ್ರೇಷನ್ ನ್ಯಾಯಾಲಯದಲ್ಲಿ ಹೆಚ್ಚುವರಿ ಪರಿಹಾರ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಏಕೆ ಹೀಗೆ ಮಾಡುತ್ತಿಲ್ಲ. ಸರಿಯಾದ ಪರಿಹಾರ ನೀಡಲಾಗಿದೆ ಎಂದು ಎಲ್ಲ ಕೇಸ್ ಗಳನ್ನು ವಜಾ ಮಾಡುತ್ತಾ ಬರಲಾಗುತ್ತಿದೆ ಎಂದು ನೊಂದು ನುಡಿದರು.
ಆಬ್ರಿಟ್ರೇಷನ್ ನ್ಯಾಯಾಲಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರಿಗೆ ಅಂತಹ ಶಕ್ತಿಯೂ ಇಲ್ಲ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಇಲ್ಲವೇ ಕೇಂದ್ರ ಸರ್ಕಾರದ ಕಾನೂನು ಇಲಾಖೆಯ ನೆರವಿನಲ್ಲಿ ಕೇಸುಗಳನ್ನು ನಡೆಸಿ ರೈತರಿಗೆ ನ್ಯಾಯ ಒದಗಿಸಲು ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ ಮಾರುಕಟ್ಟೆ ಬೆಲೆ ಕಂಡು ಹಿಡಿಯಲು ಸಮಿತಿ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಮಾರುಕಟ್ಟೆ ಬೆಲೆ ಕಂಡು ಹಿಡಿಯಲು ಜಿಲ್ಲಾಧಿಕಾರಿ ಅವರು ಸಮಿತಿ ನೇಮಕ ಮಾಡುವಂತೆ ಸೂಚನೆ ನೀಡಬೇಕು. ಈ ಸಂಬಂಧ ಸಮಿತಿ ನೇಮಕ ಮಾಡಲು ಸೂಚಿಸಬೇಕು ಎಂದು ಅವರು ಹೇಳಿದರು.