ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ-ಶೆಟ್ಟಿಕೆರೆ ಸರ್ಕಾರಿ ರಸ್ತೆಯ ಮಾರ್ಗಮಧ್ಯದಲ್ಲಿರುವ ಕೇದಿಗೆಹಳ್ಳಿ ಬಳಿ ಅರಣ್ಯ ಇಲಾಖೆಯ ರಹದಾರಿ ಇಲ್ಲದೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಮಾಲುಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ದುಗಡೀಹಳ್ಳಿ ಗ್ರಾಮವಾಸಿ ಚಿಕ್ಕನರಸಯ್ಯ ಬಿನ್ ಕೆಂಪಯ್ಯ (45) ಚಲಾಯಿಸುತ್ತಿದ್ದ ಕೆಎ-44-ಎಮ್-5578 ನಂಬರಿನ ಟ್ರಾಕ್ಟರ್ ಸರಕು ಸಾಗಣೆ ವಾಹನದಲ್ಲಿ 08 ತೇಗ, 03 ಹಲಸು ಹಾಗೂ 07 ಮಾವಿನ ಮರದ ದಿಮ್ಮಿಗಳು ಸೇರಿ ಒಟ್ಟು 18 ಮರದ ದಿಮ್ಮಿಗಳು ಮತ್ತು 13 ತೇಗದ ಮರದ ಪೋಲ್’ಗಳನ್ನು ಸಾಗಿಸಲಾಗುತ್ತಿತ್ತು. ಸುದ್ದಿ ತಿಳಿದ ಉಪ-ವಲಯ ಅರಣ್ಯಾಧಿಕಾರಿ ಟಿ ಡಿ ಗೌರಿಶಂಕರ್’ರವರು ವಲಯ ಅರಣ್ಯಾಧಿಕಾರಿ ಸಿ ಆರ್ ಅರುಣ್’ರವರ ಮಾರ್ಗದರ್ಶನದಲ್ಲಿ ಬಿ ಕೆ ದಿಲೀಪ್, ಹೆಚ್ ಕೆ ಶಿವಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕ ಡಿ ಎಸ್ ಪುನೀತ್’ರವರನ್ನು ಒಳಗೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಚಿಕ್ಕನಾಯಕನಹಳ್ಳಿ-ಶೆಟ್ಟಿಕೆರೆ ಸರ್ಕಾರಿ ರಸ್ತೆಯಲ್ಲಿನ ಕೇದಿಗೆಹಳ್ಳಿ ಬಳಿ ಟ್ರಾಕ್ಟರ್ ತಡೆದು ತಪಾಸಣೆ ನಡೆಸಿದ್ದಾರೆ. ಆಗ ಅರಣ್ಯ ಇಲಾಖೆಯ ರಹದಾರಿ ಇಲ್ಲದೆ ಮರದ ದಿಮ್ಮಿಗಳನ್ನು ಟ್ರಾಕ್ಟರ್’ನಲ್ಲಿ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಟ್ರಾಕ್ಟರ್ ಸರಕು ಸಾಗಣೆ ವಾಹನ ಹಾಗೂ ಅದರ ಚಾಲಕ ಚಿಕ್ಕನರಸಯ್ಯರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ವಲಯ ಕಚೇರಿಯಲ್ಲಿ ಅರಣ್ಯ ಸಂರಕ್ಷಣೆ ಕಾನೂನಿನ್ವಯ ಮೊಕದ್ದಮೆ ಸಂಖ್ಯೆ 10/2024-25 ನ್ನು ದಿನಾಂಕ.22.09.2024ರಂದು ದಾಖಲಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಅಮಾನತ್ತು ಮಾಡಿಕೊಳ್ಳಲಾಗಿರುವ ಸ್ವತ್ತಿನ ಮೌಲ್ಯ ಸರ್ಕಾರದ ಟೆಂಕಿ ತೀರುವಳಿ ದರದಂತೆ, 1ಲಕ್ಷ ರೂಪಾಯಿಗಳಿಗೂ ಹೆಚ್ಚಿನದ್ದು ಎಂದು ಅಂದಾಜಿಸಲಾಗಿದೆ.