ತುಮಕೂರು : ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರೈತರಿಗೆ ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರಸ್ತುತ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯಲ್ಲಿ ದೂರು ಬಂದರೂ ಮುಲಾಜಿಲ್ಲದೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ಪಾದಿಸಬಹುದಾದ ಬೆಳೆ ಪ್ರಮಾಣದ ವಾಸ್ತಾವಿಕ ಮಾಹಿತಿ ನೀಡಬೇಕು. ಇದರಿಂದ ಆಹಾರ ಧಾನ್ಯ ಕೊರತೆಯನ್ನು ಅಂದಾಜಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರಲ್ಲದೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಮಾ ಮೊತ್ತ ವಿತರಣೆಯಾಗಬೇಕು. ವಿಮಾ ಸೌಲಭ್ಯಕ್ಕೆ ಈವರೆಗೂ ನೋಂದಣಿಯಾಗದ ರೈತರಿಗೆ ಅರಿವು ಮೂಡಿಸಿ ರೈತರ ನೋಂದಣಿಗೆ ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದಿರುವುದರಿಂದ ಬೆಳೆ ನಷ್ಟ ಪರಿಸ್ಥಿತಿ ಎದುರಿಸಬೇಕಾಗುವುದಲ್ಲದೆ ಜಾನುವಾರುಗಳ ಮೇವಿಗೂ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಇರುವ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಿ ಮೇವು ಬೆಳೆಯಲು ಹುರಿದುಂಬಿಸಬೇಕು.
ಜಿಲ್ಲೆಯಲ್ಲಿ ಉಂಟಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಹೊರ ರಾಜ್ಯಗಳಲ್ಲಿ ಮೇವಿನ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬೇಕೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ|| ಗಿರೀಶ್ ಬಾಬು ರೆಡ್ಡಿ ಅವರಿಗೆ ಸೂಚನೆ ನೀಡಿದರು.