ಮಳೆ ಬರೇ ಪ್ರೇಮಿಗಳಿಗೆ ನೆನಪನ್ನು ನೀಡುವುದಿಲ್ಲಾ.
ಕೂಲಿ ಮಾಡುವ ಜನರಿಗೆ ಒಂದು ಥರಾ, ಮಗುವಿನ
ತಾಯಿಗೆ ಒಂದು ಥರಾ, ವೈದ್ಯರಿಗೆ ಒಂದು ರೀತಿ, ಕಾಯಿಲೆ ತಾಯಿ ನರಳುವಾಗ ಒಂದು ರೀತಿ …. ಮಳೆ ಕಾಡುತ್ತದೆ ನಾನಾ ಥರ.
ಮತ್ತೆ ಮಳೆಯಾಗುತ್ತಿದೆ
******************
ಹುಯ್ಯುವ
ಮಳೆಯಲ್ಲಿ
ಅಮ್ಮನನ್ನು
ಆಸ್ಪತ್ರೆಗೆ ಕರೆದೊಯ್ಯುವಾಗ
ಉಂಟಾದ
ಅವ್ಯಕ್ತ ಭಯ…ಸೋರುತ್ತಿದ್ದ
ಹಂಚಿನ ಮನೆಯಲ್ಲಿ
ಸೊಳ್ಳೆ ಪರದೆ ಮೇಲೆ
ಹಾಕುತ್ತಿದ್ದ
ಗೋಣಿ ಚೀಲಗಳು…ಅಣ್ಣ ಬಂತಾ
ಎಂದು
ರಾತ್ರಿ ಮಳೆ ಸದ್ದಿನ ನಡುವೆ
ಕಾಯುತ್ತಿದ್ದ
ಲೂನಾ ಸದ್ದು …ಬರೇ ಸಣ್ಣ
ಜ್ವರಕ್ಕೆ
ಸುರಿಯುವ ಮಳೆಯಲ್ಲಿ
ಬಾಗಿಲು ತಟ್ಟಿದ
ಕಂದಮ್ಮನನ್ನು ಎತ್ತಿಕೊಂಡ
ತಲೆಗೆ ಸೆರಗು ಸುತ್ತಿದ
ತಾಯಿ…ಮಳೆಗೆ ನೆನೆದ
ಕುರಿ ತುಪ್ಪಟದ
ವಾಸನೆ..ಮಳೆಯಲ್ಲಿ
ಸಿಕ್ಕಿಕೊಂಡ
ಕಾರಿಗೆ
ಬ್ಯಾಟರಿ ಬೆಳಕು ಬಿಟ್ಟ
ಆಗಂತುಕ…ತಿರುಪತಿ ಬೆಟ್ಟದ
ಮೇಲೆ ನೀರಲ್ಲಿ ಕೊಚ್ಚಿ
ಬಂದ ಬಳೆ ಸರಗಳು…ಸಿಡಿಲಿಗೆ
ನಡುಗಿದ
ಕಿಟಕಿಯ ಗಾಜು …ಸಿಡಿಲಿಗೂ ..
ಜಡಿ ಮಳೆಗೂ ಜಗ್ಗದ
ಅಮ್ಮನ ಪಕ್ಕ
ಮಲಗಿದ ನಂತರ
ಬಂದನಿದ್ರೆ…
ಡಾII ರಜನಿ